ಮಧುಗಿರಿ:
ಪಟ್ಟಣದ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಒಟ್ಟು 23 ಸ್ಥಾನಗಳಲ್ಲಿ 13 ಸದಸ್ಯರ ಬಹುಮತ ಪಡೆದಿರುವ ಕಾಂಗ್ರೆಸ್ ಚುನಾಯಿತರಾಗಿರುವ ಸದಸ್ಯರಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ಏರ್ಪಟ್ಟಿದ್ದು, ಚೆಂಡು ಮಾಜಿ ಶಾಸಕ ಕೆ.ಎನ್ ರಾಜಣ್ಣನವರ ಅಂಗಳದಲ್ಲಿದೆ.
ಕಳೆದ 5 ವರ್ಷಗಳ ಪುರಸಭಾ ಅಧಿಕಾರವನ್ನು ಅನುಭವಿಸಿದ ಸದಸ್ಯರ ಅಧಿಕಾರಾವಧಿಯು ಸೆ. 07ಕ್ಕೆ ಅಂತ್ಯಗೊಳ್ಳಲಿದ್ದು, ನೂತನ ಪುರಸಭಾ ಸದಸ್ಯರ ಆಗಮನಕ್ಕೆ ವೇದಿಕೆ ಸಜ್ಜಾಗುತ್ತಿದೆ. 2013-18 ರ ಸಾಲಿನಲ್ಲಿ ಬಲಿಜ ಸಮುದಾಯದಿಂದ ಇಬ್ಬರು ಮತ್ತು ಮುಸ್ಲಿಂ ಸಮುದಾಯದ ಒಬ್ಬರು ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಮುಸ್ಲಿಂ ಮತ್ತು ವಕ್ಕಲಿಗ ಸmuದಾಯದವರು ಅಧಿಕಾರವನ್ನು ಹಂಚಿಕೊಂಡಿದ್ದರು. ಕಳೆದ ಬಾರಿ 60 ತಿಂಗಳುಗಳ ಅವಧಿಯು 20-10-30 ರಂತೆ ಅಧಿಕಾರ ಹಂಚಿಕೆಯಾಗಿ 3 ಜನ ಅಧ್ಯಕ್ಷರು ಹಾಗೂ 2 ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದರು.
2018-23ರ ಅವಧಿಯಲ್ಲಿ ಕಾಂಗ್ರೆಸ್‍ನ 13 ಸದಸ್ಯರಲ್ಲಿ 9 ಜನ ಮಹಿಳೆಯರು ಹಾಗೂ 4 ಜನ ಪುರುಷ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 4 ಜನರಿದ್ದರೆ, ಮುಸ್ಲಿಂ ಸಮುದಾಯದಲ್ಲಿ ಇಬ್ಬರು ಮಹಿಳಾ ಸದಸ್ಯರು ಸೇರಿದಂತೆ ಒಬ್ಬ ಪುರುಷ ಸದಸ್ಯ ಸೇರಿ ಒಟ್ಟು 3 ಜನರಿದ್ದಾರೆ. ಸವಿತಾ ಸಮಾಜದಿಂದ ಒಬ್ಬ ಮಹಿಳಾ ಸದಸ್ಯೆ, ಹಳ್ಳಿಕಾರ್ ಸಮುದಾಯದ ಒಬ್ಬ ಪುರುಷ ಸದಸ್ಯ, ಆರ್ಯವೈಶ್ಯ ಸಮುದಾಯದಿಂದ ಒಬ್ಬ ಮಹಿಳಾ ಸದಸ್ಯೆ, ಬಲಿಜ ಸಮುದಾಯದಿಂದ 3 ಜನ ಮಹಿಳಾ ಸದಸ್ಯೆಯರು ಈ ಬಾರಿ ಆಯ್ಕೆಯಾಗಿದ್ದಾರೆ.
ಈ ಬಾರಿಯ ಅಧ್ಯಕ್ಷ ಸ್ಥಾನದ ರೇಸ್‍ನಲ್ಲಿ 2ನೇ ವಾರ್ಡ್ ಪರಿಶಿಷ್ಟ ಜಾತಿಗೆ ನಿಗದಿ ಪಡಿಸಿರುವ ಮೀಸಲಾತಿಯಲ್ಲಿ ಆಯ್ಕೆಯಾಗಿರುವ ಎಂ.ವಿ.ಗೋವಿಂದರಾಜು (ಮಾಜಿ ಪುರಸಭಾಧ್ಯಕ್ಷ), 7ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ ಪುಟ್ಟಮ್ಮ (ಮರು ಆಯ್ಕೆ), 17ನೇ ವಾರ್ಡ್ ಪರಿಶಿಷ್ಟ ಜಾತಿ ಎಂ.ಎಸ್.ಚಂದ್ರಶೇಖರ್ (ಮರು ಆಯ್ಕೆ), 4ನೇ ವಾರ್ಡ್ ಸಾಮಾನ್ಯ ಆಲೀಮುಲ್ಲಾ (ಮರು ಆಯ್ಕೆ), ನೂತನವಾಗಿ ಸದಸ್ಯರಾಗಿ ಆಯ್ಕೆಯಾಗಿರುವ 20ನೇ ವಾರ್ಡ್ ಸಾಮಾನ್ಯ ಮಹಿಳೆ ರಾಧಿಕ ಆನಂದಕೃಷ್ಣ, 10ನೇ ವಾರ್ಡ್ ಹಿಂದುಳಿದ ವರ್ಗ(ಎ) ಮಹಿಳೆ ಗಿರಿಜಾ, 22ನೇ ವಾರ್ಡ್ ಸಾಮಾನ್ಯ ಮಹಿಳೆ ಜಿ.ಆರ್.ಸ್ಮಜಾತ ಇದ್ದಾರೆ.
ಉಪಾಧ್ಯಕ್ಷರ ರೇಸ್‍ನಲ್ಲಿ 7ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ ಪುಟ್ಟಮ್ಮ ನೂತನವಾಗಿ ಆಯ್ಕೆಯಾಗಿರುವ 3ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ, ನಸೀಮಾಬಾನು 14ನೇ ವಾರ್ಡ್ ಸಾಮಾನ್ಯ ಮಹಿಳೆ, ಎನ್.ಬಿ.ಗಾಯತ್ರಿ 12ನೇ ವಾರ್ಡ್ ಸಾಮಾನ್ಯ ಮಹಿಳೆ, ಎನ್.ಶೋಭಾರಾಣಿ 18ನೆ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ, ನಾಗಲತಾ ಲೋಕೇಶ್ ಸ್ಪರ್ಧೆಯಲ್ಲಿದ್ದು ಆಕ್ಷಾಂಕ್ಷಿಗಳಾಗಿದ್ದಾರೆ.
ತೀವ್ರ ಬರಪೀಡಿತ ಪ್ರದೇಶವಾಗಿರುವ ಮಧುಗಿರಿ ಪಟ್ಟಣವು ಹಲವು ದಶಕಗಳಿಂದ ಅಭಿವೃದ್ದಿಯನ್ನು ಕಂಡಿರಲಿಲ್ಲ. 2013-18 ಸದಸ್ಯರ ಆಳ್ವಿಕೆಯಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರದಿಂದ ಬಂದಂತಹ ಅನುದಾನಗಳನ್ನು ಬಳಸಿಕೊಳ್ಳುವಲ್ಲಿ ಸ್ಥಳೀಯ ಆಡಳಿತ ಅಷ್ಟೇನೂ ಯಶಸ್ವಿಯಾಗದಿದ್ದರೂ, ಶಾಸಕರಾಗಿದ್ದ ಕೆ.ಎನ್ ರಾಜಣ್ಣನವರ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದೆ. ಈ ಒಂದು ಅವಧಿಯಲ್ಲಿ ಪುರಸಭೆಯ ಕಾಯಿದೆಯ ಪ್ರಕಾರ ಕನಿಷ್ಠ ತಿಂಗಳಿಗೊಂದರಂತೆ ಸಭೆಗಳನ್ನು ನಡೆಸಬೇಕು. ಆದರೆ ಇದೂವರೆವಿಗೂ ಸಾಮಾನ್ಯ ಸಭೆ 15, ವಿಶೇಷ ಸಭೆ 12, ಆಯ-ವ್ಯಯ 5 ಸಭೆಗಳು ನಡೆದಿವೆ. 2018 ರಿಂದ ಪ್ರತಿ ಸಭೆಗೆ ಹಾಜರಾಗುವ ಸದಸ್ಯರಿಗೆ 1200 ರೂ., ಉಪಾಧ್ಯಕ್ಷರಿಗೆ 2400 ರೂ., ಅಧ್ಯಕ್ಷರಿಗೆ 4800 ರೂಪಾಯಿಗಳಿಗೆ ಗೌರವ ಧನವನ್ನು ಪರಿಷ್ಕರಣೆ ಮಾಡಲಾಗಿದೆ.
ಜನ ಮಾನಸದಲ್ಲಿ ಉಳಿದಿರುವ ಶಾಶ್ವತ ಕಾಮಗಾರಿಗಳೆಂದರೆ ಎ ಆರ್ ಟಿ ಓ ಕಚೇರಿ, ದಂಡಿನ ಮಾರಮ್ಮನ ದೇವಾಸ್ಥಾನದ ಅಭಿವೃದ್ಧಿ, ಸಿದ್ದರಕಟ್ಟೆ ಅಭಿವೃದ್ಧಿ, ಸಾಲು ಮರದ ತಿಮ್ಮಕ್ಕನ ಉದ್ಯಾನವನ, ಸರಕಾರಿ ಬಸ್ ಘಟಕ ಮತ್ತು ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿ, ರಸ್ತೆ ಮತ್ತು ಮೋರಿಗಳ ಅಗಲೀಕರಣ ಹಾಗೂ ನಿರ್ಮಾಣ. ಲೋಕೋಪಯೋಗಿ ಇಲಾಖೆಯ ಇಇ ಆಫೀಸ್, ತಾಪಂ ಕಟ್ಟಡ, ಪುರಸಭಾ ಕಟ್ಟಡ ಹೀಗೆ ಹತ್ತು ಹಲವು ಅಭಿವೃಧ್ಧಿ ಕಾರ್ಯಗಳಿಂದ ಹಿಂದಿನ ಶಾಸಕರ ಅವಧಿಯಲ್ಲಿ ಪಟ್ಟಣವು ಸಮಗ್ರ ಅಭಿವೃದ್ಧಿ ಕಂಡಿತ್ತು.
ಹೊಸದಾಗಿ ಆಯ್ಕೆಯಾಗಿರುವ 13 ಜನ ಸದಸ್ಯರಿಗೆ ಅನುಭವದ ಕೊರತೆ ಇದ್ದು, ಉಳಿದ 10 ಜನ ಸದಸ್ಯರು ಈಗಾಗಲೆ ಪುರಸಭೆಯ ಅನುಭವ ಪಡೆದುಕೊಂಡಿದ್ದಾರೆ. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದು, 50 ಕೋಟಿ ರೂ. ಅನುದಾನದ ಯುಜಿಡಿ ಕಾಮಗಾರಿ ಜೊತೆಗೆ, ಹೇಮಾವತಿ ನೀರನ್ನು ಈಗಾಗಲೇ ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ಮನೆಯ ಕೊಳಾಯಿಗಳಿಗೆ ಮೀಟರ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನ್ಯಾಯಾಲಯದಲ್ಲಿರುವುದರಿಂದ ನೂತನ ಕಮಿಟಿಯ ಜವಾಬ್ದಾರಿಯು ಹೆಚ್ಚಿದೆ. ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ವಾರ್ಡ್‍ಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಮ್ಮ ಸೇವೆ ಮಾಡುತ್ತೇವೆ ಎಂದು ಕರಪತ್ರಗಳನ್ನು ಹಂಚಿ ಮತ ಯಾಚನೆ ಮಾಡಿ ಆಶೀರ್ವದಿಸುವಂತೆ ಕೋರಿದ್ದ ಸದಸ್ಯರು, ಅದೇ ಮಾತಿನಂತೆ ನಡೆದುಕೊಳ್ಮ್ಳತ್ತಾರೆಯೆ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
ಜೆಡಿಎಸ್‍ಗೆ ಮತ್ತೆ ಮುಖಭಂಗ ಕಳೆದ ಪುರಸಭೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬಹುಮತವಿಲ್ಲವಿದ್ದರೂ ಸಹ ಕಾಂಗ್ರೆಸ್‍ನವರು ಅವಿರೋಧ ಆಯ್ಕೆಯಾಗ ಬಾರದೆಂಬ ಉದ್ದೇಶದಿಂದ ಪುರಸಭೆಗೆ ಗೆಲುವಿನಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿರುವ ಚಂದ್ರಶೇಖರ್ ಬಾಬು ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಸೋಲು ಕಂಡಿದ್ದು, ಈ ಬಾರಿಯು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಹ್ಯಾಟ್ರಿಕ್ ಸೋಲಿನ ಸಾಧನೆ ಮಾಡುವರೆ..?
ಹಾಲಿ ಶಾಸಕರಿದ್ದರೂ ಬಹುಮತ ಪಡೆಯುವಲ್ಲಿ ವಿಫಲವಾದ ಜೆ.ಡಿ.ಎಸ್– ಕಳೆದ ಎಂಟು ವರ್ಷಗಳಿಂದ ಜೊತೆಯಲ್ಲಿದ್ದ ಮುಖಂಡರ ಮಾತಿಗೆ ಬೆಲೆ ಕೊಡದೆ ಪುರಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡಿದರು. ಒಂದೇ ಸಮುದಾಯದವರಿಗೆ ಮಣೆ ಹಾಕಿ ದುಷ್ಟಕೂಟದ ಮಾತುಗಳಿಗೆ ಬೆಲೆ ನೀಡಿದರು. ಬಹುಸಂಖ್ಯಾತರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೇರ್ಪಡೆಗೊಂಡವರಿಗೆ ಹೆಚ್ಚು ಟಿಕೆಟ್ ನೀಡಿ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದರು. ಶಾಸಕರಾಗಿ ಆಯ್ಕೆಯಾಗಿ ನೂರು ದಿನ ಕಳೆದರೂ ಯಾವುದೇ ಅನುದಾನ ತರಲಿಲ್ಲ. ಪುರಸಭಾ ಚುನಾವಣೆಯಲ್ಲಿ ವಾಮಾಚಾರದಂತಹ ಕೃತ್ಯಗಳಿಗೆ ಕೈ ಹಾಕಿದರು. ಕೆಲ ಜೆ.ಡಿ.ಎಸ್ ಅಭ್ಯರ್ಥಿಗಳು ನಾವೇ ಅಧ್ಯಕ್ಷರೆಂದು ಪ್ರಚಾರ ಮಾಡುವುದರ ಜೊತೆಗೆ, ಬೇರೆ ಅಭ್ಯರ್ಥಿಗಳನ್ನು ಕಾಲೆಳೆದರು. ಇವೆಲ್ಲಾ ಕಾರಣಗಳಿಂದ ಈ ಬಾರಿ ಜೆ.ಡಿ.ಎಸ್ ಪಕ್ಷ ಬಹುಮತ ಪಡೆಯಲು ವಿಫಲವಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
