ದಾವಣಗೆರೆ :
ದೇಶ ಕಟ್ಟುವುದರಲ್ಲಿ ಯುವಜನತೆಯ ಪಾತ್ರ ಅತೀ ಹಿರಿದಾಗಿದ್ದು, ಸಮಾಜದ ಪರಿವರ್ತನೆ ಯುವಕರು ತೊಡಗಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಕರೆ ನೀಡಿದರು.
ನಗರದ ಎಆರ್ಜಿ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಅಂತರ್ ರಾಷ್ಟ್ರೀಯ ಯುವ ದಿನಾಚರಣೆ-2018’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವನ್ನು ಸದಾ ದೂಷಿಸುವ ಬದಲು ಅದನ್ನು ಉತ್ತಮ ರೀತಿಯಲ್ಲಿ ಪರಿವರ್ತಿಸಲು ಯುವಜನತೆ ತಮ್ಮ ಬುದ್ದಿ ಮತ್ತು ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ದೇಶದ ಭದ್ರತೆಯೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. 18 ವರ್ಷ ತುಂಬಿದ ಯುವಜನತೆಗೆ ಸಂವಿಧಾನ ನಮ್ಮ ನಾಯಕರನ್ನು ಚುನಾಯಿಸುವ ಹಕ್ಕನ್ನು ನೀಡಿದೆ. ಇದೊಂದು ಜವಾಬ್ದಾರಿಯುತ ಹಕ್ಕಾಗಿದ್ದು, ಈ ಹಕ್ಕು ಸೇರಿದಂತೆ ನಮ್ಮ ಹಕ್ಕು-ಬಾಧ್ಯತೆಗಳನ್ನು ನಿರ್ವಹಿಸಲು ಉತ್ತಮ ಜ್ಞಾನ ಬೇಕು. ಶಿಕ್ಷಣದಿಂದ ನಾವು ಇಂತಹ ಜ್ಞಾನ ಮತ್ತು ಉನ್ನತ ಮೌಲ್ಯಗಳನ್ನು ಮೈಗೂಡಿಸಕೊಳ್ಳಬಹುದಾಗಿದೆ ಎಂದರು.
ಕೇವಲ ಪಠ್ಯದ ಜ್ಞಾನವಲ್ಲದೇ, ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸತ್ವ, ಬುದ್ಧ, ಬಸವ, ವಿವೇಕಾನಂದರಂಥ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನು ಓದಿ ತಿಳಿದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ವಿವೇಕಾನಂದರು ಯುವ ಶಕ್ತಿಯನ್ನು ಬಳಸಿ ಏನೆಲ್ಲಾ ಬದಲಾವಣೆ ಮಾಡಬಹುದೆಂದು ಕನಸು ಕಟ್ಟಿದ್ದರು. ಹೀಗೆ ಅಗಾಧ ಶಕ್ತಿಯಿರುವ ಯುವಶಕ್ತಿ ಇಂದು ದುಶ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ಏನೇ ಕಾರಣಗಳಿದ್ದರೂ, ಅವನ್ನೆಲ್ಲಾ ಉತ್ತಮ ಶಿಕ್ಷಣ, ಮೌಲ್ಯಗಳ ಅರಿವಿನಿಂದ ಮೆಟ್ಟಿನಿಲ್ಲುವ ಸಂಕಲ್ಪ ಇಂದೇ ಪ್ರತಿಯೊಬ್ಬರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ನಮ್ಮೆಲ್ಲರಿಗೂ ಆಯ್ಕೆಗಳಿವೆ. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದೆಂದು ತಿಳಿಯುವ ವಿವೇಚನೆ ಇದೆ. ಯಾವುದು ಸರಿ ಮತ್ತು ತಪ್ಪು ಎಂಬುದನ್ನು ಒಳಮನಸ್ಸು ಹೇಳುತ್ತಿರುತ್ತದೆ. ಒಳ ಮನಸ್ಸಿನ ಮಾತನ್ನು ಕೇಳಿ ನಿರ್ಧಾರ ತೆಗೆದುಕೊಂಡು ಹೆಜ್ಜೆ ಇಟ್ಟಲ್ಲಿ ಯುವಜನತೆ ತಪ್ಪು ಹಾದಿಯಲ್ಲಿ ಹೋಗಲು ಸಾಧ್ಯವಿಲ್ಲ. ಯುವಜನರಾದ ನೀವು ಜಬಾಬ್ದಾರಿಯಿಂದ ವರ್ತಿಸಲು ಸಾಧ್ಯವಿದೆ. ಉತ್ತಮ ಕೌಟುಂಬಿಕ ಹಿನ್ನೆಲೆಯನ್ನು ತಮ್ಮ ಮುಂದಿನ ಪೀಳಿಗೆಗೆ ನೀಡುವ ಸಾಮಥ್ರ್ಯವಿದೆ. ಆದ್ದರಿಂದ ನೀವು ನಿಮ್ಮ ಭವಿಷ್ಯ ಜೀವನದ ಬಗ್ಗೆ ಉನ್ನತ ಪರಿಕಲ್ಪನೆ ಹೊಂದಬೇಕು ಎಂದು ಸಲಹೆ ನೀಡಿದರು.
ಪಶ್ಚಾತ್ತಾಪ ಪಡುವ ಹೆಜ್ಜೆ ನಿಮ್ಮದಾಗಬಾರದು. ಯಾವುದೇ ಸೋಲಿಗೆ ಹತಾಶರಾಗಬಾರದು. ಒಂದು ದಾರಿ ಮುಚ್ಚಿದರೆ, ಹತ್ತು ದಾರಿ ತೆರೆದಿರುತ್ತದೆ. ಅದನ್ನು ನೋಡುವ ದೃಷ್ಟಿ ಹೊಂದಬೇಕು. ಹಾಗೂ ಓದಿನ ಹವ್ಯಾಸ ಬೆಳೆಸಿಕೊಂಡು ಮಹಾನ್ ವ್ಯಕ್ತಿಗಳ ಜೀವನ ಸೇರಿದಂತೆ ಉತ್ತಮ ಮೌಲ್ಯಗಳನ್ನು ತಿಳಿದು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಉಪನ್ಯಾಸ ನೀಡಿದ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರೊ.ಮಲ್ಲಿಕಾರ್ಜುನ ಹಲಸಂಗಿ, 1985 ರಲ್ಲಿ ಅಂತರಾಷ್ಟ್ರೀಯ ಯುವ ವರ್ಷವೆಂದು ಈ ಆಚರಣೆ ಆರಂಭವಾಗಿದ್ದು 2010 ರಿಂದ ಅಂತರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಡನೆ ಯುವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಬಾರಿಯ ಧ್ಯೇಯ ವಾಕ್ಯ ‘ಸೇಫ್ ಸ್ಪೇಸ್ ಫಾರ್ ಯೂತ್’ ಎಂಬುದಾಗಿದೆ. ಯುವಜನತೆಗೆ ಅತ್ಯಂತ ಸುರಕ್ಷಿತ ಸ್ಥಳ ಸಮಾಜ. ಅದೇ ಸಮಾಜ ಅತ್ಯಂತ ಅಸುರಕ್ಷಿತ ತಾಣವಾಗಿಯೂ ಪರಿವರ್ತನೆಯಾಗಬಹುದು. ಆದ್ದರಿಂದ ಯುವಜನತೆಯ ಪಾತ್ರ ನಿರ್ಣಾಯಕವಾಗಿದ್ದು, ಶಿಕ್ಷಣ ಇಂತಹ ಅಭದ್ರತೆಯಿಂದ ರಕ್ಷಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಉಪದೇಶ ಮತ್ತು ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಎರಡು ಉದ್ದೇಶವಾಗಿದ್ದು, ಮನೋವಿಕಾಸಕ್ಕೆ ಇದು ಪೂರಕವಾಗಿದೆ. ಮನುಷ್ಯ ವಿವೇಕಿ, ಜೊತೆಗೆ ಆತ ಅತ್ಯಂತ ನಿಕೃಷ್ಟವೂ ಆಗಬಹುದಾಗಿದ್ದು, ಉತ್ತಮ ಶಿಕ್ಷಣ ಇಂತಹ ಮನೋಕ್ಲೇಷಗಳನ್ನು ನಿವಾರಿಸುವ ದಿವ್ಯೌಷಧವಾಗಿದೆ ಎಂದು ಹೇಳಿದರು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕಾಧಿಕಾರಿ ಡಾ. ಜಿ ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಪ್ರೊ. ಕೆ.ಎಸ್.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ತ್ರಿಪುಲಾಂಬ ಮತ್ತಿತರರು ಉಪಸ್ಥಿತರಿದ್ದರು.
