ದಾವಣಗೆರೆ
ಪೊಲೀಸರ ಸೇವೆಯನ್ನು ಜನರಿಗೆ ಸರಳವಾಗಿ ತಲುಪಿಸಿ, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸುವ ಉದ್ದೇಶದಿಂದ ಕೆಎಸ್‍ಪಿ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿ ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ರಾಜ್ಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿರುವ ಕೆಎಸ್‍ಪಿ ಮೊಬೈಲ್ ಆ್ಯಪ್ ಅನ್ನು ಕಳೆದ 2 ತಿಂಗಳ ಹಿಂದೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಗೃಹ ಸಚಿವರು ಹಾಗೂ ಪೊಲೀಸ್ ಮಹಾ ನಿರ್ದೇಶಕರು ಲೋಕಾರ್ಪಣೆ ಮಾಡಿದ್ದು, ಈ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಜಾಗೃತಿಯೂ ಮೂಡಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಮೊಬೈಲ್‍ಗಳಲ್ಲಿ ಗೂಗಲ್ ಪ್ಲೇಸ್ಟೋರ್ ಹಾಗೂ ಆ್ಯಪಲ್ ಪ್ಲೇಸ್ಟೊರ್‍ನಲ್ಲಿ ಈ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಆಗ ಮೊಬೈಲ್‍ನಲ್ಲಿ ಅಪ್ಲಿಕೇಷನ್ ಓಪನ್ ಆದಮೇಲೆ ತಮಗೆ ಬೇಕಾಗಿರುವ ಕನ್ನಡ ಅಥವಾ ಇಂಗ್ಲೀಷ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ವ್ಯಕ್ತಿ ಇರುವ ಹತ್ತಿರದ ಪೊಲೀಸ್ ಠಾಣೆ ಹಾಗೂ ಆ ಪ್ರದೇಶಕ್ಕೆ ಸಂಬಂಧಿಸಿದ ಪೊಲೀಸ್ ಠಾಣೆಯ ಮಾಹಿತಿ ಲಭ್ಯವಾಗಲಿದೆ. ಅಲ್ಲಿ ನಡೆದಿರುವ ಘಟನೆಗಳ ವರದಿಯನ್ನು ಮೊಬೈಲ್‍ನಲ್ಲಿ ಅಪ್‍ಲೋಡ್ ಮಾಡಿದರೆ, ನಮ್ಮ ಕಂಟ್ರೋಲ್ ರೂಮ್‍ಗೆ ಆ ಸಂದೇಶ ತಲುಪುತ್ತಿದ್ದಂತೆಯೇ, ಆ ಘಟನೆಯ ಬಗ್ಗೆ ಪರಿಶೀಲಿಸಿ ಇಲಾಖೆ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಈ ಆ್ಯಪ್‍ನಲ್ಲಿ ಎಸ್‍ಒಎಸ್ ಸೇವೆ ಇದ್ದು, ಈ ಸೇವೆಯಲ್ಲಿ ಆ್ಯಪ್ ಹೊಂದಿರುವ ವ್ಯಕ್ತಿಯು ತನ್ನ ಪೋಷಕರು ಹಾಗೂ ಆಪ್ತರ ಯಾವುದಾದರು ಐದು ನಂಬರ್‍ಗಳನ್ನು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದ್ದು, ಅಕಸ್ಮಾತ್ ಈ ವ್ಯಕ್ತಿಯು ಯಾವುದಾದರು ತೊಂದರೆಗೆ ಸಿಲುಕಿಕೊಂಡಿದ್ದರೆ, ಏಕ ಕಾಲದಲ್ಲಿಯೇ ಈ ಐವರಿಗೂ ಕರೆ ಮಾಡಲು ಹಾಗೂ ಸಂದೇಶ ಕಳುಹಿಸಬಹುದಾಗಿದೆ. ಈ ಬಗ್ಗೆ ಪೋಷಕರು ಆಪ್ತರು ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಿ ಆ ವ್ಯಕ್ತಿಯನ್ನು ತೊಂದರೆಯಿಂದ ಹೊರತರಲು ಸಹಕಾರಿಯಾಗಲಿದೆ. ಅಲ್ಲದೆ, ಈ ಆ್ಯಪ್‍ನಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಸಹ ಅಳವಡಿಸಲಾಗಿದ್ದು, ತಮಗೆ ಬೇಕಾಗಿರುವ ಠಾಣೆಯ ನಂಬರ್ ಪಡೆದು ಮಾಹಿತಿ ನೀಡಲು ಸಹಕಾರಿಯಾಗಲಿದೆ. ಅಷ್ಟೆಯಲ್ಲದೇ, ಪೊಲೀಸ್, ಅಗ್ನಿಶಾಮಕ ದಳ, ಅಂಬ್ಯುಲೇನ್ಸ್, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೂ ತುರ್ತು ಕರೆ ಮಾಡುವ ಅವಕಾಶ ನೀಡಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ, ವಿಐಪಿ ಸಂಚಾರದ ವೇಳೆಯಲ್ಲಿ ಪೊಲೀಸ್ ಇಲಾಖೆ ರಸ್ತೆ ಸಂಚಾರವನ್ನು ಬಂದ್ ಮಾಡಿರುವ ಬಗ್ಗೆ ಹಾಗೂ ಕಾಣೆಯಾದವರ ಬಗ್ಗೆ ಇಲಾಖೆಯಿಂದ ಮೊಬೈಲ್‍ಗಳಿಗೆ ನೋಟೀಫಿಕೇಷನ್ ಸಹ ಪ್ರಕಟ ಗೊಳ್ಳುತ್ತಿರುತ್ತವೆ ಎಂದು ಅವರು ವಿವರಿಸಿದರು.
ಈ ಆ್ಯಪ್ ಹೊಂದಿರುವ ವ್ಯಕ್ತಿಯು ಸರಗಳ್ಳತನ, ರಸ್ತೆ ಅಪಘಾತ, ಮನೆಗಳ್ಳತನ, ಮಾನವ ಕಳ್ಳ ಸಾಗಾಣೆ, ಜೇಬುಕಳ್ಳತನ, ರ್ಯಾಗಿಂಗ್, ಹುಡುಗಿಯರನ್ನು ಚೂಡಾಯಿಸುವುದು ಸೇರಿದಂತೆ ಇತರೆ ಪ್ರಕರಣಗಳಿಗೆ ಸಂಬಂಧಪಟ್ಟ ಧ್ವನಿಮುದ್ರಿಕೆ, ಫೋಟೊ, ವಿಡಿಯೋಗಳನ್ನು ಆ್ಯಪ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಹೀಗೆ ಕಳುಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕರಣದ ಕುರಿತು ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಆದ್ದರಿಂದ ಸಾರ್ವಜನಿಕರು ಈ ಆ್ಯಪ್‍ನ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್, ಸಿಪಿಐ ಶಂಕರ್ ಮತ್ತಿತರರು ಹಾಜರಿದ್ದರು.








