ಚುನಾವಣೆ : ಅಭ್ಯರ್ಥಿಗಳಿಂದ ಮನೆ ಮನೆ ಭೇಟಿ

 ತುಮಕೂರು:

      ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರ ಬುಧವಾರ ಬೆಳಗ್ಗೆ 7 ಗಂಟೆಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮಗಳು ಹೆಚ್ಚಾಗಿ ಕಂಡುಬಂದವು.

      ಬುಧವಾರ ಬೆಳಗಿನಿಂದಲೇ ಅಭ್ಯರ್ಥಿಗಳು ಹಾಗೂ ಅವರ ಕಡೆಯ ತಂಡ ಬಡಾವಣೆಗಳ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತ ಮತ ಯಾಚಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಕೆಲವು ಕಡೆ ತಮ್ಮ ಆಪ್ತರು, ಹಿತೈಷಿಗಳು ಜೊತೆಯಲ್ಲಿದ್ದರಾದರೂ ಮೈಕ್‍ನ ಆರ್ಭಟ, ರೋಡ್ ಶೋ, ಮುಖಂಡರುಗಳ ಪಾದಯಾತ್ರೆ ಇತ್ಯಾದಿಗಳ ಆರ್ಭಟಗಳು ಕಂಡುಬರಲಿಲ್ಲ. ಎಲ್ಲ ಕಡೆಯೂ ಮೌನವಾಗಿಯೇ ರಸ್ತೆಗಳಲ್ಲಿ ತೆರಳಿ ವಾರ್ಡ್‍ವಾರು ಪ್ರದೇಶಗಳಲ್ಲಿರುವ ಮನೆಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

      ಸೋಮವಾರ ಮತ್ತು ಮಂಗಳವಾರ ಎಲ್ಲ ವಾರ್ಡ್‍ಗಳಲ್ಲಿಯೂ ಬಹಿರಂಗ ಮತಯಾಚನೆ, ರೋಡ್ ಶೋಗಳು ಭರ್ಜರಿಯಾಗಿಯೇ ನಡೆದವು. 48 ಗಂಟೆಗಳಿಗೂ ಮುಂಚಿತವಾಗಿ ಬಹಿರಂಗ ಪ್ರಚಾರ ಸ್ಥಗಿತಗೊಳಿಸಬೇಕೆಂಬ ಚುನಾವಣಾ ಆಯೋಗದ ಸೂಚನೆ ಅನುಸಾರ ಮಂಗಳವಾರ ಸಂಜೆಯ ವೇಳೆಗೆ ಬಹಿರಂಗ ಪ್ರಚಾರಗಳನ್ನು ವ್ಯಾಪಕಗೊಳಿಸಿ ಮುಕ್ತಾಯ ಮಾಡಲಾಗಿತ್ತು. ಆದರೂ ವಾರ್ಡ್‍ನ ಎಲ್ಲ ಭಾಗಗಳನ್ನು ತಲುಪಲು ಸಾಧ್ಯವಾಗಿರಲಿಲ್ಲ. ಎಲ್ಲೆಲ್ಲಿ ಮತದಾರರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲವೋ ಅಂತಹ ಕಡೆಗಳಿಗೆ ಬುಧವಾರ ಭೇಟಿ ನೀಡಿದರು.

      ಕೆಲವು ವಾರ್ಡ್‍ಗಳಲ್ಲಿ ಹೊಸಬರು ಸ್ಪರ್ಧಿಸಿದ್ದಾರೆ. ಮೀಸಲಾತಿ ಪರಿಣಾಮ ಮತ್ತೊಂದು ವಾರ್ಡ್‍ಗೆ ವಲಸೆ ಹೋಗಬೇಕಾಗಿ ಬಂದಿದ್ದರಿಂದ ಅಂತಹವರಿಗೆಲ್ಲ ಗೊಂದಲ ಇನ್ನೂ ಮುಂದುವರಿದಿದೆ. ನಮ್ಮ ವಾರ್ಡ್ ಎಲ್ಲಿಂದ ಆರಂಭವಾಗಿ ಎಲ್ಲಿ ಮುಕ್ತಾಯವಾಗುತ್ತದೆ ಎಂಬುದನ್ನು ಈಗಷ್ಟೇ ತಿಳಿದುಕೊಳ್ಳಲು ಸಾಧ್ಯವಾಗಿದೆ. ಈ ನಡುವೆ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂಬ ಆತಂಕಗಳು ಕಳೆದ ಎರಡು ದಿನಗಳಿಂದ ಸೃಷ್ಟಿಯಾಗಿದೆ.

      ಮತದಾನಕ್ಕೆ ಇನ್ನೊಂದು ದಿನ ಮಾತ್ರವೇ ಬಾಕಿ ಉಳಿದಿರುವುದರಿಂದ ಇರುವಷ್ಟು ಸಮಯದಲ್ಲಿ ಯಾರ್ಯಾರನ್ನು ಭೇಟಿ ಮಾಡಬಹುದೋ ಅವರೆಲ್ಲರನ್ನು ಭೇಟಿ ಮಾಡುವ ತವಕ ಅಭ್ಯರ್ಥಿಗಳದ್ದು. ದೂರವಾಣಿ ಕರೆಯಿಂದಷ್ಟೇ ಸಾಕಾಗದು. ಮುಖತಃ ಭೇಟಿ ಮಾಡಿ ಅವರ ಮನವೊಲಿಸುವ ಕಾಯಕದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ. ಒಂದೊಂದು ವಾರ್ಡ್‍ನಲ್ಲಿ ಆರೇಳು ಮಂದಿ ಸ್ಪರ್ಧಿಸಿರುವುದರಿಂದ ಹಾಗೂ ಬೇರೆ ಬೇರೆ ಹಿನ್ನೆಲೆಗಳಲ್ಲಿ ಜನತೆಯನ್ನು ಪರಿಚಯ ಮಾಡಿಕೊಳ್ಳುತ್ತಿರುವ ಪರಿಣಾಮ ಎಲ್ಲಿ ಮತಗಳು ನನ್ನಿಂದ ದೂರವಾಗಿಬಿಡುತ್ತವೆಯೋ ಎಂಬ ಆತಂಕ ಅಭ್ಯರ್ಥಿಗಳಲ್ಲಿ ಮೂಡಿದೆ. ಇದೇ ಕಾರಣಕ್ಕಾಗಿ ಮತಗಳನ್ನು ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಕೆಲವು ವಾರ್ಡ್‍ಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿದ್ದರೆ ಮತ್ತೆ ಕೆಲವು ವಾರ್ಡ್‍ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಇದ್ದಾರೆ.

      ಕೆಲವು ವಾರ್ಡ್‍ಗಳು ಸುಶಿಕ್ಷಿತ ಎನ್ನಿಸಿವೆ. ಇಂತಹ ವಾರ್ಡ್‍ಗಳಲ್ಲಿ ಅಭ್ಯರ್ಥಿಗಳಿಗೆ ಸಮಸ್ಯೆ ಇಲ್ಲ. ಮತದಾರರ ನಿರ್ಧಾರ ಏನು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕೊನೆಯ ಎರಡು ದಿನಗಳ ವ್ಯವಹಾರ ಇಲ್ಲಿ ನಡೆಯುವುದಿಲ್ಲ. ಮುಂಚಿತವಾಗಿಯೇ ಮನೆಗಳಿಗೆ ಭೇಟಿ ನೀಡಿ ಮತಗಳನ್ನು ಸುಭದ್ರ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳಿಗೆ ಇಂತಹ ಪ್ರದೇಶಗಳಲ್ಲಿ ಹಣ ಖರ್ಚು ಮಾಡುವ ತಾಪತ್ರಯಗಳು ಇರುವುದಿಲ್ಲ. ಆದರೆ ಸುಶಿಕ್ಷಿತ ಕ್ಷೇತ್ರಗಳನ್ನು ಹೊರತುಪಡಿಸಿ ನೋಡಿದಾಗ ಕೆಲವು ಕಡೆ ಕೊನೆಯ ಎರಡು ದಿನಗಳ ಕಾಂಚಾಣಂ ಕಾರ್ಯಸಿದ್ಧಿಯೇ ಮೇಲುಗೈ ಪಡೆಯುತ್ತದೆ. ಇಂತಹ ಪ್ರಯತ್ನಗಳು ಎರಡು ದಿನಗಳಿಂದ ಭರ್ಜರಿಯಾಗಿಯೇ ನಡೆಯುತ್ತಿವೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link