ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯ ತನ್ನದೇಯಾದ ವೈವಿದ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಯಶಸ್ಸಿಯಾಗಿದೆ. ಮಿತಿಮೀರಿದ ಯಾವುದೇ ರೀತಿಯಲ್ಲಿ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡದ ದೂರದರ್ಶನ ಕಾರ್ಯಕ್ರಮಗಳು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಕಡೆಗಣಿಸುವ ಮೂಲಕ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಲು ಮುಖ್ಯ ಕಾರಣವಾಗಿದೆ. ಆದರೆ, ತಾಯಿ ಭುವನೇಶ್ವರಿಯ ವೈಭವವನ್ನು ಮತ್ತೆ ಸಾರಲು ವಿದ್ಯಾರ್ಥಿಗಳು ಜಾಗೃತರಾಗಿ ಮುಂದೆ ಬರಬೇಕೆಂದು ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಪಿ.ರಾಮಯ್ಯ ತಿಳಿಸಿದರು.
ಅವರು, ಬುಧವಾರ ಇಲ್ಲಿನ ಕುವೆಂಪು ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ’ ಮಂಡನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಹಲವಾರು ವಿಷಯಗಳ ಒಳಗೊಂಡ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದು, ಅವುಗಳ ಮೌಲ್ಯವನ್ನು ಪ್ರತಿಪಾದಿಸುವ ಕುರಿತು ಅಭಿಪ್ರಾಯ ಮಂಡನೆಗಾಗಿ ಅಚ್ಚುಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಕಾರ್ಯಕ್ರಮವನ್ನು ರೂಪಿಸಿದೆ. ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಅಚ್ಚುಮೆಚ್ಚಿನ ಪುಸ್ತಕಗಳ ಬಗ್ಗೆ ಅಭಿಪ್ರಾಯವನ್ನು ತಿಳಿಸುವಂತೆ ಮನವಿ ಮಾಡಿದರು.
ಲೇಖಕ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಾಹಿತ್ಯ ಪ್ರತಿಯೊಬ್ಬರ ಬದುಕಿನ ಕನ್ನಡಿಯಂತಿದ್ದು, ಇದನ್ನು ಸದ್ವಿನಿಯೋಗಪಡಿಸಿಕೊಂಡವನ್ನು ಮಾತ್ರ ಸಾರ್ಥಕತೆಯ ಬದುಕನ್ನು ಬದುಕುತ್ತಾನೆ. ಸಾಹಿತ್ಯವನ್ನು ಹೃದಯ ವೈಶಾಲ್ಯದಿಂದ ಕಾಣುವ ಮನಸುಗಳ ಸಂಖ್ಯೆ ಹೆಚ್ಚಾಗಬೇಕಿದೆ. ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಸಾಹಿತ್ಯದ ಗುಣಾತ್ಮಕ ಮೌಲ್ಯವನ್ನು ಪ್ರತಿಬಿಂಬಿಸುವ ವಿಚಾರಗಳನ್ನು ಶಾಲಾ ಮಕ್ಕಳು ಅರ್ಥೈಸಿಕೊಳ್ಳುವಂತೆ ತಿಳಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯರು, ಸಂಸ್ಥೆಯ ಅಧ್ಯಕ್ಷ ಸಿ.ಶಿವಲಿಂಗಪ್ಪ ಮಾತನಾಡಿ, ಪ್ರಸ್ತುತ ಸ್ಥಿತಿಯಲ್ಲಿ ಸಾಹಿತ್ಯದ ಬೆಳವಣಿಗೆಯ ಬಗ್ಗೆ ನಡೆಯುವ ಕಾರ್ಯಕ್ರಮಗಳು ಅಪರೂಪವಾಗಿವೆ. ಕನ್ನಡ ಸಾಹಿತ್ಯ ಜನಮಾನಸದಿಂದ ದೂರವಾಗುತ್ತಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಕಾರಣ ಹಲವಾರು ವಿಷಯಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಅನೇಕ ಪಂಡಿತರು ಕನ್ನಡ ಭಾಷೆ ಉಳಿವಿನ ಬಗ್ಗೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ.
ವಿಶೇಷವಾಗಿ ಶಾಲಾ ಹಂತದಲ್ಲೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ನಮ್ಮ ಬದುಕಿನ ಭಾಷೆಯಾದ ಕನ್ನಡದ ಬಗ್ಗೆ ಹೆಚ್ಚು ಒತ್ತು ನೀಡುವಂತಾಗಬೇಕಿದೆ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಶಿಕ್ಷಕ ಕನ್ನಡ ಸಾಹಿತ್ಯ ಲೋಕದ ಉಳಿವಿಗೂ ಸಹ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಕೇವಲ ಶಾಲಾ ಹಂತಗಳಲ್ಲೇ ಕನ್ನಡ ಸಾಹಿತ್ಯ ಚಟುವಟಿಕೆಗಳು ನಡೆಯದೆ ಸಾರ್ವಜನಿಕವಾಗಿಯೂ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಇಓ ಸಿ.ಎಸ್. ವೆಂಕಟೇಶ್, ಶಾಲಾ ನಿರ್ದೇಶಕರಾದ ಆರ್. ಕೃಷ್ಣಮೂರ್ತಿ, ಎನ್.ಎಂ. ಕೃಷ್ಣಮೂರ್ತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ವಿ. ಶ್ರೀರಾಮರೆಡ್ಡಿ, ಮುಖ್ಯಶಿಕ್ಷಕ ಎನ್. ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ