ಬೆಂಗಳೂರು
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಹತ್ಯೆಯಾಗಿ ಬುಧವಾರಕ್ಕೆ(ಸೆ. 5) ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗದ ಮುಖಂಡರುಗಳು ಹತ್ಯೆ ಹಿಂದಿರುವ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದರೆ, ಗೌರಿ ಹತ್ಯೆಯಲ್ಲಿ ಸಿಲುಕಿಸಿ ಸನಾತನ ಸಂಸ್ಥೆಯನ್ನು ನಿಷೇಧ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೌರ್ಯ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂದು ಹಮ್ಮಿಕೊಂಡಿದ್ದ ರಾಜಭವನ ಚಲೋ ಹೋರಾಟದಲ್ಲಿ ಗೌರಿ ಬಳಗದ ಮುಖಂಡರು, ಕಾರ್ಯಕರ್ತರು, ವಿಚಾರವಾದಿಗಳ ಹತ್ಯೆ ಹಿಂದಿರುವ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದರೆ, ಬನಪ್ಪ ಪಾರ್ಕ್ನಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಸಿದ ಹಿಂದೂ ಜನಜಾಗೃತಿ ಸಮಿತಿಯ ಮುಖಂಡರು, ಕಾರ್ಯಕರ್ತರು, ಗೌರಿಲಂಕೇಶ್ ಹತ್ಯೆಯಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಸನಾತನ ಸಂಸ್ಥೆಯನ್ನು ನಿಷೇಧಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.
ರಾಜ ಭವನ ಚಲೋ ಮೆರವಣಿಗೆ ಯನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಜರ್ಮನಿಯ ಹಿಟ್ಲರ್ನಿಂದ ಎರವಲು ಪಡೆದ ಸಾಂಸ್ಕೃತಿಕ ರಾಷ್ಟ್ರೀಯತೆಯ ಸಿದ್ಧಾಂತವನ್ನು ಆಧರಿಸಿ ಆರ್ಎಸ್ಎಸ್ ಜನ್ಮತಳೆಯಿತು. ಈ ತತ್ವ ಭಾರತದ ನೆಲಕ್ಕೆ ಒಗ್ಗುವುದಿಲ್ಲ. ಭಾರತದಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಗೆ ಭಾರತ ಜೋತು ಬೀಳಬೇಕು ಎಂದು ಆರ್ಎಸ್ಎಸ್ ಬಯಸುತ್ತದೆ ಎಂದು ಹೇಳಿದರು.
ಗೌರಿ ಬಳಗ: ಮೇಲ್ಜಾತಿಗಳಿಗೆ ಅನುಕೂಲ ಮಾಡಿಕೊಡಲು ಸಮಾಜದ ಇತರೆಲ್ಲ ಸಮುದಾಯಗಳನ್ನು ಹೀಗಳೆಯುತ್ತದೆ. ವೈದಿಕ ಪರಂಪರೆ ಮತ್ತು ಭಾರತದ ಮೂಲ ಅಧ್ಯಾತ್ಮಕ್ಕೆ ಆರ್ಎಸ್ಎಸ್ ಒಂದು ಬೆದರಿಕೆ ಎಂಬ ವಿಚಾರದಲ್ಲಿ ನನಗೆ ಎಂದಿಗೂ ಗೊಂದಲ ಇರಲಿಲ್ಲ. ಆರ್ಎಸ್ಎಸ್ ಕುರಿತಂತೆ ಇರುವ ನನ್ನ ತಕರಾರು ಅಧ್ಯಾತ್ಮಿಕವಾದುದು ಎಂದು ತಿಳಿಸಿದರು.
ಆರ್ಎಸ್ಎಸ್ ಮೊದಲ ಭಯೋತ್ಪಾದಕ ಕೃತ್ಯ ಮಹಾತ್ಮ ಗಾಂಧಿಜೀ ಅವರನ್ನು ಕೊಲೆ ಮಾಡಿದ್ದು, ಆನಂತರ ವಿಚಾರವಾದಿಗಳ ಹತ್ಯೆಗಳನ್ನು ಮುಂದುವರೆಸಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಓರ್ವ ಸಂಘ ಪರಿವಾರದ ಪ್ರಚಾರಕ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವೆ ಲಲಿತಾ ನಾಯ್ಕ್ ಮಾತನಾಡಿ, ಸಾಮಾಜಿಕ ಹೋರಾಟಗಾರ ಅಗ್ನಿವೇಶ ಸ್ವಾಮೀಜಿ ಮೇಲೆ ಹಲ್ಲೆ ನಡೆಸುವುದು ಖಂಡನೀಯ.ನಮಗೂ ಹಲ್ಲೆ, ಪುಡಾಂಟಿಕೆ ಮಾಡುವುದು ಬರುತ್ತದೆ.ಆದರೆ, ಸಂವಿಧಾನ ಬಾಹಿರ ಎಂದು ನಾವು ಮಾಡುವುದಿಲ್ಲ ಎಂದು ಹೇಳಿದರು.
ಹಿರಿಯ ಸಾಹಿತಿ ರಹಮತ್ ತರೀಕೆರೆ ಮಾತನಾಡಿ, ಮೂಲಭೂತವಾದಿಗಳು ಕೇವಲ ಲೇಖಕರ, ಮಾನವ ಹಕ್ಕಗಳ ಹೋರಾಟಗಾರರ ಮೇಲೆ ನಡೆಯುತ್ತಿಲ್ಲ. ಇಡೀ ಜನಸಮುದಾಯದ ಸ್ವಾಭಿಮಾನದ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬೇಡಿಕೆಗಳು: ಸನಾತನ ಸಂಸ್ಥೆ ಮತ್ತು ಹಿಂದೂ ಜನ ಜಾಗೃತಿ ಸಂಸ್ಥೆಗಳು ಭಯೋತ್ಪಾದಕ ಸಂಸ್ಥೆಯಂದು, ಘೋಷಿಸಬೇಕು. ಈ ಸಂಸ್ಥೆಗಳ ಭಯೋತ್ಪಾದಕ ಪ್ರಚಾರ ಮತ್ತು ಭಯೋತ್ಪಾದನಾ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕು ಮತ್ತು ಅವರ ಇತರ ಚಟುವಟಿಕೆ ಮೇಲೆ ನಿಗಾ ಇಡಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಬೇಕು.
%%%%%%%%%








