ಚಿತ್ರದುರ್ಗ:
ಸಕಾಲಕ್ಕೆ ಮಳೆ ಬಾರದ ಕಾರಣ ಶೇಂಗಾ, ಮೆಕ್ಕೆಜೋಳ ಒಣಗಿರುವುದರಿಂದ ಬರಡು ಜಿಲ್ಲೆ ಚಿತ್ರದುರ್ಗಕ್ಕೆ ಹೆಚ್ಚಿನ ಒತ್ತು ಕೊಡಿ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನರವರಲ್ಲಿ ಮನವಿ ಮಾಡಿದರು.
ರೈತ ಸಂಘದ ಪದಾಧಿಕಾರಿಗಳೊಂದಿಗೆ ಶುಕ್ರವಾರ ಜಿಲ್ಲಾಧಿಕಾರಿಯವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಮಾತನಾಡಿದ ಸೋಮಗುದ್ದು ರಂಗಸ್ವಾಮಿರವರು ಉತ್ತರೆ ಮಳೆಯೂ ಬಾರದಿದ್ದರೆ ಜಿಲ್ಲೆಯಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗುವುದರಲ್ಲಿ ಅನುಮಾನವಿಲ್ಲ. ಜಿಲ್ಲೆಯಲ್ಲಿ ಕುರಿ-ಮೇಕೆ, ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈಗಿನಿಂದಲೇ ಮೇವು ಶೇಖರಣೆ ಮಾಡಿಕೊಂಡು ನೀರಿಗೆ ಬರ ಎದುರಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಒತ್ತಾಯಿಸಿದರು.
ಡಿಸೆಂಬರ್‍ನೊಳಗೆ ಭದ್ರಾಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವುದರಿಂದ ಜಿಲ್ಲೆಗೆ ನೀರು ಹರಿದು ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಭರವಸೆ ನೀಡಿದ್ದಾರೆ. ಹತ್ತಾರು ವರ್ಷಗಳಿಂದಲೂ ಹೋರಾಟ ನಡೆಸಿದ ಫಲವಾಗಿ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿ ಆರಂಭಗೊಂಡಿದೆ. ಆದರೆ ನೀರು ಹರಿದು ಬರುವುದು ಯಾವಾಗ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸೇರಿಕೊಂಡು ಬೆಳೆ ನಷ್ಟ ವರದಿಯನ್ನು ಕೂಡಲೆ ನೀಡುವಂತೆ ಸೂಚಿಸಿ ಎಂದು ಜಿಲ್ಲಾಧಿಕಾರಿಗಳ ಗಮನ ಸೆಳೆದ ಸೋಮಗುದ್ದು ಕೆ.ರಂಗಸ್ವಾಮಿ ರೈತರಿಗೆ ಬೆಳೆ ವಿಮೆ ಇನ್ನು ಕೈಸೇರಿಲ್ಲ ಎಂದು ಕಷ್ಟ ಹೇಳಿಕೊಂಡಾಗ ಜಿಲ್ಲೆಯನ್ನು ಈಗಾಗಲೆ ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಬರ ಪರಿಹಾರ ನೀಡುವ ಕೆಲಸವಾಗಬೇಕು. ರೈತರಿಗೆ ಅನುಕೂಲವಾಗಲೆಂದು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ. ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡಿದ್ದೇನೆ. ಜಾನುವಾರುಗಳ ಮೇವು-ನೀರು ಸಂಗ್ರಹಕ್ಕೆ ಮೊದಲ ಆದ್ಯತೆ ನೀಡುತ್ತೇನೆಂದು ಜಿಲ್ಲಾಧಿಕಾರಿ ರೈತರಿಗೆ ಭರವಸೆ ನೀಡಿದರು.
ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ, ರೈತ ಮುಖಂಡರುಗಳಾದ ಎಲ್.ಬಸವರಾಜಪ್ಪ, ಎಸ್.ಎಂ.ಶಿವಕುಮಾರ್, ಎಂ.ಕಲ್ಲಣ್ಣ, ಭೀಮಾರೆಡ್ಡಿ, ಷಣ್ಮುಖ, ಪರಮೇಶಣ್ಣ, ನಂಜುಂಡಪ್ಪ, ಸತೀಶಣ್ಣ, ವೀರಣ್ಣ, ಹನುಮಂತಪ್ಪ, ಎಸ್.ಆರ್.ತಿಮ್ಮಾರೆಡ್ಡಿ, ಶಾಂತಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.
ನಿಮಗೆ ನಮ್ಮ ಬೆಂಬಲವಿದೆ:
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ ನಮ್ಮ ಜಿಲ್ಲೆಗೆ ಬೇಡ. ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಕೆಲವರು ಜಿಲ್ಲಾ ಉಸ್ತುವಾರಿ ಮಂತ್ರಿ ಬಳಿ ನಿಮ್ಮ ವಿರುದ್ದ ಪ್ರತಿಭಟಿಸಿದ್ದಾರೆ. ಆದರೆ ನಾವುಗಳು ಸದಾ ನಿಮಗೆ ಬೆಂಬಲವಾಗಿರುತ್ತೇವೆ. ಬೇರೆ ಕಡೆ ವರ್ಗಾವಣೆ ಮಾಡಲು ಬಿಡುವುದಿಲ್ಲ ಇಲ್ಲಿಯೇ ಕರ್ತವ್ಯ ನಿರ್ವಹಿಸಿ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ಹಾಗೂ ರೈತ ಮುಖಂಡರುಗಳು ಧೈರ್ಯ ತುಂಬಿದರು.
ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ಅಖಂಡ ಕರ್ನಾಟಕ ರೈತ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಕೆಲವರು ಡಿ.ಸಿ.ಬಂದು ನಮ್ಮ ಕಷ್ಟಗಳನ್ನು ಕೇಳಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿಯೇ ಇಂತಹ ಜಿಲ್ಲಾಧಿಕಾರಿ ನಮ್ಮ ಊರಿಗೆ ಬೇಡ. ಬೇರೆ ಕಡೆ ಎತ್ತಂಗಡಿ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ಸಣ್ಣಪುಟ್ಟ ವಿಚಾರಗಳಿಗೆ ಸೊಪ್ಪು ಹಾಕಬೇಡಿ. ಎಲ್ಲಾ ಸಮಯದಲ್ಲೂ ಜಿಲ್ಲಾಧಿಕಾರಿಯನ್ನೇ ಕಾಣಬೇಕೆಂಬ ಹಠ ಯಾರಿಗೂ ತಕ್ಕುದಲ್ಲ. ಅದಕ್ಕಾಗಿ ನೀವು ಅಧೀರರಾಗದೆ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಜಿಲ್ಲಾಧಿಕಾರಿಗಳಾಗಿ ಬರಪೀಡಿತ ಜಿಲ್ಲೆ ಅಭಿವೃದ್ದಿಗೆ ಗಮನ ಕೊಡಿ. ನಿಮ್ಮ ಜೊತೆ ನಾವಿದ್ದೇವೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.