ದಾವಣಗೆರೆ:
ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ, ಮಳೆಯ ಅಭಾವದಿಂದ ಈ ಬಾರಿಯೂ ಜಿಲ್ಲೆಯಲ್ಲಿ ಬರದ ಛಾಯೆ ಮುಂದುವರೆದಿದ್ದು, ಕಷ್ಟಪಟ್ಟು ಬೆಳೆದ ಫಸಲು ಕೈಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು… ಮಲೆನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಡ್ಯಾಮ್ನಿಂದ ನದಿಗೆ ನೀರು ಹರಿಸುತ್ತಿರುವ ಪರಿಣಾಮ, ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರೆ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ನೀರಾವರಿ ಆಶ್ರಿತ ಜಮೀನುಗಳಲ್ಲಿ ಬೆಳೆ ಸಮೃದ್ಧವಾಗಿದೆ. ಆದರೆ, ಮಳೆಯಾಶ್ರಿತ ರೈತರು ಮಳೆ ಬಾರದಿದ್ದರೆ, ಕಷ್ಪಪಟ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿರುವ ಬೆಳೆಯು ಕೈ ಸೇರದ ಆತಂಕದಲ್ಲಿದ್ದಾರೆ.
ಈಗಾಗಲೇ ಸತತ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯ ರೈತರಲ್ಲಿ ಭರ್ಜರಿ ಆರಂಭವಾಗಿದ್ದ ಮುಂಗಾರು ಒಳ್ಳೆಯ ಫಸಲು ಬರುವ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ, ಈಗ ಮಳೆ ಕೊರತೆ ಎದುರಾಗಿದ್ದು, ಕೈಗೆ ಬಂದ ಫಸಲು ಬಾಯಿಗೆ ಬಾರದ ಭೀತಿಯಲ್ಲಿದ್ದಾರೆ.
ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ.33ರಷ್ಟು ಅಧಿಕ ಮಳೆಯಾಗಿತ್ತು. ವಾಡಿಕೆ ಮಳೆ 84 ಮಿ.ಮೀ. ಇದ್ದು, ವಾಸ್ತವವಾಗಿ 111 ಮಿ.ಮೀ. ಮಳೆಯಾಗಿತ್ತು. ಆದರೆ ಸೆಪ್ಟಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಕುಸಿದಿದ್ದು, ಶೇ.59ರಷ್ಟು ಮಳೆ ಕೊರತೆಯಾಗಿದೆ. ಸೆ.1ರಿಂದ 15 ಮಿ.ಮೀ. ವಾಡಿಕೆ ಮಳೆಗೆ 6 ಮಿ.ಮೀ. ಮಾತ್ರವೇ ವಾಸ್ತವ ಮಳೆಯಾಗಿದೆ. ಈಗ ಬೆಳೆ ಕಾಳು ಗಟ್ಟುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿರುವುದರಿಂದ ಮಳೆ ಇಂದು ಬರಬಹುದು, ನಾಳೆ ಬರಬಹುದೆಂಬ ಆಸೆ ಗಣ್ಣಿನಿಂದ ಆಗಸದೆಡೆ ರೈತರು ಮುಖ ಮಾಡಿದ್ದಾರೆ.
ಸಧ್ಯ ಜಿಲ್ಲೆಯ 5 ಹೋಬಳಿಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಹರಪನಹಳ್ಳಿ ಶೇ.26, ಚಿಗಟೇರಿ ಶೇ.27, ತೆಲಗಿ ಶೇ.28, ಹರಿಹರ ಶೇ.21 ಹಾಗೂ ಹೊನ್ನಾಳಿ ತಾಲೂಕಿನ ಗೋವಿನಕೋವಿ(2) ಹೋಬಳಿಯಲ್ಲಿ ಶೇ.23ರಷ್ಟು ಮಳೆ ಕೊರತೆ ಕಂಡುಬಂದಿದೆ. ಇನ್ನುಳಿದಂತೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು, ಬಸವಾಪಟ್ಟಣ(2), ದಾವಣಗೆರೆ, ಮಾಯಕೊಂಡ, ಹರಪನಹಳ್ಳಿ ತಾಲೂಕು ಅರಸೀಕೆರೆ, ಹರಿಹರ, ಮಲೇಬೆನ್ನೂರು, ಜಗಳೂರು ತಾಲೂಕು ಬಿಳಚೋಡು ಹೋಬಳಿಗಳಲ್ಲೂ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ.
ಜಿಲ್ಲೆಯ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಮುಂಗಾರು ಬಿತ್ತನೆ ಗುರಿ ಹೊಂದಿದ್ದು, 3.18 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ.
ಈ ಮೂಲಕ ಬಿತ್ತನೆಯಲ್ಲಿ ಶೇ.98ರಷ್ಟು ಪ್ರಗತಿ ಸಾಧಿಸಲಾಗಿದೆ. ಆದರೆ ಕೈಗೆ ಬಂದ ಫಸಲನ್ನು ಮಳೆ ಕೊರತೆಯಿಂದಾಗಿ ಕಳೆದುಕೊಳ್ಳುವ ಆತಂಕದಲ್ಲಿ ಮಳೆಯಾಶ್ರಿತ ರೈತರಿದ್ದಾರೆ. ಹಿಂದಿನ ಪುಬ್ಬ ಮಳೆ ಕೈಕೊಟ್ಟಿದ್ದು, ಸೆ.14ರಿಂದ ಆರಂಭವಾಗಲಿರುವ ಉತ್ತರೆ ಮಳೆಯು ರೈತರ ಕೈ ಹಿಡಿಯದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಅಲ್ಲದೆ, ತಡವಾಗಿ ಬಿತ್ತಿದ ಬೆಳೆಗಳಿಗೆ ಹುಳು ಬಾಧೆ ಕಾಣಿಸಿಕೊಂಡಿದೆ. ಈ ವಾರ ಉತ್ತಮ ಮಳೆಯಾಗದಿದ್ದರೆ ಮೆಕ್ಕೆಜೋಳ ಇಳುವರಿ ಕುಂಠಿತವಾಗುವ ಸಾಧ್ಯತೆ ಹೆಚ್ಚಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ತೋಟಗಾರಿಕೆ ಬೆಳೆಗಳ ಸ್ಥಿತಿ ಉತ್ತಮವಾಗಿದ್ದು, ಮಳೆ ಕೊರತೆಯಿಂದಾಗಿ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಮಳೆಯನ್ನೇ ಅವಲಂಬಿಸಿರುವ ಜಗಳೂರು, ಹರಪನಹಳ್ಳಿ, ದಾವಣಗೆರೆ, ಚನ್ನಗಿರಿ, ಹರಿಹರ ಹಾಗೂ ಹೊನ್ನಾಳಿ ತಾಲೂಕುಗಳ ಕೆಲ ಭಾಗದ ರೈತರು ಸಹ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/bara-chaye.gif)