ಬೆಂಗಳೂರು:
ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಹಂತಕರು ಬಳಸಿದ್ದ ಬೈಕ್ ಮಹಾರಾಷ್ಟ್ರ ರಾಜ್ಯದಲ್ಲಿ ಪತ್ತೆ ಹಚ್ಚಲಾಗಿದೆ.
ಮಹಾರಾಷ್ಟ್ರದ ಉಗ್ರ ನಿಗ್ರಹ ದಳ (ಎಟಿಎಸ್) ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ನಾಂದೇಡ್ ಎಂಬಲ್ಲಿ ಕರ್ನಾಟಕ ವಿಶೇಷ ತನಿಖಾ ದಳ (ಎಸ್ಐಟಿ) ಪೊಲೀಸರು ಬೈಕ್ ಹತ್ತೆ ಹಚ್ಚಿದ್ದಾರೆ.
ಹತ್ಯೆಗೆ ಬಳಸಲಾಗಿದ್ದ ಕಪ್ಪು ಬಣ್ಣದ ಫ್ಯಾಷನ್ ಬೈಕ್’ನ್ನು ಮಹಾರಾಷಅಟ್ರದ ಉಗ್ರ ನಿಗ್ರಹ ದಳದ ಅಧಿಕಾರಿಗಳು ಬಂಧಿತ ಶರತ್ ಕಸಲ್ಕರ್ ನಿಂದ ವಶಕ್ಕೆ ಪಡೆದುಕೊಂಡಿದ್ದರು. ಇದೇ ಫ್ಯಾಷನ್ ಬೈಕ್’ನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ 2017ರ ಸೆಪ್ಟೆಂಬರ್ 5 ರಂದು ಶಂಕಿತ ಶೂಟರ್ ಪರಶುರಾಮ್ ವಾಗ್ಮೋರೆ ಮತ್ತು ಗಣೇಶ್ ಮಿಸ್ಕಿನ್ ಅವರು ಕೃತ್ಯಕ್ಕೆ ಬಳಸಿದ್ದಾರೆಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿರುವ ಶಿವಸೇನೆಯ ಮಾಜಿ ಕಾರ್ಪೊರೇಟರ್ ಶ್ರೀಕಾಂತ್ ಪಂಗರ್ಕರ್ ನೀಡಿದ ಮಾಹಿತಿಯನ್ನು ಮಹಾರಾಷ್ಟ್ರ ಎಟಿಎಸ್ ಕರ್ನಾಟಕ ಪೊಲೀಸರಿಗೆ ನೀಡಿತ್ತು. ಅದರ ಆಧಾರದಲ್ಲಿ ಬೈಕ್ ಪತ್ತೆ ಹಚ್ಚಲಾಗಿದೆ.
ಗೌರಿ ಲಂಕೇಶ್ ಅವರ ಹತ್ಯೆಗೂ ಮುನ್ನ ಸೆ.5ರ ಸಂಜೆ 4 ಗಂಟೆ ಸುಮಾರಿಗೆ ಸುಧನ್ವಗೊಂದಲೇಕರ್ ಗೌರಿ ಲಂಕೇಶ್ ಮನೆಯ ಅಕ್ಕ-ಪಕ್ಕದ ರಸ್ತೆಗಳಲ್ಲಿ ಸುತ್ತಾಡುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಮೂಲಕ ಹತ್ಯೆ ನಡೆದ ದಿನ ಗೊಂದಲೇಕರ್ ಬೆಂಗಳೂರಿನಲ್ಲಿದ್ದ ಎಂಬುದನ್ನೂ ಮೂಲಗಳು ಖಚಿತಪಡಿಸಿದ್ದವು.
ಹತ್ಯೆ ಬಳಿಕ ನೇರವಾಗಿ ಗಣೇಶ್ ಮಿಸ್ಕಿನ್ ಮತ್ತು ವಾಗ್ಮೋರೆ ಬೈಕರನ್ನು ಕುಂಬಳಗೊಡಿನಲ್ಲಿದ್ದ ಮೋಹನ್ ನಾಯಕ್ ಮನೆಯ ಬಳಿ ಹೋಗಿ ನಲ್ಲಿಸಿದ್ದರು. 15 ದಿನಗಳ ಬಳಿಕ ಮತ್ತೊಬ್ಬ ವ್ಯಕ್ತಿ ನಗರಕ್ಕೆ ಬಂದು ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಇದಕ್ಕೂ ಮುನ್ನ ನಗರಕ್ಕೆ ಬಂದಿದ್ದ ಗೊಂದಲೇಕರ್ ರೈಲಿನ ಮೂಲಕ ನಗರಕ್ಕೆ ಬೈಕ್ ತಂದಿರುವ ಸಾಧ್ಯತೆಗಳಿವೆ.
ಗೌರಿ ಹತ್ಯೆ ಪ್ರಕರಣದಲ್ಲಿ ಗೊಂದಲೇಕರ್ ಪಾತ್ರ ಇರುವುದು ಸ್ಪಷ್ಟವಾಗಿದೆ. ಈ ಎಲ್ಲಾ ಅಂಶಗಳನ್ನು ಅಲ್ಲಿನ ಅಧಿಕಾರಿಗಳ ಜೊತೆ ವಿನಿಮಯ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಆರೋಪಿ ಗೊಂದಲೇಕರ್ ಅಲ್ಲಿನ ಪೊಲೀಸರ ವಶದಲ್ಲಿದ್ದು, ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/08/Gauri-Lankesh-Deserves-Death-Murder-Accused-1528438177-15.gif)