ತುಮಕೂರು:
ಕಾಡುಗೊಲ್ಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಕ್ಟೋಬರ್ 29ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆಯ ಪದಾಧಿಕಾರಿಗಳು ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವ ಸೇನೆ ರಾಜ್ಯಾಧ್ಯಕ್ಷ ಜಿ.ವಿ.ರಮೇಶ್ ಮಾತನಾಡಿ ಪ್ರೊ.ಅನ್ನಪೂರ್ಣಮ್ಮ ವರದಿಯ ಪ್ರಕಾರ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದರೂ ಸಹ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಕಾಡುಗೊಲ್ಲ ಸಮುದಾಯವನ್ನು ಜಾತಿಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಕಾಡುಗೊಲ್ಲ ಯುವಸೇನೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇನ್ನೂ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲ, ಸಂಬಂಧಿಸಿದವರನ್ನು ಕೇಳಿದರೆ ಕೆಲವು ಕಾನೂನು ತೊಡಕುಗಳಿಂದ ವಿಳಂಬವಾಗಿದೆ ಎನ್ನುತ್ತಾರೆ. ಕೂಡಲೇ ರಾಜ್ಯ ಸರ್ಕಾರ ಕಾಡುಗೊಲ್ಲ ಸಮುದಾಯಕ್ಕೆ ಎಲ್ಲಾ ತಾಲ್ಲೂಕು ಕಚೇರಿಗಳಲ್ಲೂ ಜಾತಿ ಪ್ರಮಾಣ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 29ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲಾ ಹಿರಿಯ ಕಾಡುಗೊಲ್ಲರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಕಾಡುಗೊಲ್ಲ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸಲು ಹಾಗೂ ಎಲ್ಲಾ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ತಿರ್ಮನ ಕೈಗೊಳ್ಳಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲರ ಯುವಸೇನೆಯ ಗೌರವಾಧ್ಯಕ್ಷ ಸಿ. ಶಿವುಯಾದವ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಯಕೃಷ್ಣ, ಯುವ ಸೇನೆಯ ಜಿಲ್ಲಾಧ್ಯಕ್ಷ ಡಾ.ಶಿವಕುಮಾರಸ್ವಾಮಿ , ಕರೇಕಲ್ಲು ಚಿತ್ರಲಿಂಗೇಶ್ವರ ಸ್ವಾಮಿ ದೇವಸ್ಥಾನ ಪೂಜಾರ ಮಹಾಲಿಂಗಯ್ಯ, ಕಾರ್ಮಿಕ ಮುಖಂಡರಾದ ಗೌಡರಂಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಪ್ರಕಾಶ್, ಖಜಾಂಚಿ ನಾಗರಾಜು, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ರಾಮಪ್ಪನಹಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಮಂಜುನಾಥ್ ಮ್ಯಾಕ್ಲೂರಹಳ್ಳಿ, ಜಿ.ಟಿ. ಗೋವಿಂದರಾಜು, ಡಿ.ಮಹಾಲಿಂಗಯ್ಯ, ಚಿನಗ ಶ್ರೀನಿವಾಸ್, ಪ್ರಕಾಶ್, ಯುವ ಮುಖಂಡರಾದ ರಾಜು ದೊಡ್ಡಬಾಣಗೆರೆ, ಈರಣ್ಣ ಪುಲಿಮಾಚಿ, ಈರೇಗೌಡ, ಬೀಡಾಬಾಬು, ಚಿಂತನಾ ಚಾವಡಿಯ ಜೆನಿಗೆ ಜಯರಾಂ, ಚಿತ್ತರಾಜು, ಸತೀಶ್ ಸಾತೇನಹಳ್ಳಿ, ಭಾರತೀಯ ಕೃಷಿಕ ಸಮಾಜದ ಉಪಾಧ್ಯಕ್ಷ ಬಿ.ಕೆ.ರಾಜಣ್ಣ, ಹಿರಿಯೂರಿನ ಕರಡಿ ಬುಳ್ಳಪ್ಪ ವೇದಿಕೆಯ ತಿಮ್ಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ