ಪಾಲಿಕೆ: ಅನುಮತಿ ಪತ್ರಕ್ಕೆ ಮುಗಿಬಿದ್ದ ಅಭ್ಯರ್ಥಿಗಳು

ತುಮಕೂರು:

      ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ (ಆಗಸ್ಟ್ 24) ‘ವರಮಹಾಲಕ್ಷ್ಮಿ ಹಬ್ಬ’ದ ಹಿನ್ನೆಲೆಯಲ್ಲಿ ದಿನನಿತ್ಯದಂತೆ ಸಾರ್ವಜನಿಕರ ಸಂಚಾರ ಇಲ್ಲದೆ ‘ಬಿಕೋ’ ಎನ್ನುವ ವಾತಾವರಣ ಕಂಡುಬಂದಿತಾದರೂ, ಇದೇ ಆಗಸ್ಟ್ 31 ರ ಶುಕ್ರವಾರ ನಡೆಯಲಿರುವ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಂದ ಪಾಲಿಕೆ ಕಚೇರಿ ಗಿಜಿಗಿಜಿ ಅನ್ನುತ್ತಿತ್ತು.

      ಕಣದಲ್ಲಿರುವ ಎಲ್ಲ ಸ್ಪರ್ಧಾಳುಗಳಿಗೂ ಚುನಾವಣಾ ಆಯೋಗ ‘‘ಗುರುತು ಪತ್ರ’’ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಪಡೆದುಕೊಳ್ಳಲು ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪಾಲಿಕೆ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನದವರೆಗೂ ಇವರು ಮತ್ತು ಇವರ ಜೊತೆಗಾರರಿಂದ ಪಾಲಿಕೆ ಕಚೇರಿ ತುಂಬಿಹೋಗಿತ್ತು. 

ಅಭ್ಯರ್ಥಿಗಳಿಗೆ ಗುರುತುಪತ್ರ:

      ಆಯೋಗದಿಂದಲೇ ನಿಗದಿತ ಫಾರಂ ನೀಡಲಿದ್ದು, ಅದಕ್ಕೆ ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ, ಅಲ್ಲಿ ಕೇಳಿರುವ ವಿವರಗಳನ್ನು ಭರ್ತಿಮಾಡಿ ಕೊಟ್ಟರೆ ಸಂಬಂಧಿಸಿದ ವಾರ್ಡ್ನ ಚುನಾವಣಾಧಿಕಾರಿಗಳು ಅದಕ್ಕೆ ಸಹಿ ಮಾಡಿ-ಸೀಲು ಹಾಕಿ ಅಧಿಕೃತ ‘‘ಗುರುತುಪತ್ರ’’ ಕೊಡುತ್ತಾರೆ. ಇದಕ್ಕಾಗಿ ಎಲ್ಲ ಸ್ಪರ್ಧಾಳುಗಳೂ ಪ್ರಯತ್ನಿಸಿದರು.

ಏಕಗವಾಕ್ಷಿ ವ್ಯವಸ್ಥೆ:

      ಇದಲ್ಲದೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪಾಲಿಕೆಯ ಪಶ್ಚಿಮ ಭಾಗದ ಪ್ರವೇಶ ದ್ವಾರದಲ್ಲಿ ‘‘ಏಕಗವಾಕ್ಷಿ’’ (ಸಿಂಗಲ್ ವಿಂಡೋ) ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣಾ ಪ್ರಚಾರಕ್ಕೆ ಬೇಕಾದ ಕರಪತ್ರ ಮುದ್ರಿಸಲು, ಆಟೋ ಪ್ರಚಾರ ನಡೆಸಲು, ಧ್ವನಿವರ್ಧಕ ಬಳಸಲು ಇತ್ಯಾದಿಗಾಗಿ ಪ್ರತಿ ಅಭ್ಯರ್ಥಿಯೂ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಕಾರಣದಿಂದ ಅನುಮತಿ ಪಡೆಯಲು ಅಭ್ಯರ್ಥಿಗಳು ಮತ್ತು ಅವರ ಜೊತೆಗಾರರು ಮುಗಿಬಿದ್ದರು.

      ‘‘ಏಕಗವಾಕ್ಷಿ’’ ಯಲ್ಲಿರುವ ಸಿಬ್ಬಂದಿ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವರು. ಬಳಿಕ ಅದನ್ನು ಆಯಾ ವಾರ್ಡ್ಗೆ ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಸಿಬ್ಬಂದಿಯೇ ತಲುಪಿಸುವರು. ಅವರ ಸಹಿ ಪಡೆದು ಬಳಿಕ ಈ ‘‘ಏಕ ಗವಾಕ್ಷಿ’’ ಮೂಲಕವೇ ಸದರಿ ಅಭ್ಯರ್ಥಿಗಳಿಗೆ ಅನುಮತಿ ಪತ್ರ ತಲುಪಿಸುವರು. ಇದರಿಂದ ಅಭ್ಯರ್ಥಿಗಳು ಅಲೆದಾಡುವುದು ತಪ್ಪಿದಂತಾಗಿದೆ ಎಂದು ಮೂಲಗಳು ಹೇಳಿವೆ.

ಬಿರುಸಿನ ಪ್ರಚಾರ:

      ತುಮಕೂರು ಮಹಾನಗರ ಪಾಲಿಕೆಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಆಯಾ ವಾರ್ಡ್ಗಳಲ್ಲಿ ಮತದಾರರ ಮನವೊಲಿಕೆಗೆ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.

      ಆಗಸ್ಟ್ 23 ರಂದು (ಗುರುವಾರ) ನಾಮಪತ್ರ ವಾಪಸ್ಗೆ ಅವಕಾಶ ನಿಗದಿಯಾಗಿತ್ತು. 50 ನಾಮಪತ್ರಗಳು ಹಿಂಪಡೆಯಲ್ಪಟ್ಟಿವೆ. ಅಂತಿಮವಾಗಿ ಇದೀಗ 35 ವಾರ್ಡ್ಗಳಿಂದ ಒಟ್ಟಾರೆ 215 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇದೇ ಆಗಸ್ಟ್ 31 ರಂದು (ಶುಕ್ರವಾರ) ಚುನಾವಣೆ ನಡೆಯಲಿದೆ. ಬರೋಬ್ಬರಿ 7 ದಿನಗಳಷ್ಟೇ ಬಾಕಿ ಉಳಿದಿದೆ. ಈ ಕಾರಣದಿಂದ ಅಭ್ಯರ್ಥಿಗಳು ಚುರುಕಿನ ಪ್ರಚಾರ ನಡೆಸತೊಡಗಿದ್ದಾರೆ. ಹಗಲು ರಾತ್ರಿ ಎನ್ನದೆ ಓಡಾಡತೊಡಗಿದ್ದಾರೆ. ಪುರುಷ ಅಭ್ಯರ್ಥಿಗಳು ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ.

      ಮಹಿಳಾ ಅಭ್ಯರ್ಥಿಗಳು ಸಹ ತಮ್ಮ ಸಂಗಡಿಗರೊಂದಿಗೆ, ಪಕ್ಷದ ಕಾರ್ಯಕರ್ತರೊಂದಿಗೆ ಮನೆಮನೆಗೆ ಭೇಟಿ ಕೊಡುತ್ತಿದ್ದಾರೆ. ಮಹಿಳಾ ಅಭ್ಯರ್ಥಿ ಇರುವೆಡೆ ‘‘ಪತಿರಾಯರು’’ ಅಥವಾ ‘‘ಅವರ ಕುಟುಂಬದ ಇತರರು’’ ಪ್ರಚಾರದ ನೇತೃತ್ವ ವಹಿಸುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದೂ ನಗರಾದ್ಯಂತ ಪ್ರಚಾರ ನಡೆದಿತ್ತು.

ಪಾಲಿಕೆ ಇಂಜಿನಿಯರ್ ಪತಿ, ನೌಕರರ ಪುತ್ರಿ ಕಣದಲ್ಲಿ:

      ಈ ಬಾರಿ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ವಿಷಯಗಳು ಪಾಲಿಕೆ ಕಚೇರಿಯೊಳಗೆ ಮತ್ತು ಹೊರಗೆ ಕುತೂಹಲದ ಚರ್ಚೆಗೆ ಒಳಗಾಗಿದೆ.

      ‘‘ಹಿಂದುಳಿದ ವರ್ಗ (ಎ)’’ ಮೀಸಲಾತಿ ಹೊಂದಿರುವ ನಗರದ 30 ನೇ ವಾರ್ಡ್ನಿಂದ (ವಿಜಯನಗರ) ಬಿಜೆಪಿಯ ಅಭ್ಯರ್ಥಿಯಾಗಿ ಎಂ.ವೈ.ರುದ್ರೇಶ್ ಸ್ಪರ್ಧಿಸಿದ್ದು, ಇವರ ಪತ್ನಿ ಪ್ರಸ್ತುತ ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

      ಇದೇ ರೀತಿ ನಗರದ 12 ನೇ ವಾರ್ಡ್ (ನಜರಾಬಾದ್) ‘‘ಸಾಮಾನ್ಯ’’ ಮೀಸಲಾತಿ ಹೊಂದಿದ್ದು ಈ ವಾರ್ಡ್ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆರ್.ನಳಿನ ಸ್ಪರ್ಧಿಸಿದ್ದು, ಇವರ ತಂದೆ ಮಹಾನಗರ ಪಾಲಿಕೆಯ ನೀರುಪೂರೈಕೆ ವಿಭಾಗದಲ್ಲಿ ಆಪರೇಟರ್ ಆಗಿದ್ದಾರೆ.

ಅಕ್ಕ-ಪಕ್ಕದ ವಾರ್ಡ್ಗಳಿಂದ ಪತಿ ಬಿಜೆಪಿ, ಪತ್ನಿ ಪಕ್ಷೇತರ:

      ಒಂದು ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪತಿ ಸ್ಪರ್ಧಿಸಿದ್ದರೆ, ಪಕ್ಕದ ವಾರ್ಡ್ನಿಂದ ಪಕ್ಷೇತರರಾಗಿ ಅವರ ಪತ್ನಿ ಕಣಕ್ಕಿಳಿದಿರುವುದು ಮತ್ತೊಂದು ಸ್ವಾರಸ್ಯದ ಸಂಗತಿಯಾಗಿದ್ದು, ಈಗ ನಗರಾದ್ಯಂತ ಕುತೂಹಲ ಕೆರಳಿಸಿದೆ. ‘‘ಸಾಮಾನ್ಯ’’ ಮೀಸಲಾತಿ ಹೊಂದಿರುವ 12 ನೇ ವಾರ್ಡ್ (ನಜರಾಬಾದ್)ನಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಶಂಕರ್ ಕಣಕ್ಕಿಳಿದಿದ್ದಾರೆ. ಆದರೆ ಇವರ ಪತ್ನಿ ಟಿ.ಗೀತಾ ಅವರು ‘‘ಸಾಮಾನ್ಯ ಮಹಿಳೆ’’ ಮೀಸಲಾತಿ ಹೊಂದಿರುವ ಪಕ್ಕದ 12 ನೇ ವಾರ್ಡ್ (ಕುರಿಪಾಳ್ಯ) ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಪತಿ-ಪತ್ನಿಯರ ಈ ಸ್ಪರ್ಧೆ ಸಹಜವಾಗಿಯೆ ಎಲ್ಲರ ಗಮನ ಸೆಳೆದಿದೆ.

ಪಕ್ಷೇತರರಾಗಿ ಮಾಜಿ ಮೇಯರ್, ಮಾಜಿ ಅಧ್ಯಕ್ಷೆ

      ನಗರದ 18 ನೇ ವಾರ್ಡ್ (ಬನಶಂಕರಿ) ‘‘ಸಾಮಾನ್ಯ ಮಹಿಳೆ’’ಗೆ ಮೀಸಲಾಗಿದ್ದು, ಇಲ್ಲಿಂದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕಾಂಗ್ರೆಸ್ನ ಕೆ.ಜಿ.ಗೀತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇನ್ನು ಈ ಹಿಂದಿನ ನಗರಸಭೆಯಲ್ಲಿ ಅಧ್ಯಕ್ಷೆ  ಆಗಿದ್ದ ಕಾಂಗ್ರೆಸ್ಸಿನ ಟಿ.ಎಸ್.ದೇವಿಕಾ ಅವರು ನಗರದ 28 ನೇ ವಾರ್ಡ್ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ವಾರ್ಡ್ ‘‘ಸಾಮಾನ್ಯ’’ ಮೀಸಲಾತಿ ಹೊಂದಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link