ಚಿತ್ರದುರ್ಗ:
ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕರು ಎ.ಐ.ಟಿ.ಯು.ಸಿ.ಹಾಗೂ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಸುರೇಶ್‍ಕುಮಾರ್‍ಗೆ ಮನವಿ ಸಲ್ಲಿಸಿದರು.
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕಿನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಾರ್ಮಿಕರು ಬೇಡಿಕೆಗಳ ಈಡೇರಿಕೆಗಾಗಿ ಘೋಷಣೆಗಳನ್ನು ಕೂಗಿದರು.
ಎ.ಐ.ಟಿ.ಯು.ಸಿ.ಗೌರವಾಧ್ಯಕ್ಷ ಕಾಂ.ಸಿ.ವೈ.ಶಿವರುದ್ರಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಪಾರ್ಲಿಮೆಂಟ್, ವಿಧಾನಸೌಧ, ಡಿ.ಸಿ.ಕಚೇರಿ, ತಾಲೂಕು ಕಚೇರಿ ಹೀಗೆ ಭವ್ಯ ಬಂಗಲೆಗಳನ್ನು ಕಟ್ಟಿರುವ ಕಾರ್ಮಿಕರಿಗೆ ಜೀವನ ಭದ್ರತೆ ಇಲ್ಲದಂತಾಗಿದೆ. 1996 ರಲ್ಲಿ ಕಾರ್ಮಿಕರೆಲ್ಲರೂ ಸೇರಿಕೊಂಡು ಪಾರ್ಲಿಮೆಂಟ್ ಚಲೋ ಚಳುವಳಿ ನಡೆಸಿದ ಪರಿಣಾಮವಾಗಿ ಕಾರ್ಮಿಕರ ಸಾಮಾಜಿಕ ಭದ್ರತೆ ಕಾಯ್ದೆಯನ್ನು ಜಾರಿಗೆ ತರಲಾಯಿತು. ಕಟ್ಟಡ ಕೆಲಸ, ಮರಗೆಲಸ, ಕಬ್ಬಿಣ ಕೆಲಸ, ಬಾರ್‍ಬೈಂಡರ್, ಮರಗೆಲಸ, ಪೇಯಿಂಟ್ ಕೆಲಸ ಹೀಗೆ 36 ಬಗೆಯ ಕಾರ್ಮಿಕರ ಶ್ರಮದಿಂದ ಹೊಸ ಮನೆ ಕಟ್ಟಬಹುದು. ಆದರೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಭ ನೀತಿ ಅನುಸರಿಸುತ್ತಿವೆ. ಅದಕ್ಕಾಗಿ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಾರ್ಮಿಕರನ್ನು ಜಾಗೃತಿಗೊಳಿಸಿದರು.
2005 ರಲ್ಲಿ ಧರ್ಮಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ಬೆಂಗಳೂರಿನಲ್ಲಿ ಕಾರ್ಮಿಕರೆಲ್ಲಾ ಸೇರಿಕೊಂಡು ರ್ಯಾಲಿ ನಡೆಸಿದಾಗ ಕಾರ್ಮಿಕರ ಕಾಯ್ದೆ ಜಾರಿಗೆ ಬರಲಿಲ್ಲ. ನಂತರ 2006 ರಲ್ಲಿ ಬೃಹತ್ ಹೋರಾಟ ನಡೆಸಿದಾಗ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಕಾಯ್ದೆಯನ್ನು ಜಾರಿಗೊಳಿಸಿದರು. ಎಂಟು ಸಾವಿರ ಕೋಟಿ ರೂ.ಕಾರ್ಮಿಕರ ಸೆಸ್ ಮಂಡಳಿಗೆ ಪಾವತಿಯಾಗುತ್ತಿದೆ. ಇಷ್ಟಾದರೂ ಕಾರ್ಮಿಕರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲದಿರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಎ.ಐ.ಟಿ.ಯು.ಸಿ.ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡಿ 55 ವರ್ಷ ಪೂರೈಸಿರುವ ಮಹಿಳೆ ಹಾಗೂ 60 ವರ್ಷವಾಗಿರುವ ಪುರುಷ ಕಾರ್ಮಿಕರಿಗೆ ಸರ್ಕಾರ ಈಗ ನೀಡುತ್ತಿರುವ ಮಾಸಿಕ ಒಂದು ಸಾವಿರ ರೂ.ಪಿಂಚಣಿಯನ್ನು ಮೂರು ಸಾವಿರ ರೂ.ಗಳಿಗೆ ಏರಿಸಿ ವೆಲ್‍ಫೇರ್ ಬೋರ್ಡ್‍ಗಳಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ನೊಂದಾಯಿತ ಮಹಿಳಾ ಕಟ್ಟಡ ಕಾರ್ಮಿಕರಿಗೆ ಈಗಿರುವ ಹೆರಿಗೆ ಭತ್ಯೆ ಹತ್ತೊಂಬತ್ತು ಸಾವಿರ ರೂ.ಗಳಿಗೆ ಬದಲಾಗಿ ಐವತ್ತು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಕಾರ್ಮಿಕರ ಇಲ್ಲವೇ ಅವರ ಇಬ್ಬರು ಮಕ್ಕಳ ಮದುವೆಗೆ ನೀಡುತ್ತಿರುವ ಐವತ್ತು ಸಾವಿರ ರೂ.ಗಳನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡುತ್ತ ಕೆಲಸ ಮಾಡುವ ಸಂದರ್ಭದಲ್ಲಿ ಕಾರ್ಮಿಕ ಅಪಘಾತದಿಂದ ಸಾವಿಗೀಡಾದರೆ ಹತ್ತು ಲಕ್ಷ ರೂ.ಪರಿಹಾರ ಕೊಡಬೇಕು. ಸ್ವಾಭಾವಿಕವಾಗಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಎರಡು ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಳ್ಳಲು ಸಹಾಯಧನ ಮತ್ತು ಎಲ್ಲಾ ಫಲಾನುಭವಿಗಳಿಗೆ ಇ.ಎಸ್.ಐ., ಪಿ.ಎಫ್, ಬೋನಸ್ ಮತ್ತು ಗ್ರಾಚುಟಿ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ನೀಡಬೇಕು. ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಚಿತ್ರದುರ್ಗ ನಗರದ ಸುತ್ತಮುತ್ತ ಐದಾರು ಕಿ.ಮೀ.ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಅಥವಾ ಸರ್ಕಾರದಿಂದ 25 ಎಕರೆ ಜಮೀನು ಖರೀಧಿಸಿ ನಿವೇಶನಗಳನ್ನಾಗಿ ಮಾಡಿ ಕಾರ್ಮಿಕರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಮರಳಿನ ನಿರ್ಭಂಧ ಕಾನೂನನ್ನು ಸಡಿಲಗೊಳಿಸಿ ಸಣ್ಣರೈತರು, ಕೂಲಿಕಾರರು ಇತರೆ ಎಲ್ಲರಿಗೂ ಮನೆಗಳನ್ನು ಕಟ್ಟಿಕೊಳ್ಳಲು ಮರಳು ಲಭ್ಯವಾಗುವಂತೆ ಕಾನೂನನ್ನು ಸರಳೀಕರಣಗೊಳಿಸಬೇಕು ಎಂದು ಸರ್ಕಾರವನ್ನು ಕೋರಿದರು.
ಕಾಂ.ಬಿ.ಬಸವರಾಜಪ್ಪ, ಕಾಂ.ಟಿ.ಆರ್.ಉಮಾಪತಿ, ಎ.ಐ.ಟಿ.ಯು.ಸಿ.ಸಂಘಟನಾ ಕಾರ್ಯದರ್ಶಿ ಸತ್ಯಕೀರ್ತಿ, ಜಾವಿದ್‍ಭಾಷ, ಟಿ.ರಾಜಣ್ಣ, ಚಂದ್ರಮ್ಮ, ಎಂ.ರಾಜಣ್ಣ, ಲಕ್ಷ್ಮಿದೇವಿ, ಮನ್ಸೂರ್‍ಭಾಷ, ಜಯದೇವಮೂರ್ತಿ, ಸತೀಶ್, ಲಕ್ಷ್ಮಿದೇವಿ, ಡಿ.ಲಕ್ಷ್ಮಣ ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟನೆಯ