ಹುಳಿಯಾರು:
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ,
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ,
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ,
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ,
ಅಲ್ಲೆ ಆ ಕಡೆ ನೋಡಲಾ, ಅಲ್ಲೆ ಕೊಡಗರ ನಾಡಲಾ, ಅಲ್ಲೆ ಕೊಡಗರ ಬೀಡಲಾ
ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಕೊಡಗಿನ ಪ್ರಕೃತಿ ಸಿರಿಯನ್ನು ಬಣ್ಣಿಸಿದ್ದಾರೆ.
ಹೌದು ಮುಂಗಾರು ಮಳೆ ಪ್ರಕೃತಿ ಪ್ರಿಯರು ಮೂಕ ವಿಸ್ಮಿತರನ್ನಾಗುವಂತೆ ಕೊಡಗನ್ನು ಸಿಂಗರಿಸುತ್ತದೆ. ಭೂಮಿಗಿಳಿದು ತುಂಟಾಟ ಆಡುವ ಮೋಡಗಳ ವೈಯಾರ, ಕಾಫಿ ಗಿಡಗಳ ಎಲೆಯ ಮೇಲೆ ಮಂಜಿನ ಹನಿಗಳ ತುಂಟಾಟ, ಗುಡ್ಡಕ್ಕೂ ಸವಾಲೊಡ್ಡುವಂತೆ ಎತ್ತರೆತ್ತರಕ್ಕೆ ಬೆಳೆದಿರುವ ಮರಗಳು, ಹೆಬ್ಬಾವಿನಂತೆ ಮಲಗಿರುವ ರಸ್ತೆಗಳು, ಗುಡ್ಡಗಳಿಂದ ಜುಳುಜುಳು ನಿನಾದದೊಂದಿಗೆ ದುಮ್ಮಿಕ್ಕುವ ಝರಿಗಳು ವಾಹ್! ಬಣ್ಣಿಸಲಸಾಧ್ಯವಾದ ಅನುಭವಿಸಿಯೇ ತೀರುವ ಪ್ರಕೃತಿ ಸೊಬಬು ಕೊಡಗಿನದು.
ಪ್ರಕೃತಿ ಪ್ರಿಯರ ಈ ತಾಣದ ಮೇಲೆ ಅದ್ಯಾರ ಕಾಕ ದೃಷ್ಠಿ ಬಿತ್ತೋ ಏನೋ ಈ ಬಾರಿಯ ಮಳೆ ಕೊಡಗು ಚಿತ್ರಣವನ್ನೇ ಬದಲಾಯಿಸಿದೆ. ಗುಡ್ಡಗಳು, ದಿಬ್ಬಗಳು ಛಿದ್ರವಾಗಿ ಕುಸಿದಿವೆ. ಮನೆಗಳನ್ನು ಭೂಮಿ ನುಂಗಿಕೊಂಡಿದೆ. ನಿರಾಶ್ರಿತರ ಶಿಬಿರಕ್ಕೂ ಬಾರದಂತೆ ರಸ್ತೆ ಹದಗೆಟ್ಟಿದೆ. ನದಿ ನೀರಿನೊಂದಿಗೆ ಅಲ್ಲಿನ ಜನರ ಕಣ್ಣೀರೂ ಒಂದಾಗಿ ಹರಿಯುತ್ತಿದೆ. ಮನುಷ್ಯರದ್ದು ಒಂದು ಬಗೆಯ ಆತಂಕವಾದರೆ, ಪ್ರಾಣಿಗಳ ಮೂಕ ವೇದನೆ ಮತ್ತೊಂದು ಕಡೆ. ಇದು ಕೊಡಗಿನ ಪ್ರಸ್ತುತ ಚಿತ್ರಣ.
ಮಾಧ್ಯಮಗಳು ಮಳೆಯ ರೌದ್ರನರ್ತನದಿಂದ ಕಂಗ್ಗೆಟ್ಟಿರುವ ಕೊಡಗರ ದುಸ್ಥಿತಿಯನ್ನು ಕಣ್ಮುಂದೆ ಕಟ್ಟಿಕೊಟ್ಟ ಪರಿಗೆ ಹುಳಿಯಾರಿನ ಹೃದಯಗಳು ಮಿಡಿದವು. ಅಕ್ಕಿ, ಬೆಡ್ ಶೀಟ್, ಲುಂಗಿ, ಚಾಪೆ, ನ್ಯಾಪ್ ಕಿನ್, ಛತ್ರಿ, ಔಷಧಿ, ಬಕೇಟ್, ತಟ್ಟೆ, ಲೋಟ, ಹಣ್ಣು, ತರಕಾರಿ, ಸೋಪು, ಪೇಸ್ಟು, ಶಾಂಪು, ಕೊಬ್ಬರಿ ಎಣ್ಣೆ, ಬಟ್ಟೆ. ಟೋಪಿ, ಸ್ವೆಟರ್, ಹೀಗೆ ಬರೋಬ್ಬರಿ ಒಂದು ಲಾರಿ ಲೋಡ್ ಅಗತ್ಯ ವಸ್ತುಗಳನ್ನು ಉದಾರವಾಗಿ ನೀಡಿ ಮಾನವೀಯತೆ ಪ್ರದರ್ಶಿಸಿದರು.
ಸಂಗ್ರಹವಾದ ಸಾಮಗ್ರಿಗಳನ್ನು ಅರ್ಹರಿಗೆ ಖುದ್ದು ತಲುಪಿಸುವ ನಿಟ್ಟಿನಲ್ಲಿ ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಹವ್ಯಾಸಿ ಚಾರಣಿಗರು ಟೊಂಕ ಕಟ್ಟಿ ನಿಂತರು. ಲಾರಿಯೊಂದಿಗೆ ಕೊಡಗು ನೆರೆ ಪೀಡಿತ ಪ್ರದೇಶಕ್ಕೆ ಧಾವಿಸಿದರು. ಆದರೆ ಬೆಂಕಿ ಬಿದ್ದ ಮನೆಯಲ್ಲಿ ಮೈಕಾಯಿಸಿ ಕೊಂಡಂತೆ ಮಧ್ಯವರ್ತಿಗಳ ಹಾವಳಿ ಎದುರಿಸುವಂತಾಯಿತು. ಕುಶಾಲನಗರದಿಂದ ಕೊಡಗಿನ ದಾರಿಯುದ್ದಕ್ಕೂ ಪರಿಹಾರ ಸಾಮಗ್ರಿಗಳು ಅನರ್ಹರ ಪಾಲಾಗುತ್ತಿದ್ದು ಬನ್ನಿ ಅರ್ಹರನ್ನು ತೋರಿಸುತ್ತೇವೆ ಎಂಬ ಕಳ್ಳಾಟವಾಡಿ ತಮ್ಮ ಕಾಫಿ ಎಸ್ಟೇಟ್ನ ಕೂಲಿಕಾರರ ಬಳಿಗೂ, ರಾಜಕಾರಣಿಗಳು ತಮ್ಮ ಓಟ್ ಬ್ಯಾಂಕ್ ಕೇಂದ್ರಕ್ಕೂ, ಕೆಲವರು ತಮ್ಮ ಗೋಡನ್ ಗೂ ಇಳಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸಿದರು.
ಮಾಧ್ಯಮಗಳಲ್ಲಿ ಕಾಳದಂಧೆಕೋರರ ಬಗ್ಗೆ ಸುಳಿವು ಅರಿತ ತಂಡ ಇವರ ಮೊಸಳೆ ಕಣ್ಣೀರಿಗೆ ಮನಸೋಲದೆ ಅರ್ಹ ಫಲಾನುಭವಿಗಳ ಶೋಧ ಕಾರ್ಯಕ್ಕೆ ಇಳಿಯಿತು. ಮಡಿಕೇರಿಯಲ್ಲಿ ಜೀಪ್ ಏರಿ ಭೂಕುಸಿತ ಪ್ರದೇಶಕ್ಕೆ ಮಳೆಯಲ್ಲೇ ನುಗ್ಗಿತು. ಇಡೀ ದಿನ ಕೊಡಗು ಸುತ್ತಿದ ತಂಡ ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಮದೆನಾಡು, ಜೋಡುಪಾಲ, ಮಣ್ಣಂಗೇರಿ, ಬೆಟ್ಟತ್ತೋರು ಗ್ರಾಮಗಳ ನಿವಾಸಿಗಳನ್ನು ಖುದ್ದು ಬೇಟಿಯಾಗಿ ಆಕ್ರಂದನವನ್ನು ಆಲಿಸಿತು. ಗುಡ್ಡ ಕುಸಿತದಿಂದ ರಸ್ತೆ, ಗದ್ದೆ, ತೋಟ, ಮನೆಗಳು ಕೊಚ್ಚಿಹೋಗಿ ಬೀದಿಗೆ ಬಿದ್ದಿರುವವರ ದುಸ್ಥಿತಿ ಕಂಡು ಮಮ್ಮಲ ಮರುಗಿದರು. ನಮ್ಮೂರಿನ ಸಹೃದಯಿಗಳು ನೀಡಿದ ಸಾಮಗ್ರಿಗಳು ಇವರಿಗೆ ತಲುಪಿದರೆ ಸಾರ್ಥಕ ಎಂದು ನಿರ್ಧರಿಸಿ ಮಳೆಯನ್ನೂ ಲೆಕ್ಕಿಸದೆ ವಿತರಿಸಿ ಧನ್ಯತರಾದರು.
ಹವ್ಯಾಸಿ ಚಾರಣಿಗರಾದ ಪೇಪರ್ ಕಿರಣ್, ಲೇತ್ ರಂಗನಾಥ್, ಮೆಡಿಕಲ್ ಶ್ರೀನಿವಾಸ್, ಕೆ.ಸಿ.ಪಾಳ್ಯ ಉಮೇಶ್, ಕರವೇಯ ಕೋಳಿಶ್ರೀನಿವಾಸ್, ಅಂಜನಕುಮಾರ್, ಚನ್ನಬಸವಯ್ಯ, ಸಿದ್ದೇಶ್, ನವೀನ್, ಹರೀಶ್, ಕುಮಾರ್, ಬಸವರಾಜು, ದಿವಾಕರ, ಜಯಕರ್ನಾಟಕದ ಮೋಹನ್ ಕುಮಾರ್ ರೈ, ಕಾರ್ಗಿಲ್ ಸತೀಶ್, ಡಾ.ಭೈರೇಶ್, ನಾಗರಾಜು ಮತ್ತಿತರರು ಇದ್ದರು.