ದಾವಣಗೆರೆ:
ಔಪಚಾರಿಕ ಶಿಕ್ಷಣ ಪಡೆದು ಮಕ್ಕಳು ಅಂಕಪಟ್ಟಿಗೆ ಸೀಮಿತರಾಗದೇ, ಅನೌಪಚಾರಿಕ ಪಡೆಯುವ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಣಿಯಾಗಬೇಕೆಂದು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಕರೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ)ಯ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಲಯದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜ್ಞಾನಕಾಶಿ ಪ್ರಶಸ್ತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗಳು ಕೇವಲ ಔಪಚಾರಿಕ ಶಿಕ್ಷಣ ನೀಡುತ್ತವೆ. ಆದರೆ, ಕರವೇ ಸೇರಿದಂತೆ ಇತರೆ ಸಂಘ-ಸಂಸ್ಥೆಗಳು ಅನೌಪಚಾರಿಕ ಶಿಕ್ಷಣ ನೀಡುವ ಮೂಲಕ ಜೀವನಕ್ಕೆ ಬೇಕಾದನ್ನು ಕಟ್ಟಿಕೊಡುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತವಾಗಿರದೇ, ಪಠ್ಯ ಮೀರಿದ ಕಲಿಕೆಯನ್ನು ಕಲಿತು ಜೀವನ ಕಟ್ಟಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿ-ಯುವಜನರು ಮೊಬೈಲ್, ವಾಟ್ಸ್ಆಪ್, ಫೇಸ್ಬುಕ್ ಜೊತೆಯಲ್ಲಿ ಪಯಣ ಮಾಡದೇ, ನಿಮ್ಮ ಗುರಿ, ಸದಾಭಿರುಚಿಯ ಜೊತೆಗೆ ಪಯಣ ಬೆಳೆಸುವ ಮೂಲಕ ಸಂಸ್ಕøತಿ ಹಾಗೂ ಸಂಸ್ಕಾರಗಳ ಚಿಂತನೆ ನಡೆಸಿಕೊಂಡು ರಾಷ್ಟ್ರ ಕಟ್ಟುವ ಕೈಂಕರ್ಯಗೊಳ್ಳಬೇಕೆಂದು ಸಲಹೆ ನೀಡಿದರು.
ಮಕ್ಕಳ ಪ್ರತಿಭೆ ಮಿತಿಗೆ ಸೀಮಿತವಾಗಬಾರದು, ಸಂಪೂರ್ಣ ಜ್ಞಾನ ಬೆಳೆಸಿಕೊಂಡು ಗಟ್ಟಿಯಾಗುವುದರ ಜೊತೆಗೆ ನಿಮ್ಮ ಮೇಲಿರುವ ಸಮಾಜದ ಋಣ ತೀರಿಸಬೇಕೆಂದು ಸಲಹೆ ನೀಡಿದ ಅವರು, ನಮ್ಮ ಭಾಷೆಯಾಗಿರುವ ಕನ್ನಡವನ್ನು ಪ್ರೀತಿಸೋಣ. ಹಾಗೆಯೇ, ಅನ್ಯಭಾಷೆಗಳನ್ನು ಗೌರವಿಸುವುದರ ಜೊತೆಗೆ ಆ ಭಾಷೆಗಳಲ್ಲಿರುವ ಮೌಲ್ಯಗಳನ್ನು ಇಲ್ಲಿಗೆ ತಂದು ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಿ ಗೊಳಿಸೋಣ. ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದ್ದು, ಜಗತ್ತಿನ ಎಲ್ಲ ಜ್ಞಾನವೂ ಇದರಲ್ಲಿ ಅಡಕವಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಬೇರೆ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ನಶಿಸುತ್ತಿದೆ ಎಂಬ ಆತಂಕ ಮೊದಲಿತ್ತು. ಆದರೆ, ಈ ಆತಂಕ ಈಗ ದೂರವಾಗುತ್ತಿದ್ದು, ಕನ್ನಡ ಭಾಷೆಗೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದರು.
ಬೇರೆ, ಬೇರೆ ದೇಶಗಳಲ್ಲಿ ಇಂಗ್ಲಿಷ್ ಭಾಷೆಗೆ ಬೆಲೆ ಇಲ್ಲ. ಆಯಾ ನೆಲದ ಭಾಷೆಗಳಿಗೆ ಅಲ್ಲಿ ಮಾನ್ಯತೆ ಇರುತ್ತದೆ. ಆದರೆ, ಇತ್ತೀಚೆಗೆ ಭಾರತದಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವುದು ಸರಿಯಲ್ಲ. ನಾವೂ ಸಹ ಕರ್ನಾಟಕದಲ್ಲಿ ಕನ್ನಡದ ಮೂಲಕವೇ ನಮಗೆ ಬೇಕಾದನ್ನು ಎಲ್ಲಾ ಪಡೆಯಲು ಇಂಗ್ಲಿಷ್ ಸೇರಿದಂತೆ ಇತರೆ ಎಲ್ಲಾ ಅನ್ಯ ಭಾಷೆಗಳ ವ್ಯಾಮೋಹ ತ್ಯಜಿಸಿ, ಕನ್ನಡವನ್ನು ಉನ್ನತೀಕರಿಸೋಣ ಎಂದ ಅವರು, ಕನ್ನಡ ಭಾಷೆಯ ಗುಣಮಟ್ಟ ಹೆಚ್ಚಿಸಲು ವಿವಿಧ ಯೋಜನೆಗಳನ್ನು ರೂಪಿಸಲು ಸರ್ಕಾರ ಸಹ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಕರವೇ ಹತ್ತು ಹಲವು ಜನುಪಯೋಗಿ ಕಾರ್ಯಗಳನ್ನು ನಡೆಸುತ್ತಿದೆ. ಕನ್ನಡಿಗರಿಗೆ ಉದ್ಯೋಗ ಕೊಡಿಸುವುದರ ಜೊತೆಗೆ ನೆಲ-ಜಲ-ಭಾಷೆ-ಗಡಿ ರಕ್ಷಣೆಗೆ ಹೋರಾಡುತ್ತಿದೆ. ಜ್ಞಾನಕಾಶಿ ಪ್ರಶಸ್ತಿ ನೀಡುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಲು ಪ್ರೇರಣೆ ನೀಡುತ್ತಿದೆ. ಕೊಡಗು ಸಂತ್ರಸ್ಥರಿಗೆ ನೆರವಾಗುವ ಉದ್ದೇಶದಿಂದ ಕರವೇ ಆರು ಮನೆಗಳನ್ನು ಕಟ್ಟಿಕೊಡಲು ಮುಂದಾಗಿದೆ ಎಂದರು.
ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿರುವ ಮಕ್ಕಳಿಗೆ ಜ್ಞಾನಕಾಶಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಷಾ ಕುಮಾರಿ, ಕಸಾಪ ಕಾರ್ಯಾಧ್ಯಕ್ಷ ದಿಳ್ಯಪ್ಪ, ದೊಗ್ಗಳ್ಳಿಗೌಡ್ರ ಪುಟ್ಟರಾಜು, ಬಸಮ್ಮ, ಮುರಿಗೇಂದ್ರಯ್ಯ ಹಾಜರಿದ್ದರು. ಗಾನಸುಧೆ ಬಳಗದ ಕಲಾವಿದರು ನಾಡಗೀತೆ ಹಾಡಿದರು. ಶ್ರೀಕಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ