ದಾವಣಗೆರೆ:
ರಾಷ್ಟ್ರೀಯ ಕುಸ್ತಿ ಪಟು ದಿ.ವಿಕಾಸ್ ಗೌಡ ಅವರ ಸ್ಮರಣಾರ್ಥ ದಾವಣಗೆರೆ ಜಿಲ್ಲಾ ಕುಸ್ತಿ ಸಂಘದ ಆಶ್ರಯದಲ್ಲಿ ನಾಳೆ (ಸೆ.8ರಂದು) ನಗರದಲ್ಲಿ ರಾಜ್ಯ ಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ್ ಪೈಲ್ವಾನ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 8 ಗಂಟೆಯಿಂದ ನಗರದ ಆಚಿಜನೇಯ ಬಡಾವಣೆಯ ಕುಸ್ತಿ ಒಳಂಗಣ ಕ್ರೀಡಾಂಗಣದಲ್ಲಿ ಈ ಕುಸ್ತಿ ಪಂದ್ಯಾವಳಿಗೆ ಸಂಘದ ಅಧ್ಯಕ್ಷ ಬಿ.ವೀರಣ್ಣ ಸೇರಿದಂತೆ ಜಿಲ್ಲೆಯ ಎಲ್ಲಾ ಪೈಲ್ವಾನರು ಚಾಲನೆ ನೀಡಲಿದ್ದಾರೆ. ಈ ವೇಳೆಯಲ್ಲಿ ದಿ.ವಿಕಾಸಗೌಡ ಅವರ ತಂದೆ-ತಾಯಿ ಸಹ ಹಾಜರಿರಲಿದ್ದಾರೆ ಎಂದರು.
ದೇಹದ ತೂಕದ ಆಧಾರದ ಮೇಲೆ ಕಿರಿಯರ ವಿಭಾಗದಲ್ಲಿ 30, 35, 40, 45, 50 ಕೆಜಿ ಹಾಗೂ ಹಿರಿಯರ ವಿಭಾಗದಲ್ಲಿ 57, 61, 65, 74, 86, 96 ಹಾಗೂ 96 ಕೆಜಿಗೂ ಅಧಿಕ ತೂಕ ಇರುವವರು ಈ ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದ್ದು, ಬೆಳಗಾವಿ, ಬಾಗಲಕೋಟೆ, ಬೆಂಗಳೂರು, ಮೈಸೂರು, ಗದಗ್, ಕಾರವಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕುಸ್ತಿ ಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪಂದ್ಯಾವಳಿಯಲ್ಲಿ ಯಾರೂ ಅತ್ಯುತ್ತಮ ಪಟುವಾಗಿ ಹೊರ ಹೊಮ್ಮಲಿದ್ದಾರೋ, ಅವರಿಗೆ ವಿಕಾಸ್‍ಗೌಡ ಅವರ ಹೆಸರಿನಲ್ಲಿ ಟೈಟಲ್ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಸ್ತಿ ತರಬೇತುದಾರರಾದ ಆರ್.ಶಿವಾನಂದ್, ಮಂಜುನಾಥ್, ರಾಷ್ಟ್ರ ಕ್ರೀಡಾಪಟುಗಳಾದ ಬಾಹುಬಲಿ ಹಾಗೂ ಪಂಕಜ್ ಹಾಜರಿದ್ದರು.