ಚಳ್ಳಕೆರೆ
ತಾಲ್ಲೂಕಿನಾದ್ಯಂತ ಸುಮಾರು 1.500 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಇದ್ದು, ಇಲ್ಲಿಯ ತನಕ ಯಾವುದೇ ರೀತಿಯ ರೋಗದ ಸೊಂಕಿಲ್ಲದೆ ಮೆಕ್ಕೆಜೋಳದ ಬೆಳೆ ಸಮೃದ್ದಿಯಾಗಿ ಬೆಳೆದಿದ್ದು, ರೈತರು ಈ ಬಾರಿ ಮೆಕ್ಕೆಜೋಳ ಬೆಳೆಯಲ್ಲಿ ಲಾಭವನ್ನು ಪಡೆಯುವ ನಿರೀಕ್ಷೆ ಇತ್ತು. ಹೆಚ್ಚಾಗಿ ಪರಶುರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರೈತರು ಮೆಕ್ಕೆಜೋಳದ ಬೆಳೆಯನ್ನೇ ಆಶ್ರಯಿಸಿದ್ದಾರೆ.
ಆದರೆ, ಪ್ರಕೃತಿಯ ವೈಪಲ್ಯದಿಂದಾಗಿ ಕಳೆದ ಮೂರ್ನಾಲ್ಕು ದಿನದಿಂದ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆಗಳ ಪರಿಶೀಲನೆ ಸಂದರ್ಭದಲ್ಲಿ ಆಗಂತಕಾರಿ ಅಂಶ ಬೆಳಕಿಗೆ ಬಂದಿದ್ದು, ಕೆಲವೆಡೆ ಮೆಕ್ಕೆಜೋಳದ ಸುಳಿಯಲ್ಲಿ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಸೈನಿಕ ಹುಳುಗಳು ಇರುವುದು ಕಂಡು ಬಂದಿದೆ. ಕೂಡಲೇ ಅಧಿಕಾರಿಗಳು ಮತ್ತು ರೈತ ವೃಂದ ಮಾಹಿತಿ ಪಡೆದು ಮೆಕ್ಕೆಜೋಳದಲ್ಲಿನ ಸೈನಿಕ ಹುಳುವನ್ನು ನಾಶಪಡಿಸಲು ಕೃಷಿ ಇಲಾಖೆ ಕಾಯೋನ್ಮುಖವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ತಿಳಿಸಿದ್ದಾರೆ.
ಮೆಕ್ಕೆಜೋಳದ ಸುಳಿಯಲ್ಲಿ ಕಂಡು ಬರುವ ಸೈನಿಕ ಹುಳುಗಳ ನಿವಾರಣೆಗೆ ಬೇವಿನ ಹಿಂಡಿಯ ಜೊತೆಗೆ ಅಜಾಡಿರೇಕ್ಟಿನ್, ಕ್ಪಿನಾಲೋಫಾಸ್, ಕ್ಲೋರೋಪೈರಿಫಾಸ್ ಮುಂತಾದ ಕೀಟನಾಶಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಅದನ್ನು ಕೂಡಲೇ ಮೆಕ್ಕೆಜೋಳದ ಸುಳಿಗೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಕೂಡಲೇ ಸಮಿಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕ ಕಚೇರಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪಡೆದು ಸೈನಿಕ ಹುಳುಗಳ ನಿವಾರಣೆಗೆ ರೈತರು ಸಹಕರಿಸಬೇಕು. ಕೃಷಿ ಇಲಾಖೆ ರೈತರಿಗೆ ಬರುವ ಇಂತಹ ಅನೇಕ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ. ಅಲ್ಲದೆ ಎಲ್ಲಾ ಅಧಿಕಾರಿಗಳೂ ಸಹ ರೈತರಿಗೆ ಮಾರ್ಗದರ್ಶನ ನೀಡುವ ಮೂಲಕ ಸೈನಿಕ ಹುಳುಗಳ ನಿವಾರಣೆಗೆ ಸಹಕಾರ ನೀಡಲಿದ್ದಾರೆ. ರೈತ ಸಮುದಾಯ ತಮ್ಮ ಕೃಷಿ ಚಟುವಟಿಕೆಗಳ ಮಧ್ಯದಲ್ಲೂ ಬಿಡುವು ಮಾಡಿಕೊಂಡು ಇಲಾಖೆಯನ್ನು ಸಂಪರ್ಕಿಸಲು ಅವರು ಮನವಿ ಮಾಡಿದ್ಧಾರೆ.