ಹೊನ್ನಾಳಿ:
ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ಲಭಿಸುತ್ತದೆ ಎಂದು ಪಿಎಸ್ಐ ಎನ್.ಸಿ. ಕಾಡದೇವರ ಹೇಳಿದರು.ತಾಲೂಕಿನ ನೇರಲಗುಂಡಿ ಗ್ರಾಮದ ಎವರೆಸ್ಟ್ ಅಥ್ಲೆಟಿಕ್ ಕ್ಲಬ್ ಮತ್ತು ಎವರೆಸ್ಟ್ ಅಥ್ಲೆಟಿಕ್ ಕ್ಲಬ್ನ ಶಿವಮೊಗ್ಗ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನೇರಲಗುಂಡಿ ಗ್ರಾಮದಲ್ಲಿ ಪರಿಸರ ಮತ್ತು ಜೀವಸಂಕುಲದ ಸಂರಕ್ಷಣೆಗಾಗಿ ಹಮ್ಮಿಕೊಂಡ ಪುರುಷರ ಮತ್ತು ಮಹಿಳೆಯರ ವಿಭಾಗಗಳ ಗುಡ್ಡಗಾಡು ಓಟದ ರಾಜ್ಯಮಟ್ಟದ ಎರಡನೇ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಿಂದ ದೇಹಕ್ಕೆ ಅಗತ್ಯವಾದ ವ್ಯಾಯಾಮ ದೊರೆಯುತ್ತದೆ. ಹಾಗಾಗಿ, ದೇಹ, ಮನಸ್ಸುಗಳು ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ. ಆದ್ದರಿಂದ, ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಎವರೆಸ್ಟ್ ಅಥ್ಲೆಟಿಕ್ ಕ್ಲಬ್ ಕಾರ್ಯದರ್ಶಿ ಎನ್.ಇ. ಚೇತನ್ಕುಮಾರ್ ಮಾತನಾಡಿ, ನಮ್ಮ ಯುವಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೆಲವು ಕ್ರೀಡೆಗಳನ್ನು ಆಯೋಜಿಸುವ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎವರೆಸ್ಟ್ ಅಥ್ಲೆಟಿಕ್ ಕ್ಲಬ್ ಮುಂದಡಿ ಇಟ್ಟಿದೆ ಎಂದು ತಿಳಿಸಿದರು.
ಎವರೆಸ್ಟ್ ಅಥ್ಲೆಟಿಕ್ ಕ್ಲಬ್ ಅಧ್ಯಕ್ಷ ಎನ್.ಎಸ್. ರಘು, ಕ್ಲಬ್ನ ಪದಾಧಿಕಾರಿಗಳಾದ ಮೈಕೆಲ್, ಬಾಲಕೃಷ್ಣ ಅವಲಕ್ಕಿ ಇತರರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪುರುಷರು ಮತ್ತು ಮಹಿಳೆಯರು ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ವಿಜೇತರ ವಿವರ ಇಂತಿದೆ:
ಪುರುಷರ 12 ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯ ವಿಜೇತರು: ಮಹಾರಾಷ್ಟ್ರದ ಅನಿಲ್ಕುಮಾರ್ ಎಂ.(ಪ್ರಥಮ), ಉತ್ತರಪ್ರದೇಶದ ಪಿಂಟು ಕುಮಾರ್ ಯಾದವ್(ದ್ವಿತೀಯ), ಮಹಾರಾಷ್ಟ್ರದ ಸುಂದರ್ ಸಿಂಗ್(ತೃತೀಯ), ಬೀರೇಂದರ್ ಕುಮಾರ್(ನಾಲ್ಕನೇ), ಮನೋಜ್ ಸಿಂಗ್(ಐದನೇ), ರವಿ ದಾಸ್(ಆರನೇ), ಕರ್ನಾಟಕದ ಕನಕಪ್ಪ ದೊನ್ನಿ(ಏಳನೇ), ಸಂತೋಷ್(ಎಂಟನೇ), ಮಹಾರಾಷ್ಟ್ರದ ಕಾಂತಿಲಾಲ್ ಕೆ.(ಒಂಭತ್ತನೇ) ಮತ್ತು ಅಮಿತ್ ರಮೇಶ್ ಪಾಟೀಲ್(ಹತ್ತನೇ) ಸ್ಥಾನ ಗಳಿಸಿದ್ದಾರೆ.
ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ.ಗಳು, ದ್ವಿತೀಯ ಬಹುಮಾನ 40 ಸಾವಿರ ರೂ.ಗಳು, ತೃತೀಯ ಬಹುಮಾನ 30 ಸಾವಿರ ರೂ.ಗಳು, ನಾಲ್ಕನೇ ಬಹುಮಾನ 20 ಸಾವಿರ ರೂ.ಗಳು, ಐದನೇ ಬಹುಮಾನ 10 ಸಾವಿರ ರೂ.ಗಳು, ಆರರಿಂದ ಹತ್ತನೇ ಸ್ಥಾನ ಗಳಿಸಿದವರಿಗೆ ತಲಾ 2 ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಮಹಿಳೆಯರ 6 ಕಿ.ಮೀ. ಗುಡ್ಡಗಾಡು ಓಟದ ಸ್ಪರ್ಧೆಯ ವಿಜೇತರು: ಆಳ್ವಾಸ್ ಸಂಸ್ಥೆಯ ಶೀತಲ್ ಬಿ.(ಪ್ರಥಮ), ನಿಟ್ಟೆ ಸಂಸ್ಥೆಯ ಸುಮಾ(ದ್ವಿತೀಯ), ಆಳ್ವಾಸ್ ಸಂಸ್ಥೆಯ ರಿಷು ಸಿಂಗ್(ತೃತೀಯ), ಶೃತಿ ಕೆ.ಸಿ.(ನಾಲ್ಕನೇ), ಮೈಸೂರಿನ ಅರ್ಚನಾ ಕೆ.ಎಂ.(ಐದನೇ), ಆಳ್ವಾಸ್ ಸಂಸ್ಥೆಯ ಪ್ರಿಯಾ(ಆರನೇ), ಪೂಜಾ ಎಸ್. ಪಾಟೀಲ್(ಏಳನೇ), ಅಥಣಿಯ ಶ್ರೀದೇವಿ ಬಿ.(ಎಂಟನೇ), ನಿಟ್ಟೆ ಸಂಸ್ಥೆಯ ಭೂಮಿಕಾ(ಒಂಭತ್ತನೇ) ಮತ್ತು ಆಳ್ವಾಸ್ ಸಂಸ್ಥೆಯ ಪ್ರಿಯಾಂಕಾ(ಹತ್ತನೇ) ಸ್ಥಾನ ಗಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ 30 ಸಾವಿರ ರೂ.ಗಳು, ದ್ವಿತೀಯ ಬಹುಮಾನ 20 ಸಾವಿರ ರೂ.ಗಳು, ತೃತೀಯ ಬಹುಮಾನ 10 ಸಾವಿರ ರೂ.ಗಳು, ನಾಲ್ಕನೇ ಬಹುಮಾನ 5 ಸಾವಿರ ರೂ.ಗಳು, ಐದನೇ ಬಹುಮಾನ 3 ಸಾವಿರ ರೂ.ಗಳು, ಆರರಿಂದ ಹತ್ತನೇ ಸ್ಥಾನ ಗಳಿಸಿದವರಿಗೆ ತಲಾ 2 ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಹುಮಾನಗಳನ್ನು ವಿತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ