ಚಿತ್ರದುರ್ಗ:
ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಶಿಕ್ಷಕರುಗಳ ಪಾತ್ರ ಬಹಳ ಮುಖ್ಯವಾದುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೈಶಾಲಿ ಶಿಕ್ಷಕ ಸಮುದಾಯಕ್ಕೆ ಕರೆ ನೀಡಿದರು.
ಬ್ರೆಡ್ಸ್ ಬೆಂಗಳೂರು, ಚಿತ್ರ ಡಾನ್‍ಬೋಸ್ಕೋ ಚಿತ್ರದುರ್ಗ, ನಿಸರ್ಗ ಮಕ್ಕಳ ಒಕ್ಕೂಟ ಇವರುಗಳ ಸಹಯೋಗದೊಂದಿಗೆ ಡಾನ್‍ಬೋಸ್ಕೋ ಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಕರುಗಳಿಗೆ ಹಾಗೂ ಮಕ್ಕಳ ಹಕ್ಕುಗಳ ಕ್ಲಬ್‍ಗಳ ಪ್ರತಿನಿಧಿಗಳಿಗೆ ಎರಡು ದಿನಗಳ ಕಾಲ ನಡೆಯಲಿರುವ ಮಾನವ ಹಕ್ಕುಗಳ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಜೊತೆಗೆ ಶಿಕ್ಷಕರುಗಳ ಒಡನಾಟ ನಿರಂತರವಾಗಿರುವುದರಿಂದ ಶಾಲೆಯಲ್ಲಿ ಪಾಠ್ಯ ಪ್ರವಚನಗಳ ಜೊತೆಗೆ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಹೊಣೆ ಶಿಕ್ಷಕರುಗಳ ಮೇಲಿದೆ. ಮಕ್ಕಳಿಗೆ ಹಾಗೂ ಶಿಕ್ಷಕರುಗಳಿಗೂ ಮಾನವ ಹಕ್ಕುಗಳ ಕುರಿತು ತರಬೇತಿ ಬೇಕಿದೆ. ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿ ಅಕ್ಷಮ್ಯ ಅಪರಾಧ ಎಂಬ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಹೇಳಿದರು.
ಮಕ್ಕಳು ಸಂತೋಷ ಮತ್ತು ಗೌರವಯುತವಾಗಿ ಜೀವನ ನಡೆಸಬೇಕು. ಕೆಲವು ಕಡೆ ಮಕ್ಕಳು ಸಂಕಷ್ಟಕ್ಕೆ ಒಳಗಾಗಿ ಹಿಂಸೆ ಅನುಭವಿಸುವುದನ್ನು ನೋಡಿಕೊಂಡು ಸುಮ್ಮನಿರಬಾರದು. ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದರೆ ತೊಂದರೆಯಲ್ಲಿರುವ ಮಕ್ಕಳನ್ನು ರಕ್ಷಿಸಲು ನೆರವಾಗಲಿದೆ. ಬಡತನವನ್ನು ನೆಪವನ್ನಾಗಿ ಮಾಡಿಕೊಂಡು ಕೆಲವೊಮ್ಮೆ ಪೋಷಕರುಗಳು ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ಇಲ್ಲವೇ ಬಾಲ್ಯವಿವಾಹ ಮಾಡುವ ಪದ್ದತಿ ಇನ್ನು ಜೀವಂತವಾಗಿದೆ. ಸಮಾಜಕ್ಕೆ ಶಿಕ್ಷಕರುಗಳ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರುಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯಲ್ಲಿ ಮಕ್ಕಳ ಜೊತೆ ಶಿಕ್ಷಕರುಗಳು ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಹೊರತರುವ ಕೆಲಸ ಮಾಡಿದಾಗ ನಿಜವಾಗಿಯೂ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ ಸಮಾಜದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರು ಒಂದಲ್ಲ ಒಂದು ರೀತಿಯಲ್ಲಿ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಸಂವಿಧಾನಾತ್ಮಕವಾಗಿ, ಶಾಸನಾತ್ಮಕವಾಗಿ ಮಕ್ಕಳಿಗೆ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳಬಾರದು ಎನ್ನುವ ಕಾನೂನು ಇದ್ದರೂ ಅಲ್ಲಲ್ಲಿ ಹೋಟೆಲ್ ಹಾಗೂ ಫ್ಯಾಕ್ಟರಿ, ಮನೆಗಳಲ್ಲಿ ಮಕ್ಕಳು ಕೆಲಸ ಮಾಡುವುದು ಕಂಡು ಬರುತ್ತದೆ. ಇದರ ವಿರುದ್ದ ಪ್ರತಿಯೊಬ್ಬರು ಜಾಗೃತರಾಗಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ ಎಂದು ಮನವಿ ಮಾಡಿದರು.
ಶಾಲೆಯಲ್ಲಿ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವ ಶಿಕ್ಷಕರುಗಳಿಂದಲೇ ಕೆಲವೊಮ್ಮೆ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುತ್ತದೆ. ಅಲ್ಲಲ್ಲಿ ಶಿಕ್ಷಕರುಗಳೆ ಅಪ್ರಾಪ್ರ ಹೆಣ್ಣುಮಕ್ಕಳನ್ನು ಲೈಂಗಿಕ ಶೋಷಣೆಗೆ ಬಳಸಿಕೊಳುವುದುಂಟು. ಜಿಲ್ಲೆಯ ಬರಪೀಡಿತ ಮೊಳಕಾಲ್ಮುರು ತಾಲೂಕಿನಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿಗಳಿದೆ. ಮಕ್ಕಳು ಎದುರಿಸುತ್ತಿರುವ ಗಂಭೀರ ಪ್ರಕರಣಗಳನ್ನು ಶಿಕ್ಷಕರುಗಳು ಪಟ್ಟಿ ಮಾಡಿ ಸಂಬಂಧ ಪಟ್ಟವರ ಗಮನಕ್ಕೆ ತಂದಾಗ ಮಕ್ಕಳ ಹಕ್ಕುಗಳನ್ನು ಕಾಪಾಡಿದಂತಾಗುತ್ತದೆ ಎಂದು ತಿಳಿಸಿದರು.
ಚಿತ್ರದುರ್ಗ ಡಾನ್‍ಬೋಸ್ಕೋ ನಿರ್ದೇಶಕ ಫಾದರ್ ಸೋನಿ ಮ್ಯಾಥ್ಯೂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾನ್‍ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ವರ್ಗಿಸ್ ಪಳ್ಳೀಪುರಂ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಹಕ್ಕುಗಳ ಕ್ಲಬ್‍ನ ಪ್ರತಿನಿಧಿಗಳಾದ ಜ್ಯೋತಿಕ, ಓಬಳೇಶ ವೇದಿಕೆಯಲ್ಲಿದ್ದರು.
ಕ್ರೀಂ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಮಕ್ಕಳ ಹಕ್ಕುಗಳ ಕ್ಲಬ್‍ನ ಪ್ರತಿನಿಧಿಗಳು ಪ್ರಾರ್ಥಿಸಿದರು. ಚಿತ್ರಡಾನ್‍ಬೋಸ್ಕೋ ಸಿಬ್ಬಂದಿ ಮಂಜುನಾಥ್ ಸ್ವಾಗತಿಸಿದರು. ಸಣ್ಣನಿಂಗಪ್ಪ ವಂದಿಸಿದರು. ಬಿ.ನೀಲಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ