ಶಿರಾ
ದೇಶದಲ್ಲಷ್ಟೇ ಅಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿಯೂ ರಾಮಕೃಷ್ಣ ಮಠದ ಭಕ್ತಾದಿಗಳಿದ್ದು ಈ ಎಲ್ಲಾ ಭಕ್ತರಿಗೆ ಮಠದ ಬಗ್ಗೆ ಗೌರವಾದರಗಳಿವೆ. ಕುವೆಂಪು ನುಡಿದಂತೆ ರಾಮಕೃಷ್ಣ ಆಶ್ರಮಗಳು ಧರ್ಮ ಪ್ರಚಾರ ಸಂಸ್ಥೆಗಳೇ ಹೊರತು ಮತ ಪ್ರಚಾರ ಸಂಸ್ಥೆಗಳಲ್ಲ ಎಂದು ಶ್ರೀ ರಾಮಕೃಷ್ಣ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಭಾನುವಾರ ಶಿರಾ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮಕೃಷ್ಣ ಆಶ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಸರ್ವರಲ್ಲಿಯೂ ಹುದುಗಿರುವ ದೈವತ್ವವನ್ನು ಪರಿಚಯಿಸಿ ಅವರು ಜೀವನ ವೈಶಾಲ್ಯತೆಗೆ ಪಣತೊಟ್ಟು ಬದುಕನ್ನು ಸಾಧಿಸುವಂತೆ ಪ್ರೇರೇಪಿಸಿ ನಿಸ್ವಾರ್ಥ ಬದುಕಿಗೆ ಅರ್ಹರಾಗಲು ಆಶ್ರಮಗಳು ಶ್ರಮಿಸುತ್ತಿವೆ ಎಂದರು.
ಶಾಸಕ ಹಾಗೂ ಮಾಜಿ ಸಚಿವ ಬಿ.ಸತ್ಯನಾರಾಯಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಶ್ರಮದ ಧ್ಯೇಯೋದ್ದೇಶಗಳನ್ನು ಕಳೆದ ಎರಡು ದಶಕಗಳಿಂದಲೂ ಗಮನಿಸುತ್ತಾ ಬಂದಿರುವ ನನಗೆ ಶಿರಾದಲ್ಲಿನ ಆಶ್ರಮದ ಉಪ ಶಾಖೆಯ ಪ್ರಾರಂಭ ಮತ್ತು ಯೋಗ್ಯ ರೀತಿಯ ಕಾರ್ಯ ಚಟುವಟಿಕೆಗಳ ನಿರ್ವಹಣೆ ಧನ್ಯತೆ ತಂದಿದ್ದು, ಆಶ್ರಮದ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಪ್ರಜಾಪ್ರಗತಿ ಪತ್ರಿಕಾ ಸಂಪಾದಕ ಎಸ್.ನಾಗಣ್ಣ ಮಾತನಾಡಿ, ಆಶ್ರಮದ ಒಡನಾಟ ಹಾಗೂ ಅದರ ವಿಶೇಷ ಪ್ರಭಾವವು ನನ್ನನ್ನು ಮೊದಲುಗೊಂಡು ನೂರಾರು ಜನರ ಅನಾಥ ಪ್ರಭೆ ನಿವಾರಿಸುವಲ್ಲಿ ಆಶ್ರಮವು ಯಶಸ್ವಿಗೊಂಡಿದೆ. ದಾರ್ಶನಿಕರು ಹೇಳುವಂತೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಆದರ್ಶ ಹೊತ್ತ ಆಶ್ರಮವು ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಬದುಕಿನ ಸರ್ವ ರೀತಿಯಲ್ಲೂ ಶುಚಿತ್ವವೇ ತಪಸ್ಸು ಎಂಬುದನ್ನು ಪರಿಚಯಿಸುವ ಅನೌಪಚಾರಿಕ ವಿಶ್ವ ವಿದ್ಯಾನಿಲಯವಾಗಿದೆ ಎಂದು ಅವರು ತಿಳಿಸಿದರು.
ಹಿರಿಯ ಸಮಾಜ ಸೇವಕ ಡಾ.ಆರ್.ಎಲ್.ರಮೇಶ್, ವಾಣಿಜ್ಯೋದ್ಯಮಿ ಎಸ್.ಕೆ.ಜಿ.ರಾಮಣ್ಣ, ಸಮಾಜ ಸೇವಕ ಮೂಡಲಗಿರಿಗೌಡ, ನಂದಿನಿ ಶೇಖರ್, ಸ್ವಾಮಿ ಪರಮಾನಂದಜಿ, ನಟರಾಜಶ್ರೇಷ್ಠಿ, ಎಂ.ಚಿದಾನಂದ್‍ಗೌಡ, ಪಿ ಎಚ್.ಮಹೇಂದ್ರಪ್ಪ, ಆರ್.ಉಗ್ರೇಶ್, ಕಲ್ಕೆರೆ ರವಿಕುಮಾರ್, ಡಾ.ರಾಮಕೃಷ್ಣ, ಡಾ.ಶಂಕರ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
