ಬೆಂಗಳೂರು:
ಭೂಪರಿವರ್ತನೆಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಭೂಮಾಲೀಕರಿಂದ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭೂಪರಿವರ್ತನೆ ಪ್ರಕ್ರಿಯೆಯನ್ನು ಸರಳಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಗರ ಪ್ರದೇಶಗಳಿಗೆ ಅನ್ವಯವಾಗುವಂತೆ 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 95ಕ್ಕೆ ಸೂಕ್ತ ತಿದ್ದುಪಡಿ ತಂದಿದ್ದು, ಈ ಬಗ್ಗೆ ಅಗತ್ಯ ತಂತ್ರಾಂಶ ಕೂಡ ಅಭಿವೃದ್ಧಿ ಪಡಿಸಲಾಗಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ, ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರಿವರ್ತನೆ ಪ್ರಕ್ರಿಯೆಯು ಸುಗಮವಾಗಿ ಮತ್ತು ತ್ವರಿತವಾಗಿ ನಡೆಯಲು ಅನುಕೂಲವಾಗುವಂತೆ ಹಾಗೂ ಈ ನಿಟ್ಟಿನಲ್ಲಿ ಪರಿಭಾವಿತ ಪರಿವರ್ತನೆ (ಡೀಮ್ಡ್ ಕನ್ವರ್ಷನ್) ಎಂಬ ಸರಳವಾದ ಪ್ರಕ್ರಿಯೆಯನ್ನು ಇತ್ತೀಚೆಗೆ ಜಾರಿಗೊಳಿಸಲಾಗಿದೆ,’’ ಎಂದು ವಿವರಿಸಿದರು.
ಹೊಸ ನಿಯಮದ ಪ್ರಕಾರ, ಅರ್ಜಿದಾರನು ಮೊದಲಿಗೆ ಸಂಬಂಧಪಟ್ಟ ಜಮೀನಿನ ಸರ್ವೆ ನಂ. ಮತ್ತು ಅಗತ್ಯ ವಿವರಗಳನ್ನೊಳಗೊಂಡ ಮನವಿ ಸಲ್ಲಿಸಿದ ಬಳಿಕ ಪ್ರಮಾಣಪತ್ರ ಸಲ್ಲಿಸಬೇಕು. ಮನವಿಯು ಭಾಗಶ: ಭೂಪರಿವರ್ತನೆಗೆ ಸಂಬಂಧಿಸಿದ್ದಲ್ಲಿ, ಪಹಣಿಯಲ್ಲಿ ಒಬ್ಬರಿಗಿಂತ ಹೆಚ್ಚು ಖಾತೆದಾರರ ಹೆಸರಿದ್ದಲ್ಲಿ ಹಾಗೂ ಮನವಿಯು ‘ಪೈಕಿ ಪಹಣಿಗಳನ್ನು’ ಒಳಗೊಂಡಿದ್ದಲ್ಲಿ ಅರ್ಜಿದಾರ 11ಇ ನಕ್ಷೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದರು.
ಬಳಿಕ, ಈ ಮನವಿಯನ್ನು ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಕಳುಹಿಸಲಾಗುವುದು. ಅಲ್ಲಿನ ಅಧಿಕಾರಿಗಳು, ಈ ಮನವಿಯನ್ನು ಪರಿಶೀಲಿಸಿ ಮಹಾಯೋಜನೆಯಂತೆ (ಮಾಸ್ಟರ್ ಪ್ಲಾನ್) ತಮ್ಮ ಅಭಿಪ್ರಾಯವನ್ನು ಸಲ್ಲಿಸುತ್ತಾರೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಸ್ವೀಕೃತವಾಗುವ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಭೂಪರಿವರ್ತನೆಗೆ ಸಂಬಂಧಿಸಿದ ಶುಲ್ಕ ಮತ್ತು ದಂಡ ನಿಗದಿಪಡಿಸಲಾಗುವುದು ಎಂದು ಸಚಿವ ದೇಶಪಾಂಡೆ ಹೇಳಿದರು.
ಬಳಿಕ, ಅರ್ಜಿದಾರನು ಆನ್‍ಲೈನ್ ಮೂಲಕ ನಿಗದಿತ ಶುಲ್ಕ ಮತ್ತು ದಂಡವನ್ನು ಪಾವತಿಸಬೇಕು. ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಜಿಲ್ಲಾಧಿಕಾರಿಗಳು ಡಿಜಿಟಲ್ ಅಂಕಿತದ ಮೂಲಕ ಭೂಪರಿವರ್ತನಾ ಆದೇಶ ಹೊರಡಿಸಲಿದ್ದಾರೆ. ಈ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಲು ಸುತ್ತೋಲೆ ಹೊರಡಿಸಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ