ಚಳ್ಳಕೆರೆ
ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ತಾಲ್ಲೂಕಿನ ಚಿತ್ರನಾಯಕನಹಳ್ಳಿಯ ಶ್ರೀಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನಡೆಸಿ ಜಯಸಾಧಿಸಿ ಬೆಂಗಳೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಬುಧವಾರ ಎಲ್ಲಾ ಕ್ರೀಡಾಪಟುಗಳನ್ನು ಶಾಲೆಯಲ್ಲೇ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಆರ್.ಪ್ರಶಾಂತ್ಸಾಗರ್, ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಆಟ ಪ್ರದರ್ಶನದ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ತಾಲ್ಲೂಕಿಗೆ ಕೀರ್ತಿ ತಂದಿದ್ಧಾರೆ. ವಿಶೇಷವಾಗಿ ಶಾಲೆಯ ದೈಹಿಕ ಶಿಕ್ಷಕ ಪರಿಶ್ರಮ ಹಾಗೂ ಕ್ರೀಡಾಪಟುಗಳ ಸಮಯೋಚಿತ ಆಟ ಈ ಗೆಲುವಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದರು.
ದೈಹಿಕ ಶಿಕ್ಷಕ ಕೆ.ಟಿ.ವೇಲೂರು ಮಾತನಾಡಿ, ಗ್ರಾಮಾಂತರ ಮಟ್ಟದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದ್ದು, ಕ್ರೀಡಾಪಟುಗಳು ಆಟದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಆಟವಾಡಿದ್ದು ಗೆಲುವಿಗೆ ಕಾರಣವಾಗಿದೆ. ತಂಡದ ಆಟಗಾರರಾದ ಟಿ.ರಂಜಿತಾ, ಟಿ.ಸುಚಿತ್ರ, ಎನ್.ಆಶಾ, ಎನ್.ರಶ್ಮಿ, ಎನ್.ರೇಷ್ಮ, ಕೆ.ವನಜಾಕ್ಷಿ, ಎನ್.ಅರ್ಪಿತಾ, ಎನ್.ಸೃಷ್ಠಿ, ಎಸ್.ಅಮೃತ, ಎಂ.ವರ್ಷ, ಎಂ.ಭವ್ಯ, ಎಂ.ಕವಿತಾ ಉತ್ತಮ ಆಟ ಪ್ರದರ್ಶಿಸಿದ್ದಾರೆಂದರು.
ತಂಡದ ವ್ಯವಸ್ಥಾಪಕ ಬಿ.ಮಲ್ಲಿಕಾರ್ಜುನ್, ಮಂಜುನಾಥ, ಸಿದ್ದೇಶ್, ವೆಂಕಟೇಶ್, ಭರತೇಶ್, ಮಾರುತಿ, ಸುರೇಶ್ ಮುಂತಾದವರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








