ದಾವಣಗೆರೆ:
ಒರಟರು ಎಂಬ ಕಳಂಕದಿಂದ ವಾಲ್ಮೀಕಿ ನಾಯಕ ಸಮುದಾಯದವರು ಹೊರ ಬರಬೇಕೆಂದು ಶಾಸಕ ಎಸ್.ಎ. ರವೀಂದ್ರನಾಥ್ ಕರೆ ನೀಡಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯರು ವಾಲ್ಮೀಕಿ ನಾಯಕ ಸಮುದಾಯದವರು ಒರಟರು ಎಂಬ ಭಾವನೆ ಹಲವರಲ್ಲಿದೆ. ಆದ್ದರಿಂದ ನಾಯಕ ಸಮುದಾಯದವರನ್ನು ಹಲವರು ತಿರಸ್ಕರಿಸುತ್ತಾರೆ. ಹೀಗಾಗಿ ಈ ಕಳಂಕದಿಂದ ಹೊರ ಬಂದು ವಿವಿಧ ರಂಗಗಳಲ್ಲಿ ಸಾಧನೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕಿವಿಮಾತು ಹೇಳಿದರು.
ಮಾಯಕೊಂಡ ಕ್ಷೇತ್ರದಿಂದ ಹಿಂದೆ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯದ ಹೂವಿನಮಡು ಚಂದ್ರಪ್ಪ, ಉಚ್ಚಂಗೆಪ್ಪ, ಶೇಖರಪ್ಪ ಮತ್ತಿತರರು ನನ್ನ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ನಾಯಕರು ಒರಟರೆಂಬ ಕಾರಣಕ್ಕೆ ಜನರೇ ನಿಮ್ಮ ಸಮಾಜದ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು. ಹೀಗಾಗಿ ನಿಮಗಿರುವ ಕಳಂಕ ತೊಡೆದು ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೆ ಮುಂದಾಗಬೇಕೆಂದು ಆಶಯ ವ್ಯಕ್ತಪಡಿಸಿದರು.
ನಾಯಕ ಸಮಾಜದ ಅಭಿವೃದ್ಧಿಗಾಗಿ ಹಿಂದೆ ಪ್ರೊ.ಎಲ್.ಜಿ ಹಾವನೂರು ಅವರು ಸಾಕಷ್ಟು ಹೋರಾಟ ನಡೆಸಿದ್ದರ ಪರಿಣಾಮ, ಇಂದು ನಾಯಕ ಸಮಾಜವು ಸುಸ್ಥಿತಿಯಲ್ಲಿದೆ. ವಿವಿಧ ಪಕ್ಷ, ಸಂಘಟನೆಗಳಲ್ಲಿರುವ ನಾಯಕ ಸಮುದಾಯದವರು ಸಂಘಟಿತರಾಗಿ ಸಮುದಾಯದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸಿದರೆ ಮಾತ್ರ ನಿಮ್ಮ ಜನಾಂಗದ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಪ್ರೊ.ಎಲ್.ಜಿ.ಹಾವನೂರು ಅವರ ಭಾವಚಿತ್ರ ಅನಾವರಣಗೊಳಿಸಿದ ನಾಯಕ ವಿದ್ಯಾರ್ಥಿನಿಲಯ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆ ಎದುರಿಸುವ ಮೂಲಕ ಬರಿದಾಗುತ್ತಿವೆ. ಆದರೆ, ಸರ್ಕಾರ ಮಾತ್ರ ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದೆ. ಸರ್ಕಾರಿ ಶಾಲೆಗಳು ಮತ್ತೆ ಸದೃಢವಾಗಬೇಕಾದರೆ, ಎಸ್ಸೆಸ್ಸೆಲ್ಸಿ ವರೆಗೆ ಯಾರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುತ್ತಾರೋ ಅವರಿಗೆ ಮಾತ್ರ ಸರ್ಕಾರಿ ನೌಕರಿ ಎಂಬ ಕಾನೂನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಹೋರಾಟ ರೂಪಿಸಲು ಎಲ್ಲರೂ ಅಣಿಯಾಗಬೇಕೆಂದು ಕರೆ ನೀಡಿದರು.
ನಮ್ಮಂಥಹ ತಳ ಸಮುದಾಯಗಳಿಗೆ ಇಂದು ರಕ್ಷಣೆ, ಭದ್ರತೆ ದೊರೆತಿದೆ ಎಂದರೆ, ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ. ಆದರೆ, ದೇಶದ್ರೋಹಿಗಳು ಇತ್ತೀಚೆಗೆ ಸಂವಿಧಾನವನ್ನೇ ಹರಿದು ಸುಟ್ಟುಹಾಕಿ ಅಟ್ಟಹಾಸ ಮೆರೆದಿದ್ದಾರೆ. ಇದರ ವಿರುದ್ಧ ಸಂವಿಧಾನದ ಫಲ ಉಂಡಿರುವ ಎಲ್ಲರೂ ಹೋರಾಟಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.
ನಮ್ಮು ಸಮುದಾಯದಲ್ಲಿ ಹೆಚ್ಚು ವಿದ್ಯಾವಂತರಿದ್ದಾರೆ. ಆದರೆ, ತಕ್ಕನಾದ ಹುದ್ದೆಗಳಿಲ್ಲ, ಇದ್ದರೂ ಭದ್ರತೆಯಿಲ್ಲ. ಎಸ್ಟಿ ಜನಾಂಗ ಸಂಪೂರ್ಣ ಸರ್ಕಾರಿ ನೌಕರಿಯನ್ನೇ ಪಡೆದಿಲ್ಲ. ಕೇವಲ ಡಿ. ಗ್ರೂಪ್ ನೌಕರಿಗಷ್ಟೇ ಸೀಮಿತವಾಗಿದ್ದಾರೆ. ಹೀಗಾಗಿ ಎಸ್ಟಿ ಜನಾಂಗಕ್ಕೆ ರಾಜ್ಯ ಸರ್ಕಾರ ಶೇ.7.5ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕ ಪ್ರೊ.ಎ.ಬಿ.ರಾಮಚಂದ್ರಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡೂಡಾ ಮಾಜಿ ಅಧ್ಯಕ್ಷ, ಸಮಾಜದ ಹಿರಿಯ ಮುಖಂಡ ಟಿ.ದಾಸಕರಿಯಪ್ಪ, ಜೆಡಿಎಸ್ ರಾಜ್ಯ ಎಸ್ಟಿ ಘಟಕ ಅಧ್ಯಕ್ಷ ಹೊದಿಗೆರೆ ರಮೇಶ್, ಜಿಲ್ಲಾ ಪಂಚಾಯತ್ ಸದಸ್ಯೆ ವೈ.ಸುಶೀಲಮ್ಮ ದೇವೇಂದ್ರಪ್ಪ, ಕಾಂಗ್ರೆಸ್ ಮುಖಂಡ ಆರ್.ಎಸ್. ಶೇಖರಪ್ಪ, ಸಿ.ವಿ.ತಾರಾ, ಎ.ಸಿ. ತಿಪ್ಪೇಸ್ವಾಮಿ, ರಾಜಶೇಖರ್, ಶಂಕರ್ ಜಾಲಿಹಾಳ್, ಟಿ.ರಮೇಶ್. ಉಮೇಶ್, ಪಿ.ಬಿ.ಚನ್ನಬಸಪ್ಪ, ಟಿ.ಎಂ.ನಾಗೇಂದ್ರಪ್ಪ, ಲೋಕೇಶಪ್ಪ, ಬಸಣ್ಣ, ಜಯಣ್ಣ, ಲಕ್ಷ್ಮೀದೇವಿ ಬಿ. ವೀರಣ್ಣ, ಪ್ರಸಾದ್, ಶಿವಮೂರ್ತಿ, ಡಾ.ಗುಮ್ಮನೂರು ಶ್ರೀನಿವಾಸ್, ಹಾಲೇಶಪ್ಪ, ಹೂವಿನಮಡು ಚಂದ್ರಪ್ಪ, ಯರ್ರಾಬಿರ್ರಿ ಚಲನಚಿತ್ರದ ನಾಯಕನಟ ಅಂಜನ್ ಮತ್ತಿತರರು ಉಪಸ್ಥಿತರಿದ್ದರು.
ಶಂಕರ ಬಾವಿಹಾಳ್ ಪ್ರಾಸ್ತಾವಿಕ ಮಾತನಾಡಿದರು. ರಾಮಚಂದ್ರಪ್ಪ ಸ್ವಾಗತಿಸಿದರು. ಲಕ್ಷ್ಮೀ, ನೇತ್ರ ಪ್ರಾರ್ಥಿಸಿದರು.








