ಮಧುಗಿರಿ
ಸರಕಾರಿ ಭೂಮಿಯನ್ನು ಪುರಸಭೆಗೆ ಹಕ್ಕು ಪತ್ರ ನೀಡುವ ಅಧಿಕಾರವಿಲ್ಲದಿದ್ದರೂ ಇಲ್ಲಿನ ಕೆಲವು ಕಾಯಂ ನೌಕರರು, ಆಡಳಿತ ಸಿಬ್ಬಂದಿ ಮನಸೋ ಇಚ್ಚೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಎಂಜಲು ಕಾಸಿಗಾಗಿ ಮುಗ್ದ ಜನರ ಬಾಳಿನಲ್ಲಿ ಚೆಲ್ಲಾಟ ಆಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಪಟ್ಟಣದ ಪುರಸಭಾ ವ್ಯಾಪ್ತಿಯ ಸ.ನಂ 16 ರಲ್ಲಿ 14 ಮತ್ತು 16 ನೇ ವಾರ್ಡಿಗೆ ಸೇರಿದ ಶನಿಮಹಾತ್ಮ ದೇವಾಲಯದ ಸಮೀಪ ಸುಮಾರು 20 ವರ್ಷಗಳ ಹಿಂದೆ 197 ನಿವೇಶನಗಳನ್ನು ವಿಂಗಡಿಸಿ, ಸುಮಾರು 160 ನಿವೇಶನಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ.
ಕೆಲ ರಿಯಲ್ ಎಸ್ಟೇಟ್ ದಂಧೆಕೋರರು ಸ.ನಂ 15 ಸರಕಾರಿ ಭೂಮಿಯನ್ನು ಪುರಸಭೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಹಕ್ಕು ಪತ್ರ ಸೃಷ್ಟಿಸಿ ಭಾರಿ ಬೆಲೆಗೆ ಭೂಮಿ ಮಾರಿದ್ದಾರೆ. ಈ ಭೂಮಿಯ ಹಕ್ಕುಪತ್ರ ನೀಡುವುದು ಕಂದಾಯಾಧಿಕಾರಿ ತಹಸೀಲ್ದಾರ್‍ಗೆ ಮಾತ್ರ ಅರ್ಹತೆ ಇದ್ದು, ಹಳೆಯ ಹಕ್ಕುಪತ್ರವನ್ನೆ ಮರು ಸೃಷ್ಟಿಸಿ ಜನತೆಗೆ ನೀಡಿ ಪುರಸಭೆಯನ್ನೇ ರಿಯಲ್ ಎಸ್ಟೇಟ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ.
ಕಂದಾಯ ಇಲಾಖೆಯ ವತಿಯಿಂದ ಅಬಕಾರಿ ಇಲಾಖೆಗೆ ಜಮೀನು ನೀಡಲು ಸಮ್ಮತಿಸಿದ್ದು, ಆ ಇಲಾಖೆಯವರು ನಮಗೆ ಈ ಸ್ಥಳಕ್ಕೆ ರಸ್ತೆ ಮಾರ್ಗ ತೋರಿಸಿ ಎಂದು ಮನವಿ ಪತ್ರ ಸಲ್ಲಿಸಿ, ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆಗೆ ಹೋದಾಗ ಜಮೀನಲ್ಲಿನ ಬಂಡೆ ಕಲ್ಲುಗಳ ಮೇಲೂ ನಿವೇಶನಗಳ ಸಂಖ್ಯೆ ನಮೂದಿಸಿದ್ದು ಕಂಡು ಬಂದಿದೆ.
ಸ.ನಂ 16 ರಲ್ಲಿನ ಜಮೀನನ್ನು ಮಾತ್ರ ಪುರಸಭೆಗೆ ಹಸ್ತಾಂತರಿಸಿದ್ದು, ಮತ್ಯಾವ ಜಮೀನನ್ನು ಪುರಸಭೆಗೆ ನೀಡಿಲ್ಲವೆಂಬುದು ಕಂದಾಯಾಧಿಕಾರಿಗಳ ಅಂಬೋಣ. ಆದರೆ ಭೂಮಿಯನ್ನು ಪುರಸಭೆಯ ಅಧಿಕಾರಿಗಳು ನಕಲಿ ಖಾತೆಗಳನ್ನು ಮನಸೋ ಇಚ್ಚೆ ಸೃಷ್ಟಿಸಿ ಫಲಾನುಭವಿಗಳಿಗೆ ನೀಡಿದ್ದಾರೆ.
ಈಗ ನೀಡಿರುವ ಮತ್ತು ಹಿಂದಿನ ಹಕ್ಕು ಪತ್ರಗಳಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಹೇಳಲಾಗುತ್ತಿದ್ದು, ಖುದ್ದಾಗಿ ಹೋಗಿ ಪರಿಶೀಲಿಸಿದರೆ ಬೆಟ್ಟದಲ್ಲಿನ ದೊಡ್ಡ ದೊಡ್ಡ ಗುಂಡುಗಳು ಹಾಗೂ ಬಂಡೆಗಳ ಮೇಲೆ ನಿವೇಶನದ ಸಂಖ್ಯೆ ಹಾಗೂ ಫಲಾನುಭವಿಗಳ ಮೊಬೈಲ್ ನಂಬರ್ ಮತ್ತು ನಿವೇಶನದ ಅಳತೆಗಳು ಕಂಡು ಬರುತ್ತಿವೆ.
ಜತೆಗೆ ಈ ಹಿಂದೆ ನೀಡಿರುವ ಹಕ್ಕು ಪತ್ರಗಳಲ್ಲಿ ತಹಸೀಲ್ದಾರ್ ಸಹಿಯ ಬದಲು ಮುಖ್ಯಾಧಿಕಾರಿ ಪುರಸಭೆ ಎಂದು ಸಹಿ ಮಾಡಿ ನೀಡಿ, ತಿದ್ದುಪಡಿ ಮಾಡಿರುವ ಹಕ್ಕು ಪತ್ರಗಳು ಗೋಚರವಾಗುತ್ತಿವೆ. ಪುರಸಭೆಯಿಂದ ನೀಡಬೇಕಾದ 15 ಮತ್ತು 30 ಅಡಿಗಳ ಬದಲು 30 ಮತ್ತು 40 ಅಳತೆಗಳು ಸ್ಥಳದಲ್ಲಿ ಕಂಡು ಬರುತ್ತಿವೆ.
ಮೂಲಭೂತ ಸೌಕರ್ಯಗಳನ್ನು ಪುರಸಭೆ ವತಿಯಿಂದ ಒದಗಿಸದೆ ಏಕಾ-ಏಕಿ ನಿವೇಶನಗಳನ್ನು ನಾಗರಿಕರೆ ಗುರುತಿಸಿಕೊಂಡಿದ್ದು, ಕೇವಲ ಪುರಸಭೆ ಖಾತಾ ಎಕ್ಸ್ ಟ್ಯಾಕ್ಟ ಗಳನ್ನು ಮತ್ತು ಕಂದಾಯ ಪಾವತಿ ಮಾಡಿರುವ ರಶೀದಿಗಳ ಆಧಾರದ ಮೇಲೆ ನಿವೇಶನ ಹಂಚಿಕೆ ಮತ್ತು ಮನೆಗಳ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ
ಇಲ್ಲಿರುವ ನಿವೇಶನಗಳಲ್ಲಿ ಬಹುಪಾಲು ಅನ್ಯ ಜಿಲ್ಲೆ, ತಾಲ್ಲೂಕು ಹಾಗೂ ಇತರೆ ಗ್ರಾಮಗಳ ಮತ್ತು ಕೆಲ ಜನಪ್ರತಿನಿಧಿಗಳ ಹೆಸರಿನಲ್ಲಿರುವುದು ಆಶ್ಚರ್ಯಕರವಾಗಿದೆ. ಸುತ್ತ ಮುತ್ತಲಿನ ಬೆಟ್ಟಗಳ ಸಮೀಪ ಇರುವ ಖರಾಬು ಜಾಗಗಳನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ 60 ಸಾವಿರದಿಂದ ಹಿಡಿದು 5 ಲಕ್ಷರೂ.ಗಳ ವರೆಗೆ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕಾಗಿದ್ದು ವಂಚನೆಯಾಗಿರುವ ಮುಗ್ಧರಿಗೆ ನ್ಯಾಯ ಒದಗಿಸಬೇಕಾಗಿದೆ.
ನಿವೇಶನ ಖರೀದಿಸಿರುವ ಬಡ ಜನತೆ ನಕಲಿ ಹಕ್ಕುಪತ್ರ ಕೈಯಲ್ಲಿಡಿದು, ಈ ಸ್ಥಳ ನಮ್ಮ ಸ್ವಂತದ್ದು ಎಂಬ ಭಾವನೆಯಲ್ಲಿದ್ದಾರೆ, ಹೇಗಿದೆ ನೋಡಿ ಪುರಸಭೆಯವರ ಪುರಾಣ. ಹಣದಾಸೆಯ ಹಿಂದೆ ಬಿದ್ದಿರುವ ಅಧಿಕಾರಿಗಳು ಒಂದೇ ನಿವೇಶನಕ್ಕೆ ಎರಡು ಮೂರು ನಕಲಿ ಹಕ್ಕು ಪತ್ರ ನೀಡಿ ಒಬ್ಬರಿಗೊಬ್ಬರು ಬಡಿದಾಡಿಕೊಂಡು ಕೋರ್ಟ್ ಕಚೇರಿ ಎಂದು ಅಲೆದಾಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








