ಉತ್ತಮ ಆರ್ಥಿಕ ವಹಿವಾಟಿಗೆ ಹೈನೋದ್ಯಮ ಸಹಕಾರಿ

ತುರುವೇಕೆರೆ

            ದೇಶದಲ್ಲಿ ಇಂದು ಕ್ಷೀರಕ್ರಾಂತಿ ಉಂಟಾಗಿ, ಉತ್ತಮ ಆರ್ಥಿಕ ವಹಿವಾಟು ನಡೆಯುವಂತಾಗಿದ್ದರೆ ಇದಕ್ಕೆ ಎಲ್ಲಾ ಹಾಲು ಮಹಾಮಂಡಳಿಗಳು, ಒಕ್ಕೂಟಗಳು, ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕ ರೈತಕುಟುಂಬಗಳ ಪರಿಶ್ರಮ ಕಾರಣ ಎಂದು ಸಂಸದ ಮುದ್ದಹನುಮೇಗೌಡ ಶ್ಲಾಘಿಸಿದರು.

             ತಾಲ್ಲೂಕಿನ ಮಾಯಸಂದ್ರ ಹೋಬಳಿ ಜಡೆಯ ಹಾಲು ಉತ್ಪಾದಕರ ಸಂಘದ ನೂತನ ಎ.ಎಂ.ಸಿ.ಯು ಘಟಕಗಳ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿಯೊಂದಿಗೆ ಉಪಕಸುಬಾಗಿದ್ದ ಹೈನುಗಾರಿಕೆ ಇಂದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರೊಂದಿಗೆ ರೈತ ಮಹಿಳೆಯರು ಹಾಗೂ ಕುಟುಂಬಗಳು ಆರ್ಥಿಕವಾಗಿ ಸದೃಢತೆಯತ್ತ ಸಾಗಿರುವುದು ಸಂತಸದ ಸಂಗತಿ ಎಂದರು.

             ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಮಾತನಾಡಿ, ತಾಲ್ಲೂಕಿನಾದ್ಯಂತ ಹೈನೋದ್ಯಮ ವೃದ್ಧಿಗೊಳ್ಳಲು ಎಲ್ಲಾ ಪೂರಕ ಸವಲತ್ತುಗಳನ್ನು ಹಾಲು ಮಹಾಮಂಡಲ ಹಾಗೂ ಒಕ್ಕೂಟದಿಂದ ತಾಲ್ಲೂಕಿಗೆ ದೊರಕಿಸಲಾಗಿದೆ. ಈ ದಿಸೆಯಲ್ಲಿ 35 ಸಾವಿರ ಲೀಟರ್ ಹಾಲು ಉತ್ಪಾದನೆ ಇಂದು ದ್ವಿಗುಣಗೊಂಡು 75 ಸಾವಿರ ಲೀಟರ್‍ವರೆಗೆ ಏರಿದೆ. ಹಾಗೆಯೇ 15 ಶೀಥಲೀಕರಣ ಘಟಕಗಳು, 34 ಉತ್ಪಾದಕ ಸಹಕಾರಿ ಸಂಘಗಳ ಕಟ್ಟಡಗಳು, 23 ಹೊಸದಾಗಿ ಮಹಿಳಾ ಸಹಕಾರ ಸಂಘಗಳನ್ನು ನಮ್ಮ ಅವಧಿಯಲ್ಲಿ ತೆರೆಯಲಾಗಿದೆ ಎಂದರು.

                 ನೂತನ ಬಿ.ಎಂ.ಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಮಸಾಲಾ ಜಯರಾಮ್, ಹೈನೋದ್ಯಮ ಇಂದು ಕೃಷಿಕರ ಜೀವನಾಡಿ ಎನಿಸಿದೆ. ಇದರ ಪರಿಪೂರ್ಣ ಅಭಿವೃದ್ಧಿಗೆ ನಿರ್ದೇಶಕ ಮಹಾಲಿಂಗಯ್ಯನವರು ಕೋರಿರುವ ಎಲ್ಲಾ ಪೂರಕ ಸಹಕಾರವನ್ನು ನೀಡುತ್ತೇನೆ. ರೈತರಿಗೆ ಕೃಷಿ ಕೈಕೊಟ್ಟಾಗ ಹೈನೋದ್ಯಮದಿಂದಾದರು ಅವರು ಆರ್ಥಿಕ ಸ್ವಾವಲಂಭನೆಯೊಂದಿಗೆ ಬದುಕು ಸಾಗಿಸುವಂತಾಗಬೇಕು ಎಂದರು.

              ಡಿ.ಜಿ.ಘಟಕ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ ನಮ್ಮ ಅವಧಿಯಲ್ಲಿ ಜಿಲ್ಲಾ ನಿರ್ದೇಶಕರು ಒಳಗೊಂಡಂತೆ ಹಲವು ಉತ್ಪಾದಕ ಕಟ್ಟಡ ಹಾಗೂ ಹೊಸ ಉತ್ಪಾದಕ ಸಂಘಗಳು ಮತ್ತು ಬಿಎಂಸಿ ಕೇಂದ್ರಗಳನ್ನು ತೆರೆಯುವಲ್ಲಿ ನನ್ನ ಅನುದಾನ ಸೇರಿದಂತೆ ಸಾಧ್ಯವಿರುವ ಎಲ್ಲಾ ಸಹಕಾರ ನೀಡಿ ಪ್ರೋತ್ಸಾಹಿಸಿದ್ದೇನೆ ಎಂದರು.

              ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಕೊಂಡವಾಡಿ ಚಂದ್ರಶೇಖರ್, ಮಾಜಿ ಜಿ.ಪಂ. ಸದಸ್ಯ ಎನ್. ಆರ್.ಜಯರಾಮ್, ತಾ.ಪಂ. ಭೈರಪ್ಪ, ವಿಸ್ತರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಕಿರಣ್‍ಕುಮಾರ್, ದಿವಾಕರ್, ಸಂಘದ ಅಧ್ಯಕ್ಷರಾದ ಜೆ.ಪಿ.ಸುರೇಶ್, ಜಡೆಯ ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಬಿಇಒ ಮಂಜುನಾಥ್, ಮಹವೀರ್‍ಬಾಬು, ಸೋಮಶೇಖರ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಕೃಷಿಕರು ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link