ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಚಳಿಗಾಲದ ಭಜಿಯಾ, ಮೆಣಸಿನ ಬೋಂಡಾ ಮೊದಲಾದ ಸ್ವಾದಿಷ್ಟ ತಿಂಡಿಗಳ ಜೊತೆಗೇ ಶೀತ, ಕೆಮ್ಮು ಮತ್ತು ಫ್ಲೂ ಸಹಾ ಎಲ್ಲೆಡೆ ಕಾಣಿಸಿಕೊಳ್ಳತೊಡಗುತ್ತದೆ. ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ನಮ್ಮ ರೋಗ ನಿರೋಧಕ ಶಕ್ತಿ ಕೊಂಚ ಶಿಥಿಲವಾಗುತ್ತದೆ ಹಾಗೂ ಕೆಲವಾರು ವೈರಸ್ ಆಧಾರಿತ ಕಾಯಿಲೆಗಳು ಸುಲಭವಾಗಿ ಆವರಿಸಿಕೊಳ್ಳುತ್ತವೆ. ಅಲ್ಲದೇ ವಾತಾವರಣದಲ್ಲಿ ಥಟ್ಟನೇ ಏರಿಳಿಯುವ ತಾಪಮನವೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಹೀಗಾಯಿತು ಎಂದ ತಕ್ಷಣಕ್ಕೇ ಯಾವುದೋ ಮಾತ್ರೆಯನ್ನು ನುಂಗುವುದು ಅಪಾಯಕಾರಿ.
ಸಾಮಾನ್ಯ ಕೆಮ್ಮು ಮತ್ತು ಶೀತಕ್ಕೂ ತೆಗೆದುಕೊಳ್ಳುವ ಸುಲಭವಾಗಿ ಲಭ್ಯವಿರುವ ಮಾತ್ರೆಗಳೂ ಕೆಲವೊಮ್ಮೆ ವಿಪರೀತವಾದ ಪರಿಣಾಮವನ್ನು ಬೀರಬಹುದು. ಈ ಸಮಯದಲ್ಲಿ ನೈಸರ್ಗಿಕ ಚಿಕಿತ್ಸೆಯೇ ಉತ್ತಮವಾಗಿದ್ದು ಈ ಮನೆಮದ್ದುಗಳನ್ನು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಅನುಸರಿಸುತ್ತಾ ಬಂದಿದ್ದಾರೆ. ಆಯುರ್ವೇದ ಈ ಚಿಕ್ಕ ಪುಟ್ಟ ಕಾಯಿಲೆಗಳಿಗೆ ಹಲವಾರು ಚಿಕಿತ್ಸೆಗಳನ್ನು ಸೂಚಿಸಿದ್ದು ಇವು ಅದ್ಭುತ ಎನ್ನುವಂತಹ ಪರಿಣಾಮವನ್ನು ನೀಡುತ್ತಾ ಬಂದಿವೆ. ಬನ್ನಿ, ಶೀತ ಮತ್ತು ಕೆಮ್ಮು ಮೊದಲಾದ ಸಾಮಾನ್ಯ ತೊಂದರೆಗಳಿಗೆ ಆಯುರ್ವೇದ ಸೂಚಿಸುವ ಪ್ರಮುಖವಾದ ಕೆಲವು ಮನೆಮದ್ದುಗಳನ್ನು ನೋಡೋಣ…
ತುಳಸಿ, ದಾಲ್ಚಿನ್ನಿ ಮತ್ತು ಜೇನಿನ ಕಢಾ:
ಶೀತ ಮತ್ತು ಕೆಮ್ಮಿನ ನಿವಾರಣೆಗೆ ಅತಿಸ್ನಿಗ್ಧವಾದ ಕಢಾ ದ್ರವ ಭಾರತೀಯರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಇದನ್ನು ತಯಾರಿಸಲು ಒಂದು ಲೋಟ ನೀರಿಗೆ ಸುಮಾರು ಮೂರು ನಾಲ್ಕು ತುಳಸಿ ಎಲೆಗಳು ಮತ್ತು ಒಂದು ಚಿಕ್ಕ ತುಂಡು ದಾಲ್ಚಿನ್ನಿಯ ಚೆಕ್ಕೆ, ಕೆಲವು ತೊಟ್ಟು ಲಿಂಬೆರಸ, ಹಸಿಶುಂಠಿಯ ತುರಿ ಸುಮಾರು ಒಂದು ಚಿಕ್ಕ ಚಮಚದಷ್ಟು ಎಲ್ಲವನ್ನೂ ಒಂದು ಪಾತ್ರೆಯಲ್ಲಿ ಹಾಕಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ. ಈ ನೀರು ಸುಮಾರು ಅರ್ಧಮಟ್ಟಕ್ಕೆ ಇಳಿದ ಬಳಿಕ ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ಬಿಸಿಬಿಸಿಯಾಗಿಯೇ ಟೀಯಂತೆ ಸೇವಿಸಿ.
ಶುಂಠಿಯ ಟೀ:
ಕೆಮ್ಮು ಮತ್ತು ಶೀತ ಪ್ರಾರಂಭವಾದರೆ ಶುಂಠಿಯ ಟೀ ನೀಡುವ ಆರೈಕೆಗಿಂತ ಇನ್ನೊಂದಿಲ್ಲ. ಹಸಿಶುಂಠಿಯನ್ನು ನೇರವಾಗಿ ಸೇವಿಸುವುದು ಉತ್ತಮವಾದರೂ ಇದು ಸಾಧ್ಯವಾಗದ ಕಾರಣ ಟೀ ತಯಾರಿಸಿ ಕುಡಿಯುವುದೇ ಉತ್ತಮ. ಒಂದು ಕಪ್ ನೀರಿಗೆ ಕೊಂಚ ಶುಂಠಿಯ ತುರಿಯನ್ನು ಹಾಕಿ ಕುದಿಸಿ ತಣಿಸಿ ಕುಡಿಯುವ ಮೂಕ ಶೀತದಿಂದ ಕಟ್ಟಿಕೊಂಡಿದ್ದ ಮೂಗು ತಕ್ಷಣವೇ ತೆರೆದು ಶೀಘ್ರವೇ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅರಿಶಿನ ಬೆರೆಸಿದ ಹಾಲು ಇದು ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಭಾರತದ ನೆಚ್ಚಿನ ಮನೆಮದ್ದಾಗಿದ್ದು ಶೀತ ಮತ್ತು ನೆಗಡಿ ಎಂದಾಕ್ಷಣ ಮೊದಲಾಗಿ ಮಾಡಿ ಕೊಡಲಾಗುತ್ತದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ಇದರಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಬಿಸಿಹಾಲಿನೊಂದಿಗೆ ಕುಡಿಯುವ ಮೂಲಕ ಶೀತದ ವಿರುದ್ಧ ರಕ್ಷಣೆ ಒದಗಿಸಿ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.
ಉಗುರು ಬೆಚ್ಚಗಿನ ಉಪ್ಪುನೀರು :
ಕೆಮ್ಮು, ನೆಗಡಿ ಮತ್ತು ಶೀತಕ್ಕೆ ಈ ವಿಧಾನವೂ ಉತ್ತಮ ಪರಿಹಾರವಾಗಿದೆ. ಉಗುರುಬೆಚ್ಚಗಿನ ಉಪ್ಪುನೀರು ಬಾಯಿಯ ಒಳಭಾಗ ಹಾಗೂ ಗಂಟಲ ಮೇಲ್ಭಾಗದಲ್ಲಿ ಮನೆಮಾಡಿಕೊಂಡಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಇವು ಉಂಟುಮಾಡಿದ್ದ ಉರಿಯೂತವನ್ನು ಶಮನಗೊಳಿಸುತ್ತದೆ ಹಾಗೂ ಎದೆಯ ಭಾಗದಲ್ಲಿ ಉಂಟಾಗಿದ್ದು ಕಫವನ್ನು ತೆರವುಗೊಳಿಸುತ್ತವೆ. ಅಲ್ಲದೇ ಕಟ್ಟಿಕೊಂಡಿದ್ದ ಮೂಗು ತೆರೆದುಕೊಳ್ಳಲೂ ನೆರವಾಗುತ್ತದೆ.
ನೆಲ್ಲಿಕಾಯಿ :
ಈ ಫಲದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳ ಸಹಿತ ಹಲವಾರು ಪೋಷಕಾಂಶಗಳೂ ಇವೆ. ತಿನ್ನಲಿಕ್ಕೆ ಕೊಂಚ ಕಹಿ ಎನಿಸಿದರೂ ಸರಿ, ಚೆನ್ನಾಗಿ ಜಗಿದು ನುಂಗುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಶೀತ ಮತ್ತು ಕೆಮ್ಮಿನ ವಿರುದ್ದ ಹೋರಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೆಲ್ಲಿಕಾಯಿಯನ್ನು ಜಗಿಯಲು ಸಾಧ್ಯವೇ ಇಲ್ಲವೆಂದಿದ್ದರೆ ಚಿಕ್ಕದಾಗಿ ತುರಿದು ಊಟದ ಜೊತೆಗೆ ಸೇವಿಸಬೇಕು ಹಾಗೂ ನೆಲ್ಲಿಕಾಯಿಯ ಉಪ್ಪಿನಕಾಯಿಯನ್ನೂ ಸೇವಿಸಬಹುದು.
ಬೆಳ್ಳುಳ್ಳಿ:
ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಸೇವಿಸಲು ಯೋಗ್ಯವಾದ ಆಹಾರವಾಗಿದೆ. ಬೆಳ್ಳುಳ್ಳಿಯನ್ನು ಸಾಧ್ಯವಾದಷ್ಟೂ ಹಸಿಯಾಗಿಯೇ ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ. ಹಸಿಯಾಗಿ ಸೇವಿಸಲು ಇಷ್ಟವಾಗದೇ ಇದ್ದರೆ ಒಂದೆರಡು ಎಸಳುಗಳನ್ನು ತುಪ್ಪದಲ್ಲಿ ಕೊಂಚವೇ ಹುರಿದು ಊಟದ ಜೊತೆಗೆ ಸೇವಿಸಬಹುದು.
ಶೀತ ಎದುರಾದರೆ ಈ ಸುಲಭ ಮನೆಮದ್ದುಗಳು ನೆರವಾಗಬಲ್ಲವು ಪರಿಹಾರ
1) ಶೀತಕ್ಕೆ ತಕ್ಷಣವೇ ಪರಿಹಾರ ದೊರಕಲು ದೊಡ್ಡಜೀರಿಗೆ ಕುದಿಸಿದ ಟೀ ಸೇವಿಸಿ. ಒಂದು ಲೋಟ ಕುದಿಯುತ್ತಿರುವ ನೀರಿಗೆ ಒಂದು ಚಿಕ್ಕಚಮಚ ದೊಡ್ಡಜೀರಿಗೆಯನ್ನು ಹಾಕಿ ಚಿಕ್ಕ ಉರಿಯಲ್ಲಿ ಐದು ನಿಮಿಷ ಕುದಿಸಿ. ಬಳಿಕ ಸೋಸಿ ಬಿಸಿಬಿಸಿಯಾಗಿಯೇ ಸೇವಿಸಿ.್ ಪರಿಹಾರ
2) ಒಂದು ಇಂಚಿನಷ್ಟು ಹಸಿಶುಂಠಿಯನ್ನು ಚಿಕ್ಕದಾಗಿ ತುರಿದು ಮಿಕ್ಸಿಯಲ್ಲಿ ಕಡೆಯಿರಿ. ಇದಕ್ಕೆ ತಾಜಾ ಲಿಂಬೆಯ ರಸ ಮತ್ತು ಕೊಂಚ ಅರಿಸಿನ ಪುಡಿ ಹಾಗೂ ಕೊಂಚ ಜೇನು ಅಥವಾ ಸಕ್ಕರೆಯನ್ನು ಬೆರೆಸಿ ನೇರವಾಗಿ ಸೇವಿಸಿ.
3) ಒಂದು ಚಿಕ್ಕಚಮಚ ಅರಿಸಿನ ಪುಡಿ ಮತ್ತು ಒಂದು ಲೋಟ ಬಿಸಿಹಾಲು (ಸಕ್ಕರೆ ಹಾಕಬಾರದು) ಎರಡನ್ನೂ ರಾತ್ರಿ ಮಲಗುವ ಮುನ್ನ ಸೇವಿಸಿ. ಮೊದಲು ಅರಿಶಿನ ಪುಡಿಯನ್ನು ಬಾಯಿಗೆ ಹಾಕಿ ಬಳಿಕ ಬಿಸಿಹಾಲನ್ನು ನಿಧಾನವಾಗಿ ಕುಡಿಯುವ ಮೂಲಕ ಅರಿಶಿನ ಪುಡಿಯನ್ನೂ ನುಂಗುತ್ತಾ ಹೋಗಿ. ಮರುದಿನ ಬೆಳಿಗ್ಗೆ ಶೀತ ಇರುವುದಿಲ್ಲ.
4) ಒಂದು ಚಿಕ್ಕ ಚಮಚ ಕಾಳುಮೆಣಸಿನ ಪುಡಿಯನ್ನು ಒಂದು ಕಪ್ ಹಾಲಿನಲ್ಲಿ ಬೆರೆಸಿ, ಚಿಟಿಕೆಯಷ್ಟು ಅರಿಶಿನ ಪುಡಿ ಮತ್ತು ರುಚಿಗಾಗಿ ಕೊಂಚ ಸಕ್ಕರೆಯನ್ನು ಬೆರೆಸಿ ಚೆನ್ನಾಗಿ ಕುದಿಸಿ. ಈ ಪೇಯವನ್ನು ಸತತವಾಗಿ ಮೂರು ದಿನಗಳ ಕಾಲ ಸೇವಿಸಿ.
5) ಕಾಲು ಚಿಕ್ಕಚಮಚ ದಾಲ್ಚಿನ್ನಿ ಪುಡಿ ಮತ್ತು ಒಂದು ಚಿಕ್ಕಚಮಚ ಜೇನನ್ನು ಬೆರೆಸಿ ಪ್ರತಿ ಎರಡು ಅಥವಾ ಮೂರು ಘಂಟೆಗಳಿಗೊಮ್ಮೆ ಸೇವಿಸುತ್ತಾ ಬನ್ನಿ, ಶೀತ ಪೂರ್ಣವಾಗಿ ಇಲ್ಲವಾಗುವವರೆಗೂ ಮುಂದುವರೆಸಿ.
6) ಅರ್ಧ ಚಿಕ್ಕ ಚಮಚ ತುಳಸಿ ಮತ್ತು ಸಮಪ್ರಮಾಣದಷ್ಟು ಅರೆದ ಶುಂಠಿ ಮತ್ತು ಒಂದು ಚಿಕ್ಕ ಚಮಚ ಜೇನು ಬೆರೆಸಿ. ಈ ಲೇಪವನ್ನು ದಿನಕ್ಕೊಂದು ಬಾರಿ ಸೇವಿಸುತ್ತಾ ಬಂದರೆ ಹಲವಾರು ಸೋಂಕುಗಳ ವಿರುದ್ದ ರಕ್ಷಣೆ ಪಡೆಯಬಹುದು.
ಕೆಮ್ಮುಎದುರಾದರೆ ಈ ಸುಲಭ ಮನೆಮದ್ದುಗಳು ನೆರವಾಗಬಲ್ಲವು ಪರಿಹಾರ
1) ಒಂದು ಚಿಕ್ಕಚಮಚ ಜೇನು ಮತ್ತು ಕೊಂಚ ಕಾಳುಮೆಣಸಿನ ಪುಡಿಯನ್ನು ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ
2) ಒಂದು ವೇಳೆ ರಾತ್ರಿಯ ಹೊತ್ತು ಕೆಮ್ಮು ಕಾಡಿದರೆ ಎರಡು ಚಿಕ್ಕ ಚಮಚ ಜೇನನ್ನು ರಾತ್ರಿಯ ಊಟದ ಬಳಿಕ ಸೇವಿಸಿ ಮಲಗಿದರೆ ಕೆಮ್ಮು ಕಡಿಮೆಯಾಗುತ್ತದೆ.
3) ಕೆಮ್ಮು ಎದುರಾದರೆ ತಕ್ಷಣದ ಪರಿಹಾರಕ್ಕಾಗಿ ಲಿಂಬೆಯ ಟೀ ಯಲ್ಲಿ ಕೊಂಚ ಹಸಿಶುಂಠಿಯನ್ನು ಬೆರೆಸಿ ಕುಡಿಯಬೇಕು
4) ಕೊಂಚ ಒಣಶುಂಠಿಯ ಪುಡಿಯನ್ನು ಕೊಂಚ ಬೆಲ್ಲದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬಹುದು.
5) ಒಂದು ಬಾಣಲೆಯಲ್ಲಿ ಒಂದು ಲವಂಗವನ್ನು ಚೆನ್ನಾಗಿ ಹುರಿಯಿರಿ. ಕೊಂಚ ತಣ್ಣಗಾದ ಬಳಿಕ ಈ ಲವಂಗವನ್ನು ಬಾಯಿಯ ಹಾಕಿ ಜಗಿಯದೇ ಕೇವಲ ಲಾಲಾರಸವನ್ನು ನುಂಗುತ್ತಾ ಬನ್ನಿ.
6) ಮೂರು ಕಾಳು ಮೆಣಸು ಮತ್ತು ಒಂದು ಚಿಟಿಕೆ ಜೀರಿಗೆ, ಒಂದು ಚಿಟಿಕೆ ಉಪ್ಪು ಇಷ್ಟನ್ನೂ ಬಾಯಿಯ ಹಾಕಿ ಚೆನ್ನಾಗಿ ಜಗಿದು ಲಾಲಾರಸವನ್ನು ನುಂಗಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
