ಎಲ್ಲಾ ಸಾಲ ಮನ್ನಾ ಮಾಡಿ, ಯೋಗ್ಯ ಬೆಲೆ ನೀಡಿ

 

ದಾವಣಗೆರೆ:

  ಒಮ್ಮೆ ರೈತರ ಎಲ್ಲಾ ಸಾಲ ಮನ್ನಾ ಮಾಡುವ ಮೂಲಕ ಋಣಮುಕ್ತರನ್ನಾಗಿಸಬೇಕು ಹಾಗೂ ಡಾ.ಸ್ವಾಮಿನಾಥನ್ ವರದಿಯ ಶಿಫಾರಸ್ಸಿನಂತೆ, ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ನಗರದ ಎಪಿಎಂಸಿ ಟೆಂಡರ್ ಹಾಲ್‍ನಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಆಡಳಿತ ಪಕ್ಷ ಹಾಗೂ ವಿಪಕ್ಷಗಳಿಗೆ ರೈತರ ಸಾಲ ಮನ್ನಾವೇ ಒಂದು ಪ್ರಮುಖ ಕಾರ್ಯಕ್ರಮ ಆಗುವ ನಿಟ್ಟಿನಲ್ಲಿ ರಾಜಕೀಯ ಲಾಭಕ್ಕಾಗಿ ಸಾಲ ಮನ್ನಾ ತೀರ್ಮಾನ ಕೈಗೊಳ್ಳಬಾರದು. ಇದು ನಮ್ಮ ಬೇಡಿಕೆಯೂ ಅಲ್ಲ ಎಂದು ಸ್ಪಷ್ಟಪಡಿಸಿದರು.

  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಸಾಲ ಮನ್ನಾ ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯನವರು 50 ಸಾವಿರದ ವರೆಗೆ ಸಹಕಾರಿ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾ ಮಾಡಿದೆ, ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯ ಒಳಗೇ 1 ಲಕ್ಷದ ವರೆಗಿನ ಸಾಲ ಮನ್ನಾ ಘೋಷಿಸಿದೇ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು 2 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡಿದೇ ಎಂಬುದಾಗಿ ಹೇಳಿಕೊಳ್ಳಲು ಪೈಪೋಟಿ ನಡೆಸಲಿಕ್ಕಾಗಿ ಸಾಲ ಮನ್ನಾ ಮಾಡಬಾರದು. ಬದಲಿಗೆ ಮುಂದೆ ಸಾಲ ಮನ್ನಾ ಕಾರ್ಯಕ್ರಮ ಮುಂದುವರೆಯದಂತೆ ಹಾಗೂ ಮುಂದೆ ರೈತರೂ ಸಾಲ ಮನ್ನಾ ಮಾಡಿ ಎಂಬುದಾಗಿ ಕೇಳಲೂ ಆಸ್ಪದ ಇರದಂತೆ ರೈತರ ಎಲ್ಲಾ ಸಾಲ ಮನ್ನಾ ಮಾಡುವ ಮೂಲಕ ಋಣಮುಕ್ತರನ್ನಾಗಿಸಬೇಕೆಂದು ಒತ್ತಾಯಿಸಿದರು.

   ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳು ಕರ್ನಾಟಕದ ರೈತರ ಸಾಲ ಇದೆ. ಈ ಪೈಕಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 40 ಸಾವಿರ ಕೋಟಿ ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿದ್ದಾರೆ. ಹೀಗಾದರೆ, ಇನ್ನುಳಿದ 80 ಸಾವಿರ ಕೋಟಿ ಸಾಲವನ್ನು ಯಾರು ತೀರಿಸಬೇಕೆಂದು ಪ್ರಶ್ನಿಸಿದ ಕೋಡಿಹಳ್ಳಿ, ನಿಮಗೆ ನಿಜಕ್ಕೂ ರೈತರ ಬಗ್ಗೆ ಕಾಳಜಿ ಇದ್ದುದ್ದೇ ಆದಲ್ಲಿ ಸಣ್ಣ, ಮಧ್ಯಮ, ದೊಡ್ಡ ರೈತರೆಂದು ವರ್ಗೀಕರಿಸದೇ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರನ್ನು ವಿಶ್ವಸಾಸಕ್ಕೆ ಪಡೆದು ಕೇಂದ್ರ ಸರ್ಕಾರದ ಸಹಕಾರ ಪಡೆದು ಒಮ್ಮೆ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ಒಂದು ಕಡೆ ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳಿ, ರೈತರ ಕಣ್ಣೀರು ಒರೆಸೊ ತಂತ್ರ ಮಾಡುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನೊಂದೆಡೆ ಅಧಿವೇಶನದಲ್ಲಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಭೂಮಿಯನ್ನು ರೈತರಲ್ಲದವರೂ ಖರೀದಿಸಲು ಅವಕಾಶ ಮಾಡಿಕೊಡುವ ಮೂಲಕ ರೈತರಿಂದ ಕೃಷಿ ಜಮೀನು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಇದನ್ನು ರೈತ ಸಂಘ ತೀವ್ರವಾಗಿ ವಿರೋಧಿಸುತ್ತದೆ ಎಂದು ರಾಜ್ಯ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

  ಚುನಾವಣೆ ಪೂರ್ವದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಘೋಷಿಸಿದ್ದ ಬಿಜೆಪಿ ಆ ವರದಿಯ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿ ಮಾಡದೇ ರೈತರನ್ನು ವಂಚಿಸುತ್ತಿದೆ. ಶಾಸಕರು, ಸಂಸದರು ನಾವು ರೈತರ ಮಕ್ಕಳು ಎಂಬುದಾಗಿ ಹೇಳಿಕೊಂಡು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಆದ್ದರಿಂದ ಮೊದಲು ರೈತರು ಜಾಗೃತರಾಗಬೇಕೆಂದು ಕರೆ ನೀಡಿದರು.
ಸೇನೆಯ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳು ಅಂಕಿಅಂಶಗಳನ್ನು ಕೊಡುವ ಮೂಲಕ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಿರುವ ಭ್ರಮೆಯನ್ನು ಸಮಾಜದಲ್ಲಿ ಬಿತ್ತುತ್ತಿದ್ದಾರೆ. ಆದರೆ, ವಾಸ್ತವದಲ್ಲಿ 15 ಸಾವಿರ ಕೋಟಿ ರೂ.ಗಳಷ್ಟು ಮಾತ್ರ ಸಾಲ ಮನ್ನಾವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಸಾಲ ಮನ್ನಾದ ಸಂಪೂರ್ಣ ಅಂಕಿ-ಅಂಶವನ್ನು ಜನರ ಮುಂದೆ ಇಡಬೇಕೆಂದು ಆಗ್ರಹಿಸಿದರು.

  ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ 2009ರ ಏಪ್ರೀಲ್ 1ರಿಂದ 2017ರ ಡಿಸೆಂಬರ್ 1ರ ಒಳಗೆ ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ 1 ಲಕ್ಷದ ವರೆಗಿನ ಚಾಲ್ತಿ ಸಾಲ ಹಾಗೂ 2 ಲಕ್ಷದ ವರೆಗಿನ ಸುಸ್ತಿ ಸಾಲ ಮಾತ್ರ ಮನ್ನಾವಾಗಲಿದೆ. ಅಕಸ್ಮಾತ್ ಈ ಅವಧಿಯ ಒಳಗೆ 2 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರೆ ಹಾಗೂ 2009ಕ್ಕೂ ಹಿಂದೆ ಪಡೆದಿದ್ದ ಸಾಲ ಮನ್ನಾ ಆಗಲ್ಲ. ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಸಹಾಯ ಪಡೆದು ಎಲ್ಲಾ ಸಾಲ ಮನ್ನಾ ಮಾಡಿಸಬೇಕು ಹಾಗೂ ಯಡಿಯೂರಪ್ಪ ಬರೀ ಬೀದಿಯಲ್ಲಿ ಬೊಗಳೆ ಮಾತನಾಡದೇ, ಅವರದೇ ಪಕ್ಷದ ಕೇಂದ್ರ ಸರ್ಕಾರದ ಮೇಲೆ ರೈತರ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಹಿರಿಯ ಹೋರಾಟಗಾರ ಕಡಿದಾಳು ಶ್ಯಾಮಣ್ಣ ರೈತ ಗೀತೆ ಹಾಡಿ ಮಾತನಾಡಿದರು. ರೈತ ಸಂಘದ ಮುಖಂಡರುಗಳಾದ ಕುರುವ ಗಣೇಶ್, ಕೋಲಾರ ಶಿವಪ್ಪ, ಜಡಿಯಪ್ಪ ದೇಸಾಯಿ, ಮಂಜುನಾಥ್‍ಗೌಡ, ಈಚಗಟ್ಟದ ಸಿದ್ಧವೀರಪ್ಪ, ಮಹಾಂತೇಶ್ ಪೂಜಾರಿ, ಹೊನ್ನೂರು ಮುನಿಯಪ್ಪ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಡಾ.ಪಾಪಣ್ಣ ಮತ್ತಿತರರು ಹಾಜರಿದ್ದರು.

Recent Articles

spot_img

Related Stories

Share via
Copy link