ಹುಳಿಯಾರು:
ಸುಮಂಗಲಿಯರಿಗೆ ಸಕಲ ಸೌಭಾಗ್ಯವನ್ನು ನೀಡುವ ಸ್ವರ್ಣ ಗೌರಿ ಹಬ್ಬವನ್ನು ಹುಳಿಯಾರಿನಲ್ಲಿ ಸುಮಂಗಲಿಯರು ಸರಳವಾಗಿ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಬಂಗಾರದ ಬಣ್ಣದಂತೆ ಹೊಳೆಯುವ ಗೌರಿಯನ್ನು ಕೆಲವರು ಮನೆಯಲ್ಲೇ ಪ್ರತಿಷ್ಠಾಪನೆ ಮಾಡಿ ಷೋಡಶೋಪ ಚಾರದಿಂದ ಪೂಜಿಸುವರು. ಮನೆಯಲ್ಲೇ ಮಂಟಪ ನಿರ್ಮಿಸಿ, ಮಾವಿನ ತೋರಣ, ಬಾಳೆಕಂದು ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗರಿಸಿ ಸಡಗರದಿಂದ ಗೌರಿ ಹಬ್ಬ ಆಚರಿಸಿದರು.
ವಿವಿಧ ದೇವಾಲಯಗಳಲ್ಲಿ ಗೌರಿ ಹಬ್ಬದ ಅಂಗವಾಗಿ ಸ್ವರ್ಣಗೌರಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಮುಂಜಾನೆಯಿಂದಲೇ ಸ್ನಾನ ಮಾಡಿ, ಮಡಿಯುಟ್ಟ ಸುಮಂಗಲಿಯರು ದೇವಾಲಯಗಳಿಗೆ ಆಗಮಿಸಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ನಂತರ ಗೌರಿ ಪ್ರತಿಷ್ಠಾಪನೆ ಮಾಡಿರುವ ಜಾಗಕ್ಕೆ ತೆರಳಿ ಸ್ವರ್ಣಗೌರಿಗೆ ಹೂವು, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ನಂತರ ದೇವಾಲಯಕ್ಕೆ ಬಂದ ಮಹಿಳೆಯರು ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಬಳೆ, ಫಲವನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಮನೆಯಲ್ಲೇ ಗೌರಿ ಪ್ರತಿಷ್ಠಾಪಿಸಿದವರು ಗೌರಿಯನ್ನು ಫಲ-ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ವಿವಿದ ಪೂಜಾ ಕಾರ್ಯಗಳನ್ನು ಮಾಡಿ ಹಿರಿಯರಿಂದ ಆಶೀರ್ವಾದ ಪಡೆಯುವ ಮೂಲಕ ಹಬ್ಬದ ಶುಭಾಷಯವನ್ನು ಹಂಚಿಕೊಳ್ಳುತ್ತಿದ್ದರು. ಮನೆಮನೆಗಳಲಿ ಸಿಹಿ ಅಡುಗೆ ಮಾಡಿ, ಮನೆಗೆ ಬಂದ ಮುತ್ತೈದೆಯರಿಗೆ ಉಡುಗೊರೆ, ಅರಿಶಿನ-ಕುಂಕುಮ ನೀಡಿ ಆಶೀರ್ವಾದ ಪಡೆದು ಧನ್ಯತಾ ಭಾವ ಮೆರೆದರು.
ಗಣೇಶ ಚರ್ಥುತಿ ಅಂಗವಾಗಿ ಗಣೇಶ ವಿಗ್ರಹಗಳನ್ನು ಕೊಳ್ಳಲು ಜನ ಮುಗಿಬಿದಿದ್ದು, ಜನಜಂಗುಳಿಯೇ ನೆರೆದಿತ್ತು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ರೈತರು, ಯುವಕರು ತಮ್ಮ ತಮ್ಮ ಊರುಗಳಿಗೆ ವಿವಿಧ ಬಗೆಯ ಗಣೇಶನ ಮೂರ್ತಿಗಳನ್ನು, ಅದರ ಅಲಂಕಾರಕ್ಕೆ ಬೇಕಾದ ಹೂ, ಹಣ್ಣು, ಬಾಳೆಕಂದು ಸೇರಿದಂತೆ ನಾನಾ ಬಗೆಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.