ದಾವಣಗೆರೆ:

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ಸಂವಿಧಾನದ ಪ್ರತಿ ಸುಟ್ಟು ಹಾಕಿದ ದೇಶದ್ರೋಹಿ ಕೃತ್ಯವನ್ನು ಖಂಡಿಸಿ ಹಾಗೂ ಸಂವಿಧಾನ ಸುಟ್ಟವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪ್ರಜಾ ಪರಿವರ್ತನಾ ವೇದಿಕೆಯ ಕಾರ್ಯಕತ್ರು ನಗರದಲ್ಲಿ ಶನಿವಾರ ಬೈಕ್ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಬೈಕ್ ಜಾಥಾ ಆರಂಭಿಸಿದ ಸಂಘಟನೆ ಮುಖಂಡರು, ಕಾರ್ಯಕರ್ತರು ಜಯದೇವ ವೃತ್ತ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಈಶ್ವರಪ್ಪ, ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ಆ.11ರಂದು ದೇಶದ ಪವಿತ್ರ ಗ್ರಂಥವಾದ ಸಂವಿಧಾನದ ಪ್ರತಿಯನ್ನು ದೇಶದ್ರೋಹಿಗಳು ಸುಟ್ಟಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಭಾರತದಿಂದಲೇ ಗಡೀಪಾರು ಮಾಡಬೇಕು. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗಳ ವಿಚಾರದಲ್ಲಿ ಸರ್ಕಾರ ಮೃದು ಧೋರಣೆ ತಳೆಯಬಾರದು ಎಂದು ಆಗ್ರಹಿಸಿದರು.
ನಮ್ಮ ಸಂವಿಧಾನ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾಗಿದ್ದು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ವೈe್ಞÁನಿಕ ತಳಹದಿಯ ಮೇಲೆ ರೂಪಿತವಾದೆ. ಪ್ರತಿಯೊಬ್ಬ ನಾಗರೀಕನಿಗೂ ಮೂಲಭೂತ ಹಕ್ಕು, ಕರ್ತವ್ಯಗಳನ್ನು ನೀಡಿದೆ. ಭಾರತವನ್ನು ಮಾತೆ ಎನ್ನುವುದಾದರೆ, ಸಂವಿಧಾನವು ಅದರ ಪ್ರಾಣವೆಂಬುದನ್ನು ಅರಿಯಬೇಕು. ಇಡೀ ಜಗತ್ತೇ ಮೆಚ್ಚುವ ಇಂತಹ ಸಂವಿಧಾನವನ್ನು ವಿರೋಧಿಸುವವರಿಂದ ದೇಶಕ್ಕೆ ಅಪಾಯವಿದೆ. ಇದರ ವಿರುದ್ಧ ಇಡೀ ದೇಶ ಧ್ವನಿ ಎತ್ತಬೇಕು ಎಂದರು.
ದೇಶವಾಸಿಗಳೆಲ್ಲರೂ ಜಾತಿ, ಧರ್ಮ, ಭಾಷೆ, ಲಿಂಗ ಭೇದವಿಲ್ಲದೇ ಸಮಾನವಾಗಿ ಬದುಕಬೇಕೆಂಬುದು ಸಂವಿಧಾನದ ಆಶಯವಾಗಿದೆ. ಆದರೆ ಕೆಲ ಮೂಲಭೂತವಾದಿಗಳು ಸಂವಿಧಾನವು ಕೇವಲ ಪರಿಶಿಷ್ಟರ ಪರವಿದೆ ಎಂಬುದಾಗಿ ಅಪಪ್ರಚಾರ ಮಾಡಿ, ಇತರೆ ಸಮುದಾಯಗಳನ್ನು ಪ್ರಚೋದಿಸುತ್ತಿದ್ದಾರೆ. ವಾಸ್ತದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳು ಸಂವಿಧಾನದಡಿ ಶೇ.18ರಷ್ಟು ಮಾತ್ರ ಮೀಸಲಾತಿ ಪಡೆಯುತ್ತಿದ್ದರೆ, ಓಬಿಸಿ ವರ್ಗಗಳು ಶೇ.32, ಇತರೆ ಸಮುದಾಯಗಳು ಶೇ.50 ಮೀಸಲಾತಿ ಪಡೆಯುತ್ತಿವೆ. ಇಂತಹ ಸಮಾನತೆಯ ಸಂವಿಧಾನವನ್ನು ಅವಹೇಳನ ಮಾಡುವುದು ಅಕ್ಷಮ್ಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಕೃಷ್ಣ ಅರಕೆರೆ, ಮುಖಂಡರಾದ ಕೆ.ಓ.ಹನುಮಂತಪ್ಪ, ಸುನಿಲ್, ನಾಗರಾಜ, ಅಣ್ಣೇಶ ಮತ್ತಿತರರು ಭಾಗವಹಿಸಿದ್ದರು.








