ತುಮಕೂರು:
ಆಗಸ್ಟ್ 31 ರಂದು ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನಾಳೆ ಹೊರಬೀಳಲಿದೆ.
ತುಮಕೂರು ಮಹಾನಗರ ಪಾಲಿಕೆ, ಗುಬ್ಬಿ ಹಾಗೂ ಕೊರಟಗೆರೆ ಪಟ್ಟಣ ಪಂಚಾಯತಿ, ಚಿ.ನಾ.ಹಳ್ಳಿ ಮತ್ತು ಮಧುಗಿರಿ ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ನಾಳೆ ಮತ ಏಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ವೇಳಗೆ ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ..
ತುಮಕೂರು ಮಹಾನಗರ ಪಾಲಿಕೆ-ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿಕ್ಕನಾಯಕನಹಳ್ಳಿ ಪುರಸಭೆ- ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚಿಕ್ಕನಾಯಕನಹಳ್ಳಿ; ಮಧುಗಿರಿ ಪುರಸಭೆ- ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಧುಗಿರಿ; ಗುಬ್ಬಿ ಪಟ್ಟಣ ಪಂಚಾಯತಿ – ತಾಲ್ಲೂಕು ಕಛೇರಿ, ಗುಬ್ಬಿ; ಕೊರಟಗರೆ ಪಟ್ಟಣ ಪಂಚಾಯತಿ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ ಇಲ್ಲಿ ಮತ ತುಂಬಿದ ವಿದ್ಯುನ್ಮಾನ ಮತಯಂತ್ರಗಳನ್ನು ಭದ್ರತಾ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್ಗಳಿಗೆ 215 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ 59.25 ರಷ್ಟು ಮತದಾನ ನಡೆದಿದೆ. ಗುಬ್ಬಿ ಪಟ್ಟಣ ಪಂಚಾಯತಿಯ 19 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 68 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಶೇ.79.10 ರಷ್ಟು ಮತದಾನವಾಗಿದೆ. ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಒಟ್ಟು 23 ವಾರ್ಡ್ಗಳಿದ್ದು, 73 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಲ್ಲಿ ಶೇ.79.78 ರಷ್ಟು ಮತದಾನವಾಗಿತ್ತು. ಕೊರಟಗೆರೆ ಪಟ್ಟಣ ಪಂಚಾಯತಿಯ 15 ವಾರ್ಡ್ಗಳಿಗೆ 60 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲಿ ಶೇ.81.41 ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಮತದಾನವಾಗಿರುವ ಸ್ಥಳೀಯ ಸಂಸ್ಥೆ ಇದು.
ಮಧುಗಿರಿ ಪುರಸಭೆಯ 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 68 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಲ್ಲಿ ಶೇ.81.04 ರಷ್ಟು ಮತದಾನವಾಗಿದೆ. ತುಮಕೂರನ್ನು ಹೊರತುಪಡಿಸಿದರೆ ಮಧುಗಿರಿ ಪ್ರಸ್ತುತ ಅತ್ಯಂತ ಪ್ರತಿಷ್ಠೆಯ ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಹಾಲಿ ಶಾಸಕ ಎಂ.ವೀರಭದ್ರಯ್ಯ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಉಳಿದಂತೆ ಕೊರಟಗೆರೆ, ಚಿಕ್ಕನಾಯಕನಹಳ್ಳಿ ಅಷ್ಟಾಗಿ ಗಮನ ಸೆಳೆದಿಲ್ಲ.
ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 215 ವಾರ್ಡ್ಗಳು ಇವೆ. 484 ಅಭ್ಯರ್ಥಿಗಳು ಸ್ಪರ್ಧಾಳುಗಳಾಗಿದ್ದಾರೆ. ಇವರೆಲ್ಲರ ಭವಿಷ್ಯ ನಾಳೆ ಹೊರಬೀಳಲಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ 215 ಅಭ್ಯರ್ಥಿಗಳಿದ್ದು, ಪ್ರಮುಖ ಮೂರು ಪಕ್ಷಗಳ ಜೊತೆಗೆ ಇದೇ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಪಿಎಂ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದಾರೆ. ಇವರ ಸ್ಪರ್ಧೆ ಯಾರಿಗೆ ಅನುಕೂಲವಾಗಲಿದೆ ಎಂಬುದು ತಿಳಿಯಲಿದೆ.
ತುಮಕೂರು ನಗರದಲ್ಲಿ ಟಿಕೆಟ್ ಹಂಚಿಕೆಯ ಪ್ರಕ್ರಿಯೆ ಆರಂಭವಾದಾಗಿನಿಂದ ಕೆಲವು ಪಕ್ಷಗಳಲ್ಲಿ ಅಪಸ್ವರ ಎದುರಾಗಿತ್ತು. ಪಕ್ಷದ ಅಭ್ಯರ್ಥಿಗಳ ವಿರುದ್ಧ ಅಲ್ಲಲ್ಲಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಇದರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮತದಾರ ಪಕ್ಷ ನೋಡಿರುವನೋ ಅಥವಾ ವ್ಯಕ್ತಿಗೆ ಮಣೆ ಹಾಕಿರುವನೋ ಎಂಬುದು ನಾಳೆ ಗೊತ್ತಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ