ಕಡಬ ಕೆರೆಗೆ ನೀರು ಹರಿಸಲು ಸಚಿವರಿಂದ ಚಾಲನೆ

ಗುಬ್ಬಿ
          ತಾಲ್ಲೂಕಿನ ನಿಟ್ಟೂರು ಹೋಬಳಿ ಕಾರೆಹಳ್ಳಿ ಸಮೀಪದ ಹೇಮಾವತಿ ಮುಖ್ಯ ನಾಲೆಯ ಎಸ್ಕೇಪ್ ಗೇಟ್ ಎತ್ತುವ ಮೂಲಕ ಕಡಬ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.
ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದರಿಂದ ಬರುವ ಜನವರಿಯವರೆಗೆ ನಾಲೆಯಲ್ಲಿ ನೀರು ಹರಿಯಲಿದ್ದು ಜಿಲ್ಲೆಯ ಎಲ್ಲಾ ಕೆರೆಗಳು ಭರ್ತಿಯಾಗಲಿವೆ ಎಂದ ಅವರು, ನಿಟ್ಟೂರು ಮತ್ತು ಬೆಲವತ್ತ ಕೆರೆಗಳು ಭರ್ತಿಯಾಗಲಿದ್ದು, ಈ ತಿಂಗಳ ಅಂತ್ಯಕ್ಕೆ ಶೇ. 50 ರಷ್ಟು ಕಡಬ ಕೆರೆಯನ್ನು ತುಂಬಿಸಲಾಗುವುದು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಕೆರೆಗಳಿಗೂ ನೀರನ್ನು ಹರಿಸಲಾಗುವುದೆಂದು ರೈತರು ಆತಂಕಗೊಳ್ಳಬಾರದೆಂದು ತಿಳಿಸಿದರು.
           ಕೆರೆಗಳಿಗೆ ನೀರು ಹರಿಸಿಕೊಳ್ಳುವ ಬಗ್ಗೆ ಸೆ.5 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಸಕರುಗಳೊಟ್ಟಿಗೆ ಸಮಗ್ರವಾಗಿ ಚರ್ಚಿಸಿ ನಿರು ಹರಿಸಿಕೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು. ಇದುವರೆಗೂ ನಮ್ಮ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿಕೊಂಡಿಲ್ಲ. ಈ ತಿಂಗಳು ನಮ್ಮ ಅವಧಿಯಾಗಿದ್ದು ಈ ತಿಂಗಳು ಪೂರ ನಮ್ಮ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಿಕೊಳ್ಳಲಾಗುವುದೆಂದು ಇದರಿಂದ ಹೇಮಾವತಿ ವ್ಯಾಪ್ತಿಯ ಶೇ.50 ರಷ್ಟು ಕೆರೆಗಳು ತುಂಬಲಿವೆ ಎಂದು ತಿಳಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದರು.
          ತಾಲ್ಲೂಕಿನ ಕಡಬ, ಎಂ.ಹೆಚ್.ಪಟ್ಣ, ಗುಬ್ಬಿ ಮತ್ತು ಹೇರೂರು ಕೆರೆಗಳಿಗೆ ಹೇಮಾವತಿ ನೀರು ಹರಿಸಿಕೊಳ್ಳಲು ಎಕ್ಸ್‍ಪ್ರೆಸ್ ಲೈನ್ ನಿರ್ಮಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದ್ದು, ನಾಲ್ಕು ಕೆರೆಗಳಿಗೂ ತ್ವರಿತವಾಗಿ ಎಕ್ಸ್‍ಪ್ರೆಸ್ ಲೈನ್ ನಿರ್ಮಾಣವಾಗಿದೆ ಎಂದು ತಿಳಿಸಿದ ಅವರು, ಕಡಬ ಕೆರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿದೆ. ಅಲ್ಲದೆ ಇಲ್ಲಿಂದಲೆ ಎಚ್.ಎ.ಎಲ್‍ಗೆ ನೀರು ಕೊಡಬೇಕಿದೆ. ಆದ್ದರಿಂದ ವರ್ಷ ಪೂರಾ ಕೆರೆಯಲ್ಲಿ ನೀರು ಇರುವಂತೆ ನೋಡಿಕೊಳ್ಳಬೇಕಾಗಿದ್ದು, ಪ್ರತಿವರ್ಷ ಎಕ್ಸ್‍ಪ್ರೆಸ್ ಲೈನ್ ನಿರ್ಮಿಸುವ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದೆಂದು ತಿಳಿಸಿದರು. ಅಗತ್ಯವಿರುವ ಅನುದಾನವನ್ನು ಸರ್ಕಾರ ನೀಡಲು ಮುಂದಾಗಿದ್ದು ಅಧಿಕಾರಿಗಳು ಕ್ರಿಯಾಯೋಜನೆಯನ್ನು ತಯಾರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link