ದಾವಣಗೆರೆ:
ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ, ಈ ಬಾರಿಯೂ ಶ್ರಾವಣ ಮಾಸದ ಪ್ರಯುಕ್ತ ಶ್ರೀಸವಗದ್ದಿಗೆ ಸಂಗಮೇಶ್ವರ ದೇವಸ್ಥಾನ ಕಮಿಟಿಯವರು ಹಾಗೂ ಗ್ರಾಮಸ್ಥರು ಸಮೃದ್ಧ ಮಳೆ-ಬೆಳೆಗಾಗಿ ಸಂಪ್ರದಾಯದಂತೆ ಪುಟಗನಾಳ್ ಸಮೀಪ ಇರುವ ಬಂಡೆ ರಂಗಪ್ಪ ದೇವರಿಗೆ ಶನಿವಾರ ಪೂಜೆ ಸಲ್ಲಿಸಲಾಯಿತು.
ಹಿಂದೆ ಮಳೆ ಬಾರದಿದ್ದಾಗ, ಸಮೃದ್ದ ಮಳೆಗಾಗಿ ಬಂಡೆ ರಂಗಪ್ಪ ದೇವರಿಗೆ ಪೂಜೆ ಸಲ್ಲಿಸುವುದು ಪ್ರತೀತಿಯಾಗಿದೆ. ಹೀಗಾಗಿ ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಮೃದ್ಧ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಾರೆ.
ವಿಶೇಷ ಎಂದರೆ, ಗ್ರಾಮದ ಚಿಕ್ಕ ಮಕ್ಕಳಿಂದ ಬಂಡೆ ರಂಗಪ್ಪ ದೇವರಿಗೆ ಪೂಜೆ ಸಲ್ಲಿಸುವ ವಾಡಿಕೆ ಇದೆ. ದೇವರಿಗೆ 101 ಬಾರೀ ಪಂಚಾಮೃತ ಅಭಿಷೇಕ, ಬಿಲ್ವಾಚ್ನೆ, ಪುಷ್ಪಾರ್ಚನೆ ನೆರವೇರಿಸಿ 101 ತೆಂಗಿನ ಕಾಯಿ ಒಡೆದು, 101 ಬಾರಿ ಮಂಗಳಾರತಿ ಮಾಡಿ ಭಕ್ತರು ತಂದ ಎಡೆಯ ಬುತ್ತಿಯನ್ನು ನೈವೇದ್ಯ ಮಾಡಿ ಎಲ್ಲರೂ ಸಾಮೂಹಿಕವಾಗಿ ಪ್ರಸಾದ ಸ್ವೀಕರಿಸಿದರು.