ತುಮಕೂರು
ಮಕ್ಕಳನ್ನು ಉತ್ತಮ ದಾರಿಯಲ್ಲಿ ಸಾಗುವಂತೆ ಬೆಳೆಸುವ ಜವಾಬ್ದಾರಿ ಹೊತ್ತ ತಾಯಿ, ತಂದೆಯರಿಗೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಬೆಳಗುವ ಮಾರ್ಗದರ್ಶಕ ಗುರುವೇ ಆಗಿರುತ್ತಾನೆ. ಗುರುವಿನ ಸ್ಥಾನ ಅವನು ನೀಡುವಂತಹ ಜ್ಞಾನ, ಪಾಠ ಮಾಡಬಲ್ಲ ಕೌಶಲ್ಯಗಳಿಂದಲೇ ನಿರ್ಧರಿಸಲ್ಪಡುತ್ತದೆ. ಆ ಸ್ಥಾನವು ಎಲ್ಲ ಜಾತಿ, ಮತ ಧರ್ಮಗಳಿಗೆ ಮೀರಿದ್ದು, ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ. ಕೆ.ಬಿ. ಜಯಣ್ಣ ಹೇಳಿದರು.
ಅವರು ವಿದ್ಯಾನಿಧಿ ಕಾಲೇಜಿನಲ್ಲಿ ತುಮಕೂರು ರೌಂಡ್ ಟೇಬಲ್ -173 ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಗುರುದೇವೋಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ. ಎನ್. ಬಿ. ಪ್ರದೀಪ್ ಕುಮಾರ್, ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ನಿಜವಾಗಿಯೂ ಅತ್ಯಂತ ಸಂತೋಷದ ಕೆಲಸ. ಸಮರ್ಥ, ಸದೃಢ, ಸಶಕ್ತ ಸಮಾಜವೊಂದು ರೂಪುಗೊಳ್ಳುವುದು ಉತ್ತಮ ಶಿಕ್ಷಕರಿಂದ. ಭವಿಷ್ಯದ ಶಿಕ್ಷಕರು ತಾವಾಗಬೇಕು ಎಂಬ ಆಶಯವುಳ್ಳ ವಿದ್ಯಾರ್ಥಿಗಳು ಅದೇ ತಮ್ಮ ಬದುಕಿನ ಧ್ಯೇಯವೆಂದು ಸ್ವೀಕರಿಸುವುದಾದರೆ ಅದಕ್ಕೆ ಇಂದೇ ಸೂಕ್ತವಾದ ದಿನ ಎಂದರು.
ತುಮಕೂರು ರೌಂಡ್ ಟೇಬಲ್ 173 ಕಾರ್ಯದರ್ಶಿ ಶ್ರೀ.ಆಕಾಶ್ ಮಾಡನಾಡಿ ಮೂಲಭೂತ ಸೌಕರ್ಯಗಳ ಕೊರತೆಯಿರುವ ಶಾಲೆಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುವಲ್ಲಿ ರೌಂಡ್-ಟೇಬಲ್ ಶ್ರಮಿಸುತ್ತಿದೆ. ಜೊತೆಗೆ ಸಮಾಜದ ರೂವಾರಿಗಳಾದ ಶಿಕ್ಷಕರನ್ನು ಅಭಿವಂದಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಶ್ರೀ.ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀ. ಎಸ್.ಡಿ. ರಾಜಶೇಖರ್, ಮಾರುತಿ ಇಂಟರ್‍ನ್ಯಾಷನಲ್ ಸ್ಕೂಲ್ ಬೆಳಗುಂಬದ ಶಿಕ್ಷಕಿ ಶ್ರೀಮತಿ. ಮಂಜುಳ ಹೆಚ್. ಉಪ್ಪಾರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀ.ಶಿವಕುಮಾರ್, ಸೈಂಟ್‍ಮೇರೀಸ್ ಪ್ರೌಢಶಾಲೆಯ ಶಿಕ್ಷಕ ಶ್ರೀ.ಬಿ.ಸಿ.ಶಿವಕುಮಾರ್, ಭಾರತ್ ಪಬ್ಲಿಕ್ ಸ್ಕೂಲ್, ಚೇಳೂರಿನ ಶಿಕ್ಷಕರಾದ ಶ್ರೀ.ನಾರಾಯಣ ಮೂರ್ತಿ.ಹೆಚ್. ಪ್ರೂಡೆನ್ಸ್ ಸ್ಕೂಲ್ ತುಮಕೂರಿನ ಉಪಪ್ರಾಂಶುಪಾಲರಾದ ಶ್ರೀ.ದಯಾನಂದ್ ಇವರನ್ನು ಸನ್ಮಾನಿಸಲಾಯಿತು.
ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಮತ್ತು ತುಮಕೂರು ರೌಂಡ್ ಟೇಬಲ್ 173 ಅಧ್ಯಕ್ಷರಾದ ಶ್ರೀ. ಭರತ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಹೇಮಲತ. ಎಂ.ಎಸ್. ಪ್ರಾರ್ಥಿಸಿದರು. ಉಪನ್ಯಾಸಕ ಶ್ರೀ. ಗೋವಿಂದರಾಜು ಸ್ವಾಗತಿಸಿ, ವಂದಿಸಿದರು.