ಚಳ್ಳಕೆರೆ:
ನಗರದ ಹಲವಾರು ಪ್ರಮುಖ ಬೀದಿಗಳಲ್ಲಿ ಈಗ ಗಣೇಶ ಉತ್ಸವದ ವಾತಾವರಣ ಎಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಣೇಶನ ಹಬ್ಬಕ್ಕಾಗಿ ವಿಶೇಷ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಆದರೆ, ಇಲ್ಲಿನ ನಗರಸಭೆ ಆಡಳಿತ ಹಾಗೂ ಪೊಲೀಸ್ ಇಲಾಖೆ ಮಾತ್ರ ಗಣೇಶ ವಿಸರ್ಜನೆಗೆ ಸೂಕ್ತ ಸ್ಥಳವನ್ನು ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ‘
ಪೌರಾಯುಕ್ತ ಜೆ.ಟಿ.ಹನುಮಂತರಾಜು, ವೃತ್ತ ನಿರೀಕ್ಷ ಎನ್.ತಿಮ್ಮಣ್ಣ, ಪಿಎಸ್ಐ ಕೆ.ಸತೀಶ್ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಪುರಸಭಾ ಸಿಬ್ಬಂದಿ ವೀರಭದ್ರ ಮುಂತಾದವರು ಗಣಪತಿ ವಿಸರ್ಜನೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಗರದ ವಿವಿಧೆಡೆ ಸೂಕ್ತ ಸ್ಥಳವನ್ನು ಹುಡುಕಿ ಅಲ್ಲಿ ಮೂರ್ತಿ ವಿಸರ್ಜನೆಗೆ ಬೇಕಾಗುವ ಮೂಲ ಸೌಲಭ್ಯವನ್ನು ಕಲ್ಪಿಸುವಲ್ಲಿ ನಿರತರಾಗಿದ್ಧಾರೆ.
ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಗೌರಗಣೇಶ ಹಬ್ಬ ಪ್ರತಿಯೊಂದು ಕುಟುಂಬಕ್ಕೂ ಸಂಭ್ರಮ ಸಡಗರವನ್ನು ತರಲಿದ್ದು, ಎಲ್ಲಾ ಸಮುದಾಯವೂ ಈ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾ ಬಂದಿದ್ಧಾರೆ. ಆದರೆ, ಹಬ್ಬದ ನಂತರ ಪೂಜಿಸಿದ ಗಣೇಶನ ವಿಸರ್ಜನೆಗೆ ಸೂಕ್ತ ಸ್ಥಳವಿಲ್ಲದಿದ್ದಲ್ಲಿ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಪೌರಾಯುಕ್ತರ ಸಹಕಾರದಿಂದ ಸೂಕ್ತ ಸ್ಥಳವನ್ನು ನಿಗದಿಗೊಳಿಸಲಾಗಿದೆ ಎಂದರು.
ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ, ತ್ಯಾಗರಾಜನಗರ, ವಿಠಲನಗರ, ಗಾಂಧಿನಗರ, ಅಂಬೇಡ್ಕರ ನಗರ, ಜನತಾ ಕಾಲೋನಿ ಪ್ರದೇಶದ ನಿವಾಸಿಗಳಿಗೆ ಪ್ರವಾಸಿ ಮಂದಿರದ ಬಳಭಾಗದಲ್ಲಿ ದೊಡ್ಡದಾದ ತೊಟ್ಟಿ ನಿರ್ಮಿಸಿ ಅಲ್ಲಿ ನೀರನ್ನು ಸಂಗ್ರಹಿಸಿ, ವಿದ್ಯುತ್ ಲೈಟನ್ನು ಸಹ ಅಳವಡಿಸಲಾಗಿದೆ.
ಎಪಿಎಂಸಿ ಮಾರುಕಟ್ಟೆ ಆವರಣ, ಕುಚೇರ ನಗರ, ಮದಕರಿನಗರ, ಬೆಂಗಳೂರು ರಸ್ತೆ, ಶಿವನಗರ, ಪಾವಗಡ ರಸ್ತೆ ಮುಂತಾದ ಪ್ರದೇಶದ ಜನರಿಗೆ ಬೆಂಗಳೂರು ರಸ್ತೆಯ ವಾರಿಯರ್ಸ್ ಶಾಲೆಯ ಪಕ್ಕದ ವಿಶಾಲವಾದ ಸಣ್ಣ ಹೊಂಡದಲ್ಲಿ ನೀರನ್ನು ದಾಸ್ತಾನು ಮಾಡಿ ಅಲ್ಲಿಯೂ ಸಹ ವಿದ್ಯುತ್ ಲೈಟ್ ಅವಳಡಿಸಿ ಗಣಪತಿ ವಿಸರ್ಜನೆಗೆ ಅವುನು ಮಾಡಿಕೊಡಲಾಗಿದೆ ಎಂದರು.
ಶಾಂತಿನಗರ, ಚಿತ್ರಯ್ಯನಹಟ್ಟಿ, ಹಳೇಟೌನ್, ಬಳ್ಳಾರಿ ರಸ್ತೆ, ಚಿತ್ರದುರ್ಗ ರಸ್ತೆ, ಖಾಸಗಿ ಬಸ್ ನಿಲ್ದಾಣ, ಬೆಂಗಳೂರು ರಸ್ತೆ ಮುಂತಾದ ಕಡೆಗಳ ಜನರಿಗೆ ಅನುಕೂಲವಾಗುವಂತೆ ಶಾಂತಿನಗರ, ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮೈದಾನ ಬಳ್ಳಾರಿ ರಸ್ತೆಗಳಲ್ಲಿ ಮಿನಿ ಟ್ಯಾಂಕನ್ನು ಇರಿಸಿದ್ದು, ಅಲ್ಲಿ ಗಣಪತಿ ವಿಸರ್ಜನೆ ಮಾಡಬಹುದಾಗಿದೆ ಎಂದರು.
