ಆಸಿಡ್ ದಾಳಿ ಪ್ರಕರಣದ ಕ್ಷಿಪ್ರ ತನಿಖೆ: ಅಪ್ರಾಪ್ತನಿಂದ ಆಕಸ್ಮಿಕ ಕೃತ್ಯ ಎಂಬುದು ಬಹಿರಂಗ

ತುಮಕೂರು:

 

      ತುಮಕೂರು ನಗರದ ಬಾರ್ಲೈನ್ ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಆಸಿಡ್ ದಾಳಿ ನಡೆದು, 30 ಜನರಿಗೆ ಗಾಯಗಳಾಯಿತೆಂಬ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರಗತಿಯ ತನಿಖೆ ನಡೆಸಿದ್ದು, ಇದು ಅಪ್ರಾಪ್ತ ವಯಸ್ಸಿನ ಬಾಲಕನಿಂದ ಆಕಸ್ಮಿಕವಾಗಿ ಆದ ಕೃತ್ಯ ಎಂಬುದು ಬೆಳಕಿಗೆ ಬಂದಿದೆ.

      ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ದಿವ್ಯ ವಿ.ಗೋಪಿನಾಥ್ ಅವರು ಮಂಗಳವಾರ ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ವಿಜಯೋತ್ಸವ ಸಂದರ್ಭ ರಾಸಾಯನಿಕ ಎರಚಾಟ – ವಿಡಿಯೋ ನೋಡಿ 

      ನಗರದ 16 ನೇ ವಾರ್ಡ್ (ಕೆ.ಆರ್.ಬಡಾವಣೆ)ನಿಂದ ತುಮಕೂರು ಮಹಾನಗರ ಪಾಲಿಕೆಗೆ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಉಲ್ಲಾ ಖಾನ್ ಅವರು ಮತ ಎಣಿಕೆ ಕೇಂದ್ರದಿಂದ ತಮ್ಮ ವಾರ್ಡ್ ಕಡೆಗೆ ಬೆಂಬಲಿಗರೊಂದಿಗೆ ವಿಜಯೋತ್ಸವ ಮೆರವಣಿಯಲ್ಲಿ ಹೋಗುತ್ತಿದ್ದರು. ಮಧ್ಯಾಹ್ನ ಬಾರ್ಲೈನ್ ನ 3 ನೇ ಅಡ್ಡರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿತ್ತು. ಇದೇ ಮೆರವಣಿಗೆಯಲ್ಲಿದ್ದ ಕಾನೂನು ಸಂಘರ್ಷಕ್ಕೊಳಗಾದ (ಅಪ್ರಾಪ್ತ ವಯಸ್ಸಿನ) ಬಾಲಕನೊಬ್ಬ ತನ್ನ ಮತ್ತೊಬ್ಬ ಸ್ನೇಹಿತನೊಡನೆ ಮುಖ ತೊಳೆದುಕೊಳ್ಳುವ ಸಲುವಾಗಿ ಅತ್ತಿತ್ತ ನೋಡಿದ್ದಾನೆ. ಅಲ್ಲೇ ಪಕ್ಕದ ಮನೆಯೊಂದರ ಹೊರಭಾಗದ ಕಿಟಕಿಯ ಬಳಿ ಇದ್ದ ಸ್ಪ್ರೈಟ್ ಮಾದರಿಯ ಹಸಿರು ಬಣ್ಣದ ಬಾಟಲು ಕಾಣಿಸಿದೆ. ಅದು ಆ ಮನೆಯವರು ಶೌಚಾಲಯ ಸ್ವಚ್ಛಗೊಳಿಸಲು ದ್ರಾವಣ ತುಂಬಿಟ್ಟಿದ್ದ ಬಾಟಲು ಆಗಿತ್ತು. ಅದರಲ್ಲಿ ಕಾಲು ಭಾಗದಷ್ಟು ಮಾತ್ರ ಆ ದ್ರಾವಣ ಇತ್ತು. ಇದನ್ನು ಅರಿಯದ ಆ ಬಾಲಕ ಸದರಿ ಬಾಟಲಿಗೆ ನೀರನ್ನು ತುಂಬಿಕೊಂಡು ತನ್ನ ಕೈಯಲ್ಲಿ ಎತ್ತಿ ಹಿಡಿದು ತಿರುಗಿಸುತ್ತ ಕುಣಿದಾಡಿದ್ದಾನೆ. ಆಗ ಆ ದ್ರಾವಣವು ಸುತ್ತಲೂ ಇದ್ದವರ ಮೇಲೆ ಚಿಮ್ಮಿದೆ. ಸ್ವತಃ ಆ ಬಾಲಕನ ಮೇಲೂ ಬಿದ್ದಿದೆ. ಇದರಿಂದ ಆ ದ್ರಾವಣ ಬಿದ್ದ ಸುಮಾರು 30 ಜನರಿಗೆ ಚರ್ಮದಲ್ಲಿ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಅವರೆಲ್ಲ ಕೋತಿತೋಪಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ ಎಂಬ ಸಂಗತಿಯಗಳು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ ಅವರು ವಿವರಿಸಿದರು.

      ಇದು ಆಕಸ್ಮಿಕವೇ ವಿನಃ ಉದ್ದೇಶಪೂರ್ವಕವಾದ ಕೃತ್ಯವಲ್ಲ. ಘಟನೆಗೆ ಸಂಬಂಧಿಸಿದಂತೆ ಮೊಬೈಲ್ ವಿಡಿಯೋ ಕ್ಲಿಪ್ಪಿಂಗ್ಗಳನ್ನು ಪೊಲೀಸರು ಪರಿಶೀಲಿಸಿದಾಗ, ಸದರಿ ಬಾಲಕ ಇದನ್ನು ಯಾರ ಮೇಲೂ ಎರಚಿಲ್ಲವೆಂಬುದು ಹಾಗೂ ಬಾಟಲನ್ನು ತಿರುಗಿಸುತ್ತ ಅದರಲ್ಲಿದ್ದ ನೀರನ್ನು ಚಿಮುಕಿಸಿರುವುದು ಕಂಡುಬಂದಿದೆ. ಮಿಗಿಲಾಗಿ ಸ್ವತಃ ಆತನ ಮೇಲೂ ಅದು ಬಿದ್ದಿದೆ. ಹೀಗಾಗಿ ಸದ್ಯಕ್ಕೆ ಇದು ದುರುದ್ದೇಶವಲ್ಲವೆಂಬುದು ತನಿಖೆಯಿಂದ ದೃಢಪಟ್ಟಿದೆ.

      ಸದರಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಪತ್ತೆ ಮಾಡಿ ವಿಚಾರಣೆ ನಡೆಸಿ, ಮೊಬೈಲ್ ಕ್ಲಿಪ್ಪಿಂಗ್ ಪರಿಶೀಲಿಸಿದಾಗ ಈ ಅಂಶಗಳು ಗೋಚರಿಸಿವೆ ಎಂದು ಎಸ್ಪಿ ದಿವ್ಯ ವಿ.ಗೋಪಿನಾಥ್ ಅವರು ಹೇಳುತ್ತ, ಪತ್ರೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದರು.

      ಎಸ್ಪಿ ಡಾ.ದಿವ್ಯ ವಿ.ಗೋಪಿನಾಥ್ ಹಾಗೂ ಅಡಿಷನಲ್ ಎಸ್ಪಿ ಡಾ.ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ , ನಗರ ಡಿವೈಎಸ್ಪಿ ನಾಗರಾಜ್ ಸೂಚನೆಯಂತೆ ತುಮಕೂರು ನಗರ ಸರ್ಕಲ್ ಇನ್ಸ್ಪೆಕ್ಟರ್ ಕೆ.ಆರ್.ಚಂದ್ರಶೇಖರ್ ನೇತೃತ್ವದಲ್ಲಿ ನಗರ ಠಾಣೆ ಸಬ್ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ ಮತ್ತು ಮತ್ತೋರ್ವ ಸಬ್ಇನ್ಸ್ಪೆಕ್ಟರ್ (ಅಪರಾಧ ವಿಭಾಗ) ಸಿ.ಆರ್.ಭಾಸ್ಕರ್ ಮತ್ತು ಸಿಬ್ಬಂದಿ ಕ್ಷಿಪ್ರ ತನಿಖೆ ನಡೆಸಿ ನೈಜತೆಯನ್ನು ಪತ್ತೆ ಮಾಡಿದ್ದಾರೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link