ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆ; ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿತ್ರದುರ್ಗ:
             ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಮಧುಪಾಲೇಗೌಡ ನೇತೃತ್ವದಲ್ಲಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು.
              ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ತೊಂದರೆ ಮಾಡಿರುವ ಪ್ರಧಾನಿ ನರೇಂದ್ರಮೋದಿ ಮಾಡಿರುವ ಒಳ್ಳೆಯ ಕೆಲಸವಾದರೂ ಏನು ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
              ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಧುಪಾಲೇಗೌಡ ಮಾತನಾಡಿ ಲೋಕಸಭಾ ಚುನಾವಣಾ ಪೂರ್ವದಲ್ಲಿಯೇ ದೇಶದ ಜನತೆಗೆ ಅನೇಕ ಪೊಳ್ಳು ಭರವಸೆಗಳನ್ನು ನೀಡಿ ಗೆದ್ದು ಪ್ರಧಾನಿಯಾದ ಮೇಲೆ ನರೇಂದ್ರಮೋದಿ ಸೂಟುಬೂಟು ಧರಿಸಿ ವಿದೇಶ ಸುತ್ತುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಬಡವರು, ಮಧ್ಯಮ ವರ್ಗದ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಉದ್ಯಮಿಗಳು, ಬಂಡವಾಳಶಾಹಿಗಳನ್ನು ಓಲೈಕೆ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ ಎಂದು ಕಿಡಿ ಕಾರಿದರು.
                 ದೇಶದ ಪ್ರಧಾನಿಯಾದರೆ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಮೋದಿ ಆಸೆ ಹುಟ್ಟಿಸಿರುವುದನ್ನು ಬಿಟ್ಟರೆ ಇದುವರೆವಿಗೂ ನಯಾಪೈಸೆಯೂ ಜಮೆ ಆಗಿಲ್ಲ. ಅದಕ್ಕೆ ಬದಲಾಗಿ ಪೆಟ್ರೋಲ್, ಡೀಸೆಲ್ ಹಾಗೂ ಬಡವರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಅಡುಗೆ ಅನಿಲದ ಬೆಲೆಯನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಗೆ ಮಾಡುತ್ತ ಜನಸಾಮಾನ್ಯರಿಗೆ ಹೊರೆಯಾಗಿದ್ದಾರೆ. ಇಂತಹ ಜನವಿರೋಧಿಯನ್ನು ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ಹೇಳಿದರು.
                  ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ನರೇಂದ್ರಮೋದಿ ದೇಶದ ಪ್ರಧಾನಿಯಾದಾಗಿನಿಂದಲೂ ಅಚ್ಚೆ ದಿನ್ ಆಯೇಗಾ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಅಚ್ಚೆ ದಿನ್ ಎಂಬ ನಿಜವಾದ ಅರ್ಥ ಅವರಿಗೆ ಗೊತ್ತಿದ್ದರೆ ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿರುವ ವಸ್ತುಗಳ ಬೆಲೆಯನ್ನು ಹೆಚ್ಚಿಗೆ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.
                  ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್‍ನಾಯ್ಡು, ವಸೀಂಬಡಾಮಕಾನ್, ಹರ್ಷಆಜಾಂ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್‍ತಾಹೀರ್, ಪ್ರಧಾನ ಕಾರ್ಯದರ್ಶಿ ಮಹಮದ್‍ರಫಿ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಮೇಶ್, ಕೆ.ಪಿ.ಸಿ.ಸಿ.ಸದಸ್ಯ ಜಿ.ವಿ.ಮಧುಗೌಡ, ಕಿರಣ್‍ಯಾದವ್, ಮೋಹನ್‍ಪೂಜಾರಿ, ಎನ್.ಡಿ.ಕುಮಾರ್, ಕಾರ್ತಿಕ್, ಮದನ್, ಕಾಳಿಚರಣ್, ಶಶಿ, ಮಾಜ್‍ಇಬ್ರಾಹಿಂ, ಸಂತೋಷ್, ಮಾರುತಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Recent Articles

spot_img

Related Stories

Share via
Copy link
Powered by Social Snap