ಚಿತ್ರದುರ್ಗ
ಡಾ:ರಾಧಾಕೃಷ್ಣನ್‍ರವರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾದರಿಯಾಗಿ ಹಲವಾರು ಸಂಗತಿಗಳನ್ನು ತಿಳಿಸುವಲ್ಲಿ ಆದರ್ಶವಾಗಿದ್ದಾರೆ ಎಂದು ಜಿ.ಪಂ.ಅಧ್ಯಕ್ಷೆ ಸೌಭಾಗ್ಯಬಸವರಾಜನ್ ತಿಳಿಸಿದರು.
ಅವರು ಸೆ.5 ರಂದು ತ.ರಾ.ಸು. ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರ್ವಪಲ್ಲಿ ಡಾ: ರಾಧಾಕೃಷ್ಣನ್‍ರವರ ಜನ್ಮದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಡಾ:ರಾಧಾಕೃಷ್ಣನ್‍ರವರು ರಾಜಕಾರಣಿಯಾಗಿ, ಅಧ್ಯಾಪಕ, ಪ್ರಾಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗದರ್ಶಕರಾಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ. ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಶಿಕ್ಷಕರೆಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಪ್ರೀತಿ, ಸಂಭ್ರಮ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ತಾಯಿಯಾಗಿ ಜವಾಬ್ದಾರಿಯುತವಾದ ಕೆಲಸ ನಿರ್ವಹಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ.ಶಾಲೆಗಳಲ್ಲಿ ಪ್ರತಿಭಾಕಾರಂಜಿ, ಕ್ರೀಡೆ, ಸಂಗೀತ, ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವುದರ ಜೊತೆಗೆ ತಾವು ಕೂಡ ವಿದ್ಯಾರ್ಥಿಗಳಾಗಿದ್ದ ಜೀವನವನ್ನು ಮೆಲುಕು ಹಾಕುತ್ತಾ, ಮಕ್ಕಳ ಜೊತೆ ಕೈಜೋಡಿಸಿ ಕಲಿಯುವ ಅವಕಾಶ ಶಿಕ್ಷಕ ವರ್ಗಕ್ಕೆ ಮಾತ್ರ ಇದೆ ಎಂದು ತಿಳಿಸಿದರು.
ಕಳೆದ ಬಾರಿ ಜಿಲ್ಲೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 19 ರ ಸ್ಥಾನದಲ್ಲಿತ್ತು. ಈ ಬಾರಿ 10 ನೇ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕು. ಶಿಕ್ಷಕರು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕಾಗಿದೆ. ಕೆಲವೊಂದು ಶಾಲೆಗಳಲ್ಲಿ ಶೌಚಾಲಯ, ನೀರಿನ ಕೊರತೆ ಇದ್ದರೂ ಕೂಡ ಶಿಕ್ಷಕರು ಅದನ್ನೆಲ್ಲ ನಿಭಾಯಿಸಿಕೊಂಡು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಶಿಕ್ಷಣವನ್ನು ನೀಡಿ ದೇಶದಲ್ಲಿ ಅನಕ್ಷರತೆಯನ್ನು ಹೋಗಲಾಡಿಸಿ, ಜ್ಞಾನವನ್ನು ಬೆಳೆಸುವಂತೆ ಕ್ರಿಯಾಶೀಲರಾಗಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಡಾ: ರಾಧಾಕೃಷ್ಣನ್‍ರವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯೆಂದು ಆಚರಿಸಲಾಗುತ್ತಿದೆ. ಡಾ:ರಾಧಾಕೃಷ್ಣನ್‍ರವರು ತಮಿಳುನಾಡಿನ ಹೊಸೂರು ತಾಲ್ಲೂಕಿನಲ್ಲಿ ಜನಿಸಿದರು. ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳ ಕಲಿಕೆಯ ಶ್ರೇಯಸ್ಸಿಗೆ ಶ್ರಮವಹಿಸಿದರು ಎಂದು ತಿಳಿಸಿದರು.
ಯಾವುದೇ ಒಂದು ದೇಶ ಬಲಿಷ್ಠ ಹಾಗೂ ಅಭಿವೃದ್ದಿ ಕಡೆ ಕೊಂಡೊಯ್ಯಬೇಕಾದರೆ ಅದಕ್ಕೆ ಶಿಕ್ಷಕರು ಮಕ್ಕಳಿಗೆ ಕಲಿಸುವ ಶಿಕ್ಷಣವೇ ಇವುಗಳಿಗೆ ಪೂರಕವಾಗಿದೆ. ಹಿಂದಿನ ಕಾಲದಲ್ಲಿ ಶಿಕ್ಷಣ ಕಲಿಯುವುದು ತುಂಬಾ ಕಷ್ಟಕರವಾಗಿತ್ತು. ಅದಕ್ಕೆ ಕಾರಣ ಆರ್ಥಿಕ ಸ್ಥಿತಿಗತಿ ಮತ್ತು ಪ್ರತ್ಯೇಕವಾದ ಶಾಲಾ ಕೊಠಡಿಗಳ ವ್ಯವಸ್ಥೆ ಇಲ್ಲದಿರುವುದು, ಆಗಿನ ಶಿಕ್ಷಕರು ಆಲದ ಮರದ ಕೆಳಗೆ, ಬಸವಣ್ಣನ ಕಟ್ಟೆ ಮೇಲೆ ಕುಳಿತು ಪಾಠಪ್ರವಚನ ಕಲಿಸುವ ಪರಿಸ್ಥಿತಿಯಿತ್ತು ಎಂದು ನೆನಪಿಸಿಕೊಂಡರು.
ದೇಶದಲ್ಲಿ ಶಿಕ್ಷಕರು ಎಲ್ಲಿವರೆಗೆ ಸಂತೋಷದಿಂದ ಇರುವರೋ ಅಲ್ಲಿಯವರೆಗೆ ಒಂದು ದೇಶ ಬಲಿಷ್ಠವಾಗಿ ಬೆಳೆಯಲು ಸಾಧ್ಯ. ಭಾರತ ದೇಶದ ಮಕ್ಕಳು ಸೂಕ್ಷ್ಮ ಕಲಿಕೆಯಂತಹ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದಾರೆಂದು ಆಗಿನ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರೇ ಒಂದು ಸಭೆಯಲ್ಲಿ ಭಾರತದ ಮಕ್ಕಳನ್ನು ಹಾಡಿ ಹೊಗಳಿದ್ದಾರೆಂದು ಹೇಳಿದರು.
ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಅವುಗಳನ್ನು ಭರ್ತಿ ಮಾಡಿಕೊಳ್ಳುವಂತೆ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಲ್ಲಿ ಕಟ್ಟಿಸಿದಂತಹ ಶಾಲಾ ಕಟ್ಟಡಗಳು ಇಂದು ಶಿಥಿಲಾವಸ್ಥೆಯಲ್ಲಿದೆ. ಮರುನಿರ್ಮಾಣಕ್ಕೆ ರೂ.150/- ಕೋಟಿ ಜಿಲ್ಲೆಗೆ ಬೇಕಾಗಿದೆ. ಕೂಡಲೇ ಸರ್ಕಾರವು ಶಾಲಾ ಕಟ್ಟಡಗಳ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದರೆ ಸೂಕ್ತವೆಂದು ಅವರು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ ಡಾ: ರಾಧಾಕೃಷ್ಣನ್‍ರವರು ಸ್ವಾತಂತ್ರ್ಯ ಬಂದ ಮೇಲೆ ಎರಡನೇ ಉಪರಾಷ್ಟ್ರಪತಿಯಾಗಿ ಅತ್ಯುನ್ನತವಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕರು ಕಾರ್ಯ ನಿರ್ವಹಿಸುವ ವೃತ್ತಿಯಲ್ಲಿ ದೇವರ ಸಮಾನ, ನಾವುಗಳು ಅವರನ್ನು ಗೌರವಿಸಬೇಕು. ಶಿಕ್ಷಕರಿಗೆ ತೊಂದರೆಯಾಗದಂತೆ ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಎರಡು ವರ್ಷಗಳಿಂದ ಸ್ಥಗಿತಗೊಂಡಿರುವ ವರ್ಗಾವಣೆಯನ್ನು ಪುನರಾರಂಭಿಸುವಂತೆ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಕರ ಸಂಘದವರು ಶಾಸಕರಿಗೆ ಮನವಿ ಸಲ್ಲಿಸಿದರು.
ಸಮಾರಂಭದಲ್ಲಿ 2018 ರ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ದಿ:6-9-2017 ರಿಂದ 31-8-2018 ರ ಅವಧಿಯಲ್ಲಿ ನಿವೃತ್ತಿ ಮತ್ತು ನಿಧನ ಹೊಂದಿರುವ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂಥೋನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯೆ ಜಯಮ್ಮಬಾಲರಾಜ್, ತಾ.ಪಂ.ಅಧ್ಯಕ್ಷ ವೇಣುಗೋಪಾಲ್, ಜಿ.ಪಂ. ಸದಸ್ಯರಾದ ಆರ್.ಕೃಷ್ಣಮೂರ್ತಿ, ಆರ್.ನರಸಿಂಹರಾಜು, ಕೆ.ಟಿ.ಗುರುಮೂರ್ತಿ, ತಹಶೀಲ್ದಾರ್ ಮಲ್ಲಿಕಾರ್ಜುನ, ಪ್ರೊಬೇಷನರಿ ಉಪವಿಭಾಗಾಧಿಕಾರಿಗಳಾದ ಸುರೇಖಾ, ರಘು, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಪದಾಧಿಕಾರಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ ಸ್ವಾಗತಿಸಿದರು. ಚಂದ್ರಪ್ಪ ಕಲಾತಂಡದವರಿಂದ ನಾಡಗೀತೆ ಹಾಡಲಾಯಿತು.