ಕೋಟೆನಗರಿಯಲ್ಲಿ ಮತಹಕ್ಕು ಚಲಾವಣೆಗೆ ಉತ್ಸಾಹ

ಚಿತ್ರದುರ್ಗ:
            ಚಿತ್ರದುರ್ಗ ನಗರಸಭೆಯೂ ಸೇರಿದಂತೆ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಶುಕ್ರವಾರದಂದು ಶಾಂತಿಯುತ ಮತದಾನ ನಡೆದಿದೆ. ಸಣ್ಣಪುಟ್ಟ ಲೋಪಗಳನ್ನು ಹೊರೆತು ಪಡಿಸಿದರೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಚಿತ್ರದುರ್ಗದಲ್ಲಿ ಮತದಾರರು ಅತೀ ಉತ್ಸಾಹದಿಂದ ಮತಚಲಾಯಿಸಿದ್ದಾರೆ. ಮಹಿಳೆಯರು, ಯುವಕರೂ ಸಹ ಮತಗಟ್ಟೆಗೆ ತೆರಳಿ ತಮ್ಮ ಸಂವಿಧಾನ ಬದ್ದವಾದ ಮತಹಕ್ಕನ್ನು ಚಲಾವಣೆ ಮಾಡುವುದರ ಮೂಲಕ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮುದ್ರೆ ಒತ್ತಿದ್ದಾರೆ.
ಒಂದೆರಡು ಕಡೆ ಮತಯಂತ್ರಗಳ ಸಣ್ಣ ಲೋಪಗಳನ್ನು ಹೊರೆತು ಪಡಿಸಿದರೆ ಎಲ್ಲಿಯೂ ಮತದಾನಕ್ಕೆ ಅಡ್ಡಿಯಾಗುವಂತಹ ಬೆಳವಣಿಗೆಗಳು ಘಟಿಸಿರುವ ಬಗ್ಗೆ ವರದಿಯಾಗಿಲ್ಲ. ಬಹುತೇಕ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಭದ್ರೆತೆ ಮಾಡಿದ್ದರಿಂದ ಮತದಾನ ಶಾಂತಿಯುತವಾಗಿ ಜರುಗಿತು.
            ಕೆಳಗೋಟೆಯ 31ನೇ ವಾರ್ಡಿನ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೆಟ್ಟು ಹೋಗಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಇದರಿಂದ ಮತದಾರರು ತಮ್ಮ ಹಕ್ಕು ಚಲಾವಣೆಗೆ ಕಾಯಬೇಕಾಯಿತು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮತ್ತೊಂದು ಮತಯಂತ್ರ ಅವಳಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
33 ಮತ್ತು 34ನೇ ವಾರ್ಡ್‍ನಲ್ಲಿ ಮತದಾನ ವೇಳೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇನ್ನೂ ಕೆಲವು ಕಡೆ ಸಣ್ಣ ಪುಟ್ಟ ರಗಳೆ ಬಿಟ್ಟರೆ ಉಳಿದಂತೆ ಎಲ್ಲಾ ಕಡೆಯೂ ಮತದಾನ ಸುಗಮವಾಗಿ ನಡೆಯಿತು. ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬಹುತೇಕ ವಾರ್ಡ್‍ಗಳಿಗೆ ಬೇಟಿ ನೀಡಿದ್ದರು. 34ನೇ ವಾರ್ಡಿನಲ್ಲಿ ಶಾಸಕರ ಬೇಟಿ ವೇಳೆ ಸಣ್ಣ ಪ್ರಮಾಣದಲ್ಲಿ ಮಾತಿನ ಚಕಮಕಿ ನಡೆಯಿತು.
                ನಗರಸಭೆಯ 35 ವಾರ್ಡ್‍ಗಳ ಪೈಕಿ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಸ್ಪರ್ಧಿಸಿದ್ದ ವಾರ್ಡ್‍ಗಳು ರಂಗೇರಿದ್ದವು. ಮೀಸಲಾತಿಯ ಬದಲಾವಣೆಯಿಂದಾಗಿ ಕೆಲವು ಮಾಜಿಗಳು ಸ್ಪರ್ಧಿಸಲು ಅವಕಾಶ ಸಿಗದ ಕಾರಣ ಪತ್ನಿಯರು ಹಾಗೂ ಸಹೋದರಿಯರನ್ನು ಕಣಕ್ಕಿಳಿಸಿ ಮತದಾನದಂದು ಮತಗಟ್ಟೆಗಳ ಆಸುಪಾಸಿನಲ್ಲಿ ನಿಂತು ಮತದಾನಕ್ಕೆ ಬರುವವರ ಬಳಿ ನಮ್ಮವರಿಗೆ ಮತ ಹಾಕಿ ಎಂದು ಪಿಸುಗುಡುತ್ತಿದ್ದುದು, ಅಲ್ಲಲ್ಲಿ ಕಂಡು ಬಂದಿತು.
                ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯವರೆಗೂ ಮಂದಗತಿಯಲ್ಲಿ ನಡೆದ ಮತದಾನ ಹನ್ನೆರಡು ಗಂಟೆಯ ನಂತರ ಚುರುಕುಗೊಂಡಿತ್ತು. ತಿಪ್ಪಜ್ಜಿಸರ್ಕಲ್‍ನಲ್ಲಿರುವ ಕಾನ್ವೆಂಟ್, ಬಾರ್‍ಲೈನ್ ಶಾಲೆ, ಜೋಗಿಮಟ್ಟಿ ರಸ್ತೆ, ಬುರುಜನಹಟ್ಟಿ, ಏಕನಾಥೇಶ್ವರಿ ಪಾದಗುಡಿ ಎದುರಿಗಿರುವ ಶಾಲೆ, ಚೇಳುಗುಡ್ಡ, ಅಗಸನಕಲ್ಲು, ಜೆ.ಸಿ.ಆರ್.ಬಡಾವಣೆ, ಹೊರಪೇಟೆ, ಕೆಳಗೋಟೆ ಸಿ.ಕೆ.ಪುರ, ಸ್ಟೇಡಿಯಂ ರಸ್ತೆ, ಐ.ಯು.ಡಿ.ಪಿ.ಲೇಔಟ್‍ನಲ್ಲಿ ಮತದಾನ ಬಿರುಸಿನಿಂದ ನಡೆಯಿತು.
                ತೀವ್ರ ಕುತೂಹಲಕ್ಕೆ ಕಾರಣವಾಗಿರುವ 1ನೇ ವಾರ್ಡ್ ಮತ್ತು 33ನೇ ವಾರ್ಡ್‍ನಲ್ಲಿ ಮತದಾರರಕ್ಕಿಂತ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪಕ್ಕದ 34ನೇ ವಾರ್ಡಿನಲ್ಲಿಯೂ ಮತದಾನ ಬಿರುಸಿನಿಂದ ಕೂಡಿತ್ತು. ಈ ಮೂರು ವಾರ್ಡ್‍ಗಳಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ದ ದೃಶ್ಯ ಕಂಡು ಬಂತು.
ಇನ್ನು ಕೆಲವು ವಾರ್ಡ್‍ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್.ನವರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವಂತೆ ಮತದಾನಕ್ಕೆ ಬಂದರವನ್ನು ಬೇಡಿಕೊಳ್ಳುತ್ತಿದ್ದರು. ಕೆಲವು ವಾರ್ಡ್‍ಗಳಲ್ಲಿ ಪಕ್ಷೇತರರು ಮುಂಚೂಣಿಯಲ್ಲಿದ್ದಂತ ವಾತಾವರಣ ಕಂಡು ಬರುತ್ತಿತ್ತು.
                ನಗರಸಭೆ ಮಾಜಿ ಅಧ್ಯಕ್ಷರುಗಳಾದ ಮಹಮದ್ ಅಹಮದ್‍ಪಾಷ, ಸಿ.ಟಿ.ಕೃಷ್ಣಮೂರ್ತಿ, ಹೆಚ್.ಎನ್.ಮಂಜುನಾಥಗೊಪ್ಪೆ, ಹೆಚ್.ತಿಮ್ಮಣ್ಣ,  ಹೆಚ್.ಸಿ.ನಿರಂಜನಮೂರ್ತಿ, ಸುನಿತಮಲ್ಲಿಕಾರ್ಜುನ್, ಮಾಜಿ ಸದಸ್ಯರುಗಳಾದ ರವಿಶಂಕರ್‍ಬಾಬು, ರಾಘವೇಂದ್ರ, ಮಹೇಶ್, ಶಕೀಲಾಭಾನು, ಫಕೃದ್ದಿನ್, ನಸ್ರುಲ್ಲಾ, ಶ್ರೀರಾಂ, ಹೆಚ್.ಕೆ.ಖಾದರ್‍ಖಾನ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಇವರುಗಳು ನಗರಸಭೆ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವುದರಿಂದ ಮತಗಟ್ಟೆಗಳ ಸಮೀಪ ಲವಲವಿಕೆಯಿಂದ ಓಡಾಡುತ್ತಿದ್ದರು.
               ನಡೆಯಲು ಆಗದ ಕೆಲವರು ಊರುಗೋಲುಗಳನ್ನು ಹಿಡಿದು ಮತದಾನಕ್ಕೆ ಹೋಗುತ್ತಿದ್ದರೆ ಮತ್ತೆ ಕೆಲವರು ಮತ್ತೊಬ್ಬರನ್ನು ಸಹಾಯಕ್ಕೆ ಕರೆದುಕೊಂಡು ಮತಗಟ್ಟೆಗೆ ತೆರಳುತ್ತಿದ್ದ ದೃಶ್ಯ ಕೆಲವು ವಾರ್ಡ್‍ಗಳಲ್ಲಿ ಕಂಡು ಬಂದಿತು.
35 ವಾರ್ಡ್‍ಗಳ ಪೈಕಿ ಹದಿನೇಳು ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದರಿಂದ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಮಹಿಳೆಯರದ್ದೆ ಕಾರುಬಾರು ಜೋರಾಗಿತ್ತು. ಮೀಸಲಾತಿ ಬದಲಾವಣೆಯಿಂದ ಸ್ಪರ್ಧಿಸುವ ಚಾನ್ಸ್ ಕೈತಪ್ಪಿದ್ದರಿಂದ ಒಳಗೊಳಗೆ ನೊಂದುಕೊಂಡ ಮಾಜಿಗಳು ಮಡದಿಯರು ಇಲ್ಲವೆ ಸಹೋದರಿಯರನ್ನು ಸ್ಪರ್ಧೆಗಿಳಿಸಿ ಚುನಾವಣೆಯ ದಿನದಂದು ಮತಗಟ್ಟೆಗಳ ಬಳಿ ಗಿರಕಿ ಹೊಡೆಯುತ್ತಿದ್ದುದು, ಸಾಮಾನ್ಯವಾಗಿತ್ತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap