ಗಂಗೆ ಮುನಿಸಿಕೊಂಡ ನಾಡಲ್ಲಿ ಭಗೀರಥ ಪ್ರಯತ್ನದಿಂದ ಬೆಳೆಯನ್ನು ಕಂಡ ರೈತ ದಯಾನಂದ ಕಾರ್ಯ ಶ್ಲಾಘನೀಯ

ಚಳ್ಳಕೆರೆ

            ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶ ಹಾಗೂ ನಿರಂತರ ಮಳೆಯಿಲ್ಲದೆ ಬರಡಾಗಿರುವ ಪ್ರದೇಶವೆಂದು ಚಳ್ಳಕೆರೆ ತಾಲ್ಲೂಕು ಹೆಸರಾಗಿದೆ. ನೀರಿನ ಅಂಶವೇ ಇಲ್ಲದ ಈ ಭೂಮಿಯಲ್ಲಿ ಬೆಳೆ ಬೆಳೆಯಲು ರೈತರು ತುಂಬಾ ಶ್ರಮಿಸುತ್ತಿರುವ ಸಂದರ್ಭದಲ್ಲಿ ಕೇವಲ ಐದು ಎಕರೆ ಜಮೀನಿನಲ್ಲಿ ಲಭ್ಯ ಇರುವ ಅಲ್ಪ ನೀರನ್ನು ಉಪಯೋಗಿಸಿಕೊಂಡು ಹಲವಾರು ಬೆಳೆಗಳನ್ನು ಬೆಳೆದು ರಾಷ್ಟ್ರವೇ ಹೆಮ್ಮೆ ಪಡುವ ರೈತರಾಗಿ ಪ್ರಗತಿಪರ ರೈತ ದಯಾನಂದಮೂರ್ತಿ ರೂಪುಗೊಂಡಿರುವುದು ಸಂತಸ ವಿಷಯವೆಂದು ಕುಂದಾಪುರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ವೈ.ಮುರಳೀಧರಶೆಟ್ಟಿ ತಿಳಿಸಿದರು.
            ಅವರು, ಕುಂದಾಪುರ ತಾಲ್ಲೂಕಿನ ರೈತರು ಹಾಗೂ ರೈತ ಮಹಿಳೆಯರು ಮೂರು ದಿನಗಳ ರಾಜ್ಯ ಕೃಷಿ ಅಧ್ಯಯನ ಪ್ರವಾಸವನ್ನು ಕೈಗೊಂಡಿದ್ದು, ಇಲ್ಲಿಗೆ ಭೇಟಿ ನೀಡಿ ಚನ್ನಮ್ಮನಾಗತಿಹಳ್ಳಿ ಕಾವಲುನಲ್ಲಿರುವ ಪ್ರಗತಿಪರ ಆರ್.ಎ.ದಯಾನಂದಮೂರ್ತಿಯವರ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಮಿಶ್ರ ಬೆಳೆ ಪದ್ದತಿಯನ್ನು ವೀಕ್ಷಿಸಿ ಮಾತನಾಡಿದರು. ಯೋಜನೆಯ ಕೃಷಿ ಅಧಿಕಾರಿ ಚೇತನ್ ಕುಮಾರ್ ಮಾತನಾಡಿ,ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಬಬ್ಬೂರು ಫಾರಂ, ಚಳ್ಳಕೆರೆ, ನಾಯಕನಹಟ್ಟಿ, ಬಿ.ಜಿ.ಕೆರೆ ಮುಂತಾದ ಕಡೆಗಳಲ್ಲಿ ನಾವು ರೈತರನ್ನು ಕರೆದುಕೊಂಡು ಹೋಗಿ ಅಲ್ಲಿನ ಬೆಳೆಯ ಸ್ಥಿತಿಯನ್ನು ತೋರಿಸಿ ಮಾಹಿತಿ ನೀಡುತ್ತಿದ್ದೇವೆ. ಬಯಲು ಸೀಮೆ ಪ್ರದೇಶದಲ್ಲಿ ದಯಾನಂದಮೂರ್ತಿಯವರ ಕೃಷಿ ಕಾಳಜಿ ನೋಡಿದರೆ ಎಂತಹ ರೈತನೂ ಸಹ ಜಾಗೃತನಾಗುತ್ತಾನೆಂದರು. ತಂಡದಲ್ಲಿ ರಮೇಶ್‍ಬಾಬು, ಲಲಿತಾಬಾಯಿ, ಶ್ರೀನಿವಾಸ್‍ನಾಯಕ ಮುಂತಾದವರು ಭಾಗವಹಿಸಿದ್ದರು.

            ಹಿರಿಯೂರಿ ತಾಲ್ಲೂಕಿನ ರಾಮಜೋಗಿಹಳ್ಳಿ ರೈತರ ಭೇಟಿ :- ಇದೇ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದ ಸುಮಾರು 50 ಜನರ ರೈತ ತಂಡ, ಶಿವಾನಂದಪ್ಪ, ಕೃಷ್ಣಪ್ಪ, ಶಿವಮೂರ್ತಿ, ಹನುಮಕ್ಕ, ಮೋಹನ್ ಮುಂತಾದವರ ನೇತೃತ್ವದಲ್ಲಿ ತೋಟಕ್ಕೆ ಬೇಟಿ ನೀಡಿ ಇಡೀ ಪ್ರದೇಶವನ್ನು ವೀಕ್ಷಿಸಿ ಅಲ್ಪ ಜಮೀನಿನಲ್ಲಿ ತೆಂಗು, ಅಡಿಕೆ, ಬಾಳೆ, ಮಾವು, ನುಗ್ಗೆ, ಮಲ್ಲಿಗೆ, ಸಪೋಟ, ಶ್ರೀಗಂಧ, ಪೇರಲೆ, ಬದನೆ, ಟಮೋಟೊ, ದಾಳಿಂಬೆ, ನಿಂಬೆ, ಮೋಸುಂಬೆ, ವಿವಿಧ ಕೋಳಿ ಸಾಕಾಣಿಕೆ ಮುಂತಾದ ಹಲವಾರು ವಿಧಾನಗಳನ್ನು ನೋಡಿ ಸಂತಸ ಪಟ್ಟರು. ಇದೇ ಸಂದರ್ಭದಲ್ಲಿ ಮಲ್ಲಿಗೆ ಹಾಗೂ ಇನ್ನಿತರೆ ಹೂವಿನ ಗಿಡಗಳನ್ನು ಸಹ ಕಂಡು ದಯಾನಂದಮೂರ್ತಿಯವರ ಕೃಷಿ ಕಾಳಜಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮೋಹನ್, ಶಿವಾನುಪೂರ್ಣ ಮುಂತಾದವರು ರೈತರಿಗೆ ಮಾಹಿತಿ ನೀಡಿದರು.

Recent Articles

spot_img

Related Stories

Share via
Copy link
Powered by Social Snap