ದಾವಣಗೆರೆ :
ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಸೆ.8 ಹಾಗೂ 9ರಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಹಾಗೂ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.8ರಂದು ಬೆಳಿಗ್ಗೆ 10.35ಕ್ಕೆ 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 120ರಿಂದ 124 ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾ ನಾಯ್ಕ ಉದ್ಘಾಟಿಸುವರು. ಸಂಸ್ಥೆ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಅಂಜನಾದ್ರಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ತಿಮ್ಮಾರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಮಂಜುನಾಥ ಕುರ್ಕಿ, ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಮೋತಿ ಪರಮೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಸೆ.9ರಂದು ಬೆಳಿಗ್ಗೆ 10.35ಕ್ಕೆ ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ ಹಾಗೂ ಒಟ್ಟು ಅಂಕ 625ಕ್ಕೆ 600ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ಶಿವಮೊಗ್ಗದ ಖ್ಯಾತ ಮಾನಸಿಕ ರೋಗ ತಜ್ಞರಾದ ಯುವ ಸಾಹಿತಿ ಡಾ.ಪ್ರೀತಿ ಪೈ ಶಾನಭಾಗ್ ಉದ್ಘಾಟಿಸುವರು. ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಅಂತಾರಾಷ್ಟ್ರೀಯ ಯೋಗ ಸಾಧಕಿ ಶಿವಮೊಗ್ಗದ ಶಾಂತಾ ಎಸ್.ಶೆಟ್ಟಿ, ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಅಂಧ ಪ್ರತಿಭೆ ಕೆ.ಅಭಿರಾಮ ಭಾಗವತ್, ಬಾಲಸರಸ್ವತಿ ಪ್ರಶಸ್ತಿ ಪುರಸ್ಕøತೆ ಮೂಡಬಿದರೆಯ ಆಯನಾ ಕೆ.ರಮಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಈ ವರ್ಷ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕನ್ನಡ ಕುವರ ಪ್ರಶಸ್ತಿಗೆ 397, ಕನ್ನಡ ಕುವರಿ ಪ್ರಶಸ್ತಿಗೆ 567, ರಾಜ್ಯ ವ್ಯಾಪ್ತಿಯಲ್ಲಿ ಕನ್ನಡ ಕೌಸ್ತುಭಕ್ಕೆ 413, ಸರಸ್ವತಿ ಪುರಸ್ಕಾರಕ್ಕೆ 287 ಸೇರಿದಂತೆ ಒಟ್ಟು 1,664 ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಕಳೆದ 3 ದಶಕದಿಂದ ಸನ್ಮಾನಿತರಾದವರ ಸಂಖ್ಯೆ 20,017ಕ್ಕೆ ತಲುಪಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕೆ.ಹೆಚ್.ಮಂಜುನಾಥ, ಜಿ.ಬಿ.ಲೋಕೇಶ, ಬಿ.ಶಾಂತಪ್ಪ ಪೂಜಾರಿ, ಬೇಳೂರು ಸಂತೋಷಕುಮಾರ ಶೆಟ್ಟಿ, ವಸಂತಿ ಮಂಜುನಾಥ್, ಹೇಮಾ ಪೂಜಾರಿ, ಕುಮುದ, ಜ್ಯೋತಿ ಶೆಣೈ, ರತ್ನಾ ರೆಡ್ಡಿ, ಶೋಭಾ, ಕುಸುಮಾ, ಶೈಲಾ ಮತ್ತಿತರರು ಹಾಜರಿದ್ದರು.