ಚಿತ್ರದುರ್ಗ:
ಸರ್ಕಾರ ಇನ್ನೂ ನಾಲ್ಕು ಸಾವಿರ ಬಸ್‍ಗಳನ್ನು ಹೊಸದಾಗಿ ಖರೀದಿಸಲು ಕ್ರಮ ಕೈಗೊಂಡಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಈಗಾಗಲೇ ಬಜೆಟ್‍ನಲ್ಲಿ ಮಂಜೂರಾತಿ ಆಗಿದ್ದು, ಶೀಘ್ರದಲ್ಲೇ ಹೊಸ ಬಸ್‍ಗಳು ಇಲಾಖೆಗೆ ಸೇರುತ್ತವೆ ಎಂದರು.
ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಹೆಚ್ಚು ಬೇಡಿಕೆ ಎಂಬುದನ್ನು ತಾನೇ ಸ್ವತಃ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ಹೊಸದಾಗಿ ರೂಟ್‍ಗಳನ್ನು ಬೀಡಬೇಕಾದರೆ ನಮಗೆ ತಿಳಿದಂತೆ ಬೀಡುವುದಕ್ಕೆ ಆಗುವುದಿಲ್ಲ. ಆರ್‍ಟಿಎ ಅನುಮತಿ ಪಡೆದು ನಂತರ ಬಸ್ ಬಿಡಲಾಗುವುದು ಎಂದರು.
ಬಸ್ ಡಿಪೋ ಮತ್ತು ಬಸ್‍ನಿಲ್ದಾಣವನ್ನು ಆಧುನಿಕರಣಗೊಳಿಸಲಾಗುತ್ತದೆ 10 ಎಕರೆ ಜಾಗದಲ್ಲಿ ಟ್ರಕ್ಟಟರ್ಮಿನಲ್ ಮಾಡಲಾಗುತ್ತದೆ. ಜತೆಗೆ 10 ಎಕರೆಯಲ್ಲಿ ವರ್ಕ್ ಶಾಪ್ ಹಾಗೂ ಟೆಸ್ಟಿಂಗ್ ಟ್ರಾಕ್ ಮಾಡಲಾಗುವುದು ಎಂದು ಹೇಳಿದರು.
ಹಳೆ ಡಿಪೋದಲ್ಲಿ ಹೊಸದಾಗಿ ಬಸ್ ನಿಲ್ದಾಣ ನಿರ್ಮಾಣ ಮಾಡಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗುವುದು ಎಂದರು.
ಪ್ರತಿ ತಾಲ್ಲೂಕು ಮತ್ತು ಜಿಲ್ಲೆಯನ್ನು ವೈಯಕ್ತಿಕವಾಗಿ ಭೇಟಿ ನೀಡುತ್ತಿದ್ದೇನೆ. ಸಾರಿಗೆ ಅತ್ಯುತ್ತಮ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಸಂಸ್ಥೆಯಾಗಿದೆ. ಬೇರೆ ಯಾವ ರಾಜ್ಯದಲ್ಲಿ ಇಂತಹ ಸಾರಿಗೆ ವ್ಯವಸ್ಥೆ ಇಲ್ಲ. 1 ಲಕ್ಷದ 16 ಸಾವಿರ ನೌಕರರು ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ 95 ರಷ್ಟು ಗ್ರಾಮೀಣ ಪ್ರದೇಶದ ಜನರು ಸಾರಿಗೆ ಇಲಾಖೆಯಲ್ಲಿ ಎಲ್ಲ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ಸರಿಯಾಗಿ ನಡೆಸಬೇಕು. ಯಾವ ನಗರಸಾರಿಗೆಯಲ್ಲೂ ಇಲಾಖೆಗೆ ಆದಾಯವಿಲ್ಲ. ಬೆಂಗಳೂರು ನಗರ ಒಂದರಲ್ಲಿಯೇ ತಿಂಗಳಿಗೆ ? 30 ಕೋಟಿ ನಷ್ಟ ಉಂಟಾಗುತ್ತಿದೆ. ಜನರ ಹಿತದೃಷ್ಟಿಯಿಂದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗಾಗಿ ಸೇವೆ ನೀಡುತ್ತಿದೆ ಎಂದರು.
ಪ್ರಯಾಣ ದರ ಏರಿಕೆ
ದಿನೇ ದಿನೇ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ನಷ್ಟದಲ್ಲಿ ಇಲಾಖೆ ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಬಸ್ ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಸಾರಿಗೆ ಬಸ್ ಪ್ರಯಾಣ ದರವನ್ನು ಶೇ 18ರಷ್ಟು ಏರಿಕೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ ಎಂದರು.
ಸಮ್ಮೀಶ್ರ ಸರ್ಕಾರ ಸುಗಮವಾಗಿ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಅಪಾಯವಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿರುವುದು ಸಹಜ. ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಠಿಸುತ್ತಿದ್ದಾರೆ ಅಷ್ಟೇ ಎಂದು ಸಚಿವ ತಮ್ಮಣ್ಣ ಹೇಳಿದರು.
ಸಮ್ಮಿಶ್ರ ಸರ್ಕಾರ ನೀರಿನ ಮೇಲೆ ಗುಳ್ಳೆ ಇದ್ದಂತೆ ಯಾವಾಗ ಬೇಕಾದರೂ ಹೊಡೆದು ಹೋಗಬಹುದು ಎಂಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ತಮ್ಮಣ್ಣ, `ಜೀವನವೇ ನೀರಿನ ಮೇಲಿನ ಗುಳ್ಳೆ ನಾವೆಷ್ಟು ವರ್ಷ ಬದುಕುತ್ತೇವೆ ಎಂಬುದು ಗೊತ್ತಿಲ್ಲ. ಇಷ್ಟೇ ವರ್ಷ ನಾವು ಇರುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರಿಂದ ಯಾವುದೇ ಶಾಶ್ವತವಲ್ಲ. ನಶ್ವರದಲ್ಲಿಯೇ ನಾವು ಶಾಶ್ವತತೆಯನ್ನು ಕಾಣುವುದು ನಮ್ಮ ಹಿಂದೂ ಧರ್ಮದಲ್ಲಿದೆ’ ಎಂದು ಹೇಳಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಸಚಿವ ಹೆಚ್.ಆಂಜನೇಯ ಇನ್ನಿತರರು ಹಾಜರಿದ್ದರು