ಕುಣಿಗಲ್ :
ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ಕುಮಾರ್ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಶಾಖೆಗಳಿಗೂ ಭೇಟಿ ನೀಡಿ ಪರಿಶೀಲಿಸಿ ಕೆಲವೊಂದು ಮಾರ್ಪಾಡು ಮಾಡಿಕೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಮಂಗಳವಾರ ಮಧ್ಯಾಹ್ನ ದಿಢೀರ್ ಆಗಮಿಸಿದ ಜಿಲ್ಲಾಧಿಕಾರಿ ಸರ್ವೆ ಕಚೇರಿಗೆ ತೆರಳಿದ ಸಂದರ್ಭದಲ್ಲಿ ರೈತನೊಬ್ಬ ಹಣಕಟ್ಟಿದ್ದರೂ ನಕ್ಷೆ ತಯಾರು ಮಾಡಿಕೊಟ್ಟಿಲ್ಲವೆಂಬ ದೂರಿನ ಮೇರೆಗೆ ಸರ್ವೆ ಸೂಪರ್ವೈಸರ್ಗೆ ಈ ವಿಚಾರವಾಗಿ ತರಾಟೆಗೆ ತೆಗೆದುಕೊಂಡು ರೈತರನ್ನು ವೃಥಾ ಕಚೇರಿಗೆ ಅಲೆಸದೆ ಕೆಲಸಮಾಡಿ ಎಂದು ತಾಕೀತು ಮಾಡಿದರು.
ನಂತರ ಚುನಾವಣೆ ಆಹಾರ, ರೈತ ಜಮೀನುಗಳ ದಾಖಲಾತಿ, ಜನನ ಮರಣ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಸಾರ್ವಜನಿಕರ ಜಮೀನುಗಳ ಹಾಗೂ ಜನನ ಮರಣ ದಾಖಲೆಗಳನ್ನು ಇಡುವ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿ ಅಸಮಧಾನಗೊಂಡು ದಾಖಲೆ ಕಡತಗಳನ್ನು ಸುರಕ್ಷಿತವಾಗಿ ಹಾಗೂ ಸುವ್ಯವಸ್ಥಿತವಾಗಿರುವಂತೆ ಮಾರ್ಪಡಿಸಿ ಒಂದು ವಾರದೊಳಗೆ ಫೋಟೋ ಸಹಿತ ವರದಿ ನೀಡುವಂತೆ ತಹಸೀಲ್ದಾರ್ರವರಿಗೆ ಸೂಚಿಸಿದರು.
ನಂತರ ಪಹಣಿ, ಎಂ.ಆರ್. ಇತರೆ ದಾಖಲೆ ನೀಡುವ ಭೂಮಿ ಕೇಂದ್ರಕ್ಕೆ ತೆರಳಿ ಪರಿಶೀಲಿಸಿ ರೈತರನ್ನು ಅಲೆಸದೆ ದಾಖಲೆಗಳನ್ನು ನೀಡುವಂತೆ ಸೂಚಿಸಿದ ವೇಳೆ, ಕೆಲವು ರೈತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಬರೆಯಲು ಹೊರಗಡೆ 20 ರಿಂದ 50 ರೂ.ಗಳನ್ನು ನೀಡಬೇಕು ಎಂಬ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನೀವುಗಳು ಯಾವುದೇ ಅರ್ಜಿ ಬರೆದು ಸಲ್ಲಿಸುವ ಅಗತ್ಯವಿಲ್ಲ. ಕೇವಲ ನಿಖರವಾದ ದಾಖಲೆಗಳನ್ನು ಕಂಪ್ಯೂಟರ್ ವಿಭಾಗಕ್ಕೆ ನೀಡಿದರೆ ಸಾಕು ಎಂದ ಅವರು, ತಾಲ್ಲೂಕಿನಲ್ಲಿ ರೈತರ 9 ಸಾವಿರ ಪಹಣಿಗಳಲ್ಲಿರುವ ಸಣ್ಣ ಪುಟ್ಟ ದೋಷಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದರು.
ತಾಲ್ಲೂಕು ಕಚೇರಿ ಆವರಣದಲ್ಲಿ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಶೌಚಾಲಯ ಇಲ್ಲದಿರುವುದನ್ನು ಪರಿಶೀಲಿಸಿ ಇಲಾಖೆಯಲ್ಲಿಯೇ ಶೌಚಾಲಯ ನಿರ್ಮಾಣಕ್ಕೆ ಅನುದಾನ ಲಭ್ಯವಿದೆ ಬಳಸಿಕೊಂಡು ಶೀಘ್ರವಾಗಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ರವರಿಗೆ ಸೂಚಿಸಿ ನೂತನವಾಗಿ ನಿರ್ಮಾಣವಾಗುತ್ತಿರುವ ತಾಲ್ಲೂಕು ಕಚೇರಿಯ ಕಟ್ಟಡವನ್ನು ಪರಿಶೀಲನೆ ಮಾಡಿದರು.
ಕೆಲವು ರೈತರು ಹೋಬಳಿ ಕೇಂದ್ರಗಳಲ್ಲಿ ಪಹಣಿ ನೀಡುವುದಕ್ಕೆ ತಾಂತ್ರಿಕ ಸಮಸ್ಯೆಗಳನ್ನು ಹೇಳುತ್ತಾರೆ. ಆದ್ದರಿಂದ ತಾಲ್ಲೂಕು ಕೇಂದ್ರದಲ್ಲಿಯೂ ಹೋಬಳಿಗೆ ಸಂಬಂಧಿಸಿದ ಪಹಣಿ ಹಾಗೂ ಇತರೆ ದಾಖಲೆಗಳನ್ನು ನೀಡಬೇಕೆಂದು ಮನವಿ ಮಾಡಿದಾಗ ಪರಿಶೀಲಿಸಿ ಕ್ರಮತೆಗೆದುಕೊಳ್ಳಲಾಗುವುದು ಎಂದರು. ತಾಲ್ಲೂಕಿನಲ್ಲಿರುವ ಗ್ರಾಮಗಳನ್ನು ಹಂತ ಹಂತವಾಗಿ ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡುವುದಾಗಿಯೂ ತಿಳಿಸಿದರು. ತಹಸೀಲ್ದಾರ್ ಎಸ್. ನಾಗರಾಜು ಸೇರಿದಂತೆ ಕಂದಾಯ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
