ಆಧುನಿಕ ‘ಇ-ಬೀಟ್’ ವ್ಯವಸ್ಥೆಗೆ ಚಾಲನೆ

ತುಮಕೂರು
                 ತುಮಕೂರು ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ‘‘ಜನಸ್ನೇಹಿ’’ ಆಗಿಸುವ ನಿಟ್ಟಿನಲ್ಲಿ ಹಾಗೂ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಜಿಲ್ಲಾ ಪೊಲೀಸ್ ಇಟ್ಟಿದ್ದು, ಆ ವ್ಯವಸ್ಥೆಯೇ ‘‘ಆಧುನಿಕ ಇ-ಬೀಟ್ ವ್ಯವಸ್ಥೆ’’ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ದಿವ್ಯ ವಿ.ಗೋಪಿನಾಥ್ ಶುಕ್ರವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
                      ಇದು ಆಧುನಿಕ ತಂತ್ರಜ್ಞಾನದ ‘‘ಇ-ಬೀಟ್’’ ರೀಡರ್ ಮತ್ತು ಕ್ಯೂ.ಆರ್. ಕೋಡ್ ಟ್ಯಾಗ್‌ಗಳ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ಸಿಬ್ಬಂದಿಗಳ ಬೆರಳ ತುದಿಯಲ್ಲಿ ಡಿಜಿಟಲೀಕರಣಗೊಂಡ ‘‘ಇ-ಬೀಟ್’’ ಪುಸ್ತಕ ಲಭ್ಯವಿರುವಂತೆ ಮಾಡಲಾಗಿದೆ. ಇದು ಅತ್ಯಂತ ನಿಖರ ಹಾಗೂ ಖಚಿತವಾಗಿ ಬೀಟ್ ಸಿಬ್ಬಂದಿಗಳ ಪ್ರತಿ ಚಲನೆಯ ‘‘ಡಿಜಿಟಲ್ ದಾಖಲಾತಿ’’ ಲಭ್ಯವಿರುವಂತೆ ಮಾಡುತ್ತದೆ ಎಂದು ಹೇಳಿದರು.
                      ನೂತನ ‘‘ಇ-ಬೀಟ್’’ ವ್ಯವಸ್ಥೆ ಜಾರಿಗೆ ತಂದ ಉದ್ದೇಶಗಳೇನೆಂದರೆ, ಕಾಗದ ರಹಿತ ಸರಳ ‘‘ಇ-ಬೀಟ್’’ ವ್ಯವಸ್ಥೆ ಇದಾಗಿದೆ. ಸಿಬ್ಬಂದಿಗಳು ನಿಖರವಾಗಿ ಬೀಟ್ ಕಾರ್ಯನಿರ್ವಹಣೆ ಮಾಡಲು ಸಹಕಾರಿಯಾಗಿದೆ. ಜಿ.ಪಿ.ಎಸ್. ತಂತ್ರಜ್ಞಾನ ಹೊಂದಿರುವುದರಿಂದ ಸಿಬ್ಬಂದಿಗಳ ಚಲನವಲನದ ಸಮಯ, ಸ್ಥಳದ ಡಿಜಿಟಲ್ ದಾಖಲಾತಿ ಲಭ್ಯವಿದ್ದು, ಠಾಣಾಧಿಕಾರಿಗಳು, ಮೇಲಾಧಿಕಾರಿಗಳು, ಕಂಟ್ರೋಲ್ ರೂಂನವರು ಅವಶ್ಯವೆನಿಸಿದಾಗ ಆ್ಯಪ್ ಮೂಲಕ ಪರೀಕ್ಷಿಸಬಹುದು ಮತ್ತು ಮೇಲ್ವಿಚಾರಣೆ ಮಾಡಬಹುದು. ಸಿಬ್ಬಂದಿಗಳಲ್ಲಿ ಹೆಚ್ಚಿನ ಕರ್ತವ್ಯ ಪ್ರಜ್ಞೆಯನ್ನು ಮೂಡಿಸುತ್ತದೆ ಹಾಗೂ ಕರ್ತವ್ಯದ ದಕ್ಷತೆಯನ್ನು ಹೆಚ್ಚಿಸುತ್ತದೆ. ಜನರಿಗೆ ಹೆಚ್ಚಿನ ಸುರಕ್ಷತಾ ಭಾವನೆ ಮೂಡುತ್ತದೆ. ಒಟ್ಟಾರೆ ಪಾರದರ್ಶಕ ಬೀಟ್ ವ್ಯವಸ್ಥೆ ಜಾರಿಯಾಗಲು ಹಾಗೂ ಸರಳ ಮೇಲ್ವಿಚಾರಣೆಗೆ ಸಹಾಯಕಾರಿಯಾಗಿದೆ ಎಂದು ಅವರು ವಿವರಿಸಿದರು.
                     ಮೊಬೈಲ್‌ನಲ್ಲಿ ಫೊಟೋ ಮತ್ತು ವಿಡಿಯೋ ತೆಗೆಯುವ ಸೌಲಭ್ಯಗಳಿದ್ದು ಗುಮಾನಿ ಆಸಾಮಿಗಳ ವಿಚಾರಣೆ, ಘಟನೆಗಳ ವಾಸ್ತವ ದಾಖಲಾತಿ. ವಾಹನ ತಪಾಸಣೆ ಮತ್ತು ಇನ್ನಿತರ ಅಪರಾ‘ ನಿಗ್ರಹ ಕಾರ್ಯಗಳಲ್ಲಿ ಇದು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಹಾಯಕಾರಿ ಎಂದು ಅವರು ಹೇಳಿದರು.
                     ನೂತನ ‘‘ಇ-ಬೀಟ್’’ ವ್ಯವಸ್ಥೆಯನ್ನು ‘‘ರಜಲರ್ ಸಿಸ್ಟಮ್ಸ್ ಪ್ರೈ.ಲಿ.’’ ಎಂಬ ಬೆಂಗಳೂರು ಮೂಲದ ತಾಂತ್ರಿಕ ಸಹಕಾರ ನೀಡುವ ಕಂಪನಿಯ ಸಹಯೋಗದೊಂದಿಗೆ ನಿರ್ವಹಿಸಲಾಗಿದೆ ಎಂದರು.
                      ಪ್ರಸ್ತುತ ನೂತನ ‘‘ಇ-ಬೀಟ್’’ ವ್ಯವಸ್ಥೆಯನ್ನು ತುಮಕೂರು ನಗರ, ತುಮಕೂರು ಗ್ರಾಮಾಂತರ,ತಿಲಕ್ ಪಾರ್ಕ್, ಎನ್‌ಇಪಿಎಸ್, ಜಯನಗರ, ಕ್ಯಾತಸಂದ್ರ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸುವ ಉದ್ದೇಶವಿದೆ ಎಂದು ಡಾ.ದಿವ್ಯ ವಿ.ಗೋಪಿನಾಥ್ ತಿಳಿಸಿದರು.
                     ಈ ಸಂದ‘ರ್ದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಆ್ಯಪ್ ಬಿಡುಗಡೆ ಮಾಡಿದರು. ತುಮಕೂರು ನಗರ ಡಿವೈಎಸ್ಪಿ ನಾಗರಾಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link