ಸಮಾಜದಲ್ಲಿ ಒಳಿತೆಗೆ ಬೆಂಬಲ ಕಡಿಮೆ

ಹುಳಿಯಾರು:

               ಸಮಾಜದಲ್ಲಿ ಒಳಿತೆಗೆ ಬೆಂಬಲ ಕಡಿಮೆಯಾಗುತ್ತಿದ್ದು ಒಳಿತು ಮಾಡುವವರನ್ನು ಖಳನಾಯಕರನ್ನಾಗಿ ಬಿಂಬಿಸಲಾಗುತ್ತಿದೆ ಎಂದು ಸಾಹಿತಿ ಹಾಗೂ ಪ್ರಾಂಶುಪಾಲ ಕೃಷ್ಣಮೂರ್ತಿ ಬಿಳಿಗೆರೆ ವಿಷಾದ ವ್ಯಕ್ತಪಡಿಸಿದರು.

              ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದ ವಿಶ್ವಭಾರತಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಊರಿನ ಪ್ರೇಮ, ದೇಶ ಪ್ರೇಮ ಸೇರಿದಂತೆ ಸಮಾಜಮುಖಿ ಕಾರ್ಯಗಳು ಕಡಿಮೆಯಾಗುತ್ತಿವೆ. ವಿದ್ಯಾರ್ಥಿಗಳು, ಶಿಕ್ಷಕರು, ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ಲಕ್ಷಾಂತರ ಜನರೂ ಇದ್ದರೂ ಒಳಿತಿನ ಬೀಜಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಮೀಷನರ್ ಸೇರಿದಂತೆ ಇತರ ಅಧಿಕಾರಿಗಳು, ಜನಪ್ರತಿನಿದಿಗಳು ಅಧಿಕಾರದಲ್ಲಿದ್ದೇವೆ ಎಂದು ತಿಳಿದು ಕೊಂಡಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಶಿಕ್ಷಕರು ನಮಗೆ ಅಧಿಕಾರ ಇಲ್ಲ ಎಂದು ತಿಳಿದುಕೊಂಡಿದ್ದಾರೆ ಎಂದರು.

             ನಿಜವಾರ ಅಧಿಕಾರ ಶಿಕ್ಷರರಲ್ಲಿದೆ. ಅಧಿಕಾರ ಎಂದರೆ ಅಹಂಕಾರ ಅಲ್ಲ. ಅಧಿಕಾರ ಎಂದರೆ ಪ್ರೀತಿ, ಬದ್ಧತೆ ಎಂದು ತಿಳಿಯಬೇಕಾಗಿದೆ. ಧರ್ಮದ ಅಫೀಮುಗಳನ್ನು ತಿನ್ನಿಸುತ್ತಿರುವ ರಾಜಕಾರಣಿಗಳು, ಧರ್ಮ ಗುರುಗಳು ನಾವು ಒಳಿತನ್ನು ಮಾಡುತ್ತಿದ್ದೇವೆ ಎಂದು ಉಡಾಫೆ ಹೊಡೆಯುತ್ತಿದ್ದಾರೆ. ಆದರೆ ಒಳಿತನ್ನು ಮಾಡಬೇಕಿರುವ ಶಿಕ್ಷಕರು ಉಡಾಫೆ ತೋರದೆ ಒಳಿತನ್ನು ಮಾಡಬೇಕು ಎಂದರು.
ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಕಷ್ಟಕರ ಕೆಲಸವಾಗಿತ್ತು. ಇಡೀ ತಾಲ್ಲೂಕಿಗೆ ಒಂದೇ ಒಂದು ಪ್ರೌಢಶಾಲೆಯಿತ್ತು. ನಂತರದ ದಿನಗಳಲ್ಲಿ ಅನೇಕ ಜನಪರ ವ್ಯಕ್ತಿಗಳು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಲ ಸಂಸ್ಥೆಗಳನ್ನು ತೆರದು ಪ್ರೌಢ ಶಿಕ್ಷಣ ನೀಡಿದರು. ಇದರ ದಿಸೆಯಲ್ಲಿ ಕಳೆದ 35 ವರ್ಷಗಳ ಹಿಂದೆ ಆರಂಭವಾದ ವಿಶ್ವಭಾರತಿ ಪ್ರೌಢಶಾಲೆ ಉತ್ತಮವಾಗಿ ಕೆಲಸಮಾಡುವ ಮೂಲಕ ನೂರಾರು ಮಕ್ಕಳಿಗೆ ಬೆಳಕು ನೀಡಿದೆ ಎಂದರು.

              ಉಪನ್ಯಾಸಕ ಬೆಳಗುಲಿ ಶಶಿಭೂಷಣ್ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತು ಭೊದನೆ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಕೌಟುಂಬಿಕ ಸೇರಿದಂತೆ ಹಲವು ಜಂಜಾಟಗಳಿಗೆ ಸಿಲುಕಿ ಅಭ್ಯಾಸದಲ್ಲಿ ಹಿಂದೆ ಉಳಿಯುವ ಸಾಧ್ಯತೆ ಇರುತ್ತದೆ. ಅಂತಹವರನ್ನು ಗುರ್ತಿಸಿ ಮನಸ್ಸು ಪರಿವರ್ತಿಸಿ ಉತ್ತಮ ಪ್ರಜೆಯನ್ನಾಗಿ ರೂಪಿಸುವವರೇ ನಿಜವಾದ ಶಿಕ್ಷಕರು ಎಂದರು.

              ವಿಶ್ವಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಅನಂತರಾಮಯ್ಯ ಗಿಡ ನೆಡುವ ಮೂಲಕ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಗಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಕೆ.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಮುಖ್ಯ ಶಿಕ್ಷಕರಾದ ಜಿ.ಎಸ್.ಚಂದ್ರಶೇಖರಯ್ಯ, ಸಿ.ನಾಗರಾಜು, ಟಿ.ಸಿ.ಶಿವಪ್ಪ, ದಿ.ಟಿ.ಬಿ.ತಮ್ಮಯ್ಯನವರ ಪುತ್ರ ಶಿಕ್ಷಕ ಬಸವರಾಜು, ಮುಖ್ಯ ಶಿಕ್ಷಕ ಕೆ.ರಮೇಶ್, ಸಹಶಿಕ್ಷಕರಾದ ಜೆ.ಆರ್.ನಟರಾಜು, ಜಯಣ್ಣ, ಗುಮಾಸ್ತ ನರಸಿಂಹಯ್ಯ, ನಿವೃತ್ತ ಜವಾನ ಸಣ್ಣಯ್ಯ ಇವರಿಗೆ ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಜಿ.ಸಿ,ಮಧು, ಎಸ್.ಎಲ್.ಗಂಗಾಧರ, ಸ್ವಾಮಿ,ವಿಶ್ವನಾಥ್, ಕ್ಯಾತಯ್ಯ, ಚಂದ್ರಶೇಖರ್, ರಂಗಸ್ವಾಮಿ, ಪ್ರವೀಣ್, ವೀರಭದ್ರಯ್ಯ, ರಷ್ಮಿ, ಮಂಜುನಾಥ್ ಸೇರಿದಂತೆ 50 ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link