ಬೆನ್ನುಹುರಿ ಅಪಘಾತಕ್ಕೊಳಗಾದವರ ದಿನಾಚರಣೆಯಲ್ಲಿ ವಿಕಲಚೇತನರ ಅಳಲು

ದಾವಣಗೆರೆ:

 ನಾವು ಹೊರಗಡೆ ಹೋಗದೇ ಹಾಸಿಗೆಯಲ್ಲೇ ಇರಬೇಕಾ?, ನಮಗೆ ದುಡಿಯುವ ಕನಸಿದ್ದರೂ ನೀವೇಕೆ ಸಹಕಾರ ನೀಡುತ್ತಿಲ್ಲ?… ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಕೇಳಿದ್ದು, ಬೆನ್ನುಹುರಿ ಅಪಘಾತಕ್ಕೆ ಒಳಗಾಗಿ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಸ್ವಾಮಿ ವಿವೇಕಾನಂದ ಜಿಲ್ಲಾ ವಿಕಲಚೇತನರ ಸಂಘ ಹಾಗೂ ದಿ ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯಲ್ಲಿ ಏರ್ಪಡಿಸಿದ್ದ ವಿಶ್ವ ಬೆನ್ನುಹುರಿ ಅಪಘಾತಕ್ಕೊಳಗಾದವರ ದಿನಾಚರಣೆಯಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಿ.ಎಸ್.ಶಶಿಧರ್ ಮಾತನಾಡಿ, ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನರಿಗೆ ನಮ್ಮ ಇಲಾಖೆಯಿಂದ ವರ್ಡ್ ಮೇಡ್ ಛೇರ್, ತ್ರಿಚಕ್ರ ವಹಾನಗಳನ್ನು ನೀಡಲಾಗುತ್ತಿದೆ ಎನ್ನುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನ ಮಂಜುನಾಥ್, ಇನ್ನೂ ಜಿಲ್ಲೆಯಲ್ಲಿ ಹಲವರಿಗೆ ತ್ರಿಚಕ್ರವಾಹನ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ ಜಿ.ಎಸ್.ಶಶಿಧರ್, ತ್ರಿಚಕ್ರ ವಾಹನ ಫಲಾನುಭವಿಗಳ ಆಯ್ಕೆಗಾಗಿ ಜಿಲ್ಲಾ ಪಂಚಾತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರ ನೇತೃತ್ವದ ಸಮಿತಿ ಇದ್ದು, ಈ ಸಮಿತಿಯಲ್ಲಿ ವೈದ್ಯರು ಸೇರಿದಂತೆ ಹಲವರು ಇದ್ದಾರೆ. ಛೇರ್ ಹತ್ತಲು ಆಗದ ವಿಕಲಚೇತನರು, ಹೊರಗಡೆ ಹೋಗಿ ಏನು ಮಾಡಲು ಸಾಧ್ಯ? ಹೀಗಾಗಿ ಇಂಥವರಿಗೆ ತ್ರಿಚಕ್ರ ವಾಹನ ನೀಡಬಾರದು. ಅಕಸ್ಮಾತ್ ನೀಡಿದರೆ, ದುರುಪಯೋಗ ಆಗುವ ಸಾಧ್ಯತೆ ಇದೆ ಹಾಗೂ ನೀವು ತ್ರಿಚಕ್ರ ವಾಹನದಲ್ಲಿ ಹೊಗಡೆ ಹೋದಾಗ ಏನಾದರೂ ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ಸಮಿತಿ ಕೆಲವರಿಗೆ ತ್ರಿಚಕ್ರ ವಾಹನ ನೀಡದಿರಲು ತೀರ್ಮಾನಿಸಿದೆ ಎಂದರು.

 ಈ ವೇಳೆ ಮಾತನಾಡಿದ ವಿಕಲಚೇತನ ಮಂಜುನಾಥ್, ಹಾಗಾದರೆ ನಾವು ಮನೆ ಬಿಟ್ಟು ಹೊರಗಡೆ ಹೋಗದೇ, ಹಾಸಿಗೆಯಲ್ಲೇ ನರಳಬೇಕಾ? ನಾವು ಹೊರಗಡೆ ಹೋದಾಗ ನಮ್ಮ ಸಹಾಯಕ್ಕೆ ಸಂಬಂಧಿಕರನ್ನು ಅಥವಾ ಸ್ನೇಹಿತರನ್ನು ಕರೆದೊಯ್ಯುತ್ತೇವೆ. ಬಿಜಾಪುರ, ರಾಯಚೂರು ಜಿಲ್ಲೆಗಳಲ್ಲಿ ಎಲ್ಲರಿಗೂ ತ್ರಿಚಕ್ರ ವಾಹನ ನೀಡಲಾಗಿದೆ. ಇದು ಇಲ್ಲೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿ, ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಎಲ್ಲರಿಗೂ ತ್ರಿಚಕ್ರ ವಾಹನ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

 ಇದಕ್ಕೆ ದನಿ ಗೂಡಿಸಿದ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಮತ್ತೋರ್ವ ವಿಕಲಚೇತನ ಚಂದ್ರ ನಾಯ್ಕ, ನನ್ನ ಕುಟುಂಬವನ್ನು ಸಾಕಿ ಸಲಹಬೇಕಾದರೆ, ನಾನು ಹೊರಗಡೆ ಹೋಗಿ ದುಡಿಯಲೇಬೇಕು. ನನ್ನಲ್ಲಿ ದುಡಿಯುವ ಚೈತನ್ಯವಿದೆ. ಆದರೆ, ಇಲಾಖೆಯವರು ಸಹಕಾರ ಕೊಡುತ್ತಿಲ್ಲ. ನಾನು ತ್ರಿಚಕ್ರ ವಾಹನಕ್ಕಾಗಿ 4 ಬಾರಿ ಅರ್ಜಿ ಸಲ್ಲಿಸಿದ್ದೇನೆ. ಆದರೂ ನನಗೆ ಸೌಲಭ್ಯ ಕಲ್ಪಿಸಿಲ್ಲ. ಆದ್ದರಿಂದ ತ್ರಿಚಕ್ರ ವಾಹನ ನೀಡುವ ಮೂಲಕ ನನ್ನಂಥವರು ದುಡಿಯಲು ಸವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಅಧಿಕಾರಿ ಜಿ.ಎಸ್.ಶಶಿಧರ್, ಇನ್ನೇಷ್ಟು ಜನ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನರಿಗೆ ತ್ರಿಚಕ್ರ ವಾಹನ ದೊರೆತಿಲ್ಲ ಎಂಬುದರ ಬಗ್ಗೆ ಒಂದು ಪಟ್ಟಿ ತಯಾರಿಸಿ ನೀಡಿ, ಈ ಬಗ್ಗೆ ಕಮಿಟಿಯ ಸಭೆಯಲ್ಲಿ ಬೆಳಕು ಚೆಲ್ಲಿ ತ್ರಿಚಕ್ರ ವಾಹ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನರು ವರ್ಡ್ ಮೇಡ್ ಛೇರ್‍ಗೆ ಅರ್ಜಿ ಸಲ್ಲಿಸಿದ ತಕ್ಷಣವೇ ಛೇರ್ ವಿತರಿಸಲಾಗುವುದು. ಆದ್ದರಿಂದ ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಕಲಚೇತನರ ವಿವಾಹಕ್ಕೆ ಪ್ರಸ್ತುತ ನೀಡುತ್ತಿರುವ 50 ಸಾವಿರ ರೂ. ಸಹಾಯಧನವನ್ನು 2 ಲಕ್ಷಕ್ಕೆ ಏರಿಸುವಂತೆ ಹಾಗೂ ಈಗ ನೀಡುತ್ತಿರುವ 1400 ರೂ. ಮಾಶಾಸನವನ್ನು ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನರಿಗೆ 3000 ರೂ.ಗೆ ಹೆಚ್ಚಿಸುವಂತೆ ನೀವು ಸಲ್ಲಿಸಿರುವ ಮನವಿಯ ಬಗ್ಗೆ ಸಭೆಯಲ್ಲಿ ಒತ್ತಡ ಹಾಕಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ವಾಗ್ದಾನ ಮಾಡಿದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಮಾತನಾಡಿ, ಇದೊಂದು ಹೃದಯ ಸ್ಪರ್ಷಿ ಕಾರ್ಯಕ್ರಮವಾಗಿದ್ದು,  ಎಪಿಡಿ ಸಂಸ್ಥೆ ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳನ್ನು ಕೊಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ವಿಕಲಚೇತನರಿಗೆ ತಕ್ಷಣವೇ ಮೆಡಿಕಲ್ ಕಿಟ್ ನೀಡುವಂತೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗೆ ಸೂಚನೆ ನೀಡುತ್ತೇನೆ. ಅವಶ್ಯಕತೆ ಇರುವವರು ಆಯಾ ತಾಲೂಕು ಆರೋಗ್ಯಾಧಿಕಾರಿಗಳನ್ನು ಇಲ್ಲವೇ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಕಿಟ್ ಪಡೆಯಬೇಕೆಂದು ಕಿವಿಮಾತು ಹೇಳಿದರು.
ಎಪಿಡಿ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಬಿ.ಜಿ.ರವಿ ಪ್ರಾಸ್ತಾವಿಕ ಮಾತನಾಡಿದರು.

 ವೇದಿಕೆಯಲ್ಲಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುನಾಥ್ ಪಾಟೀಲ್, ಎಪಿಡಿ ಸಂಸ್ಥೆಯ ಶ್ರೀನಿವಾಸ್ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಜಿಲ್ಲಾ ವಿಕಲಚೇತನರ ಸಂಘದ ಗಿರೀಶ್ ಟಿ.ಜೆ. ಸ್ವಾಗತಿಸಿದರು. ಸುರೇಶ್ ನಿರೂಪಿಸಿದರು.

Recent Articles

spot_img

Related Stories

Share via
Copy link