ಮುಖ್ಯಮಂತ್ರಿಗಳ ದಂಗೆ ಹೇಳಿಕೆ ಖಂಡಿಸಿ ಪ್ರತಿಭಟನೆ

ದಾವಣಗೆರೆ:

       ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಯಡಿಯೂರಪ್ಪನವರ ವಿರುದ್ಧ ದಂಗೆ ಏಳಬೇಕೆಂದು ಹೇಳಿಕೆ ನೀಡಿರುವುದನ್ನು ಖಂಡಿಸಿ, ನಗರದಲ್ಲಿ ಶುಕ್ರವಾರ ಬಿಜೆಪಿಯ ಉತ್ತರ ಮತ್ತು ದಕ್ಷಿಣ ಮಂಡಲಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

         ನಗರದ ಗಾಂಧೀ ವೃತ್ತದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರುಗಳ ವಿರುದ್ಧ ಘೋಷಣೆ ಕೂಗಿ, ಇವರಿಬ್ಬರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

         ಈ ಸಂದರ್ಭದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕಾನೂನು ಬಾಹೀರ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ಹೆಚ್‍ಡಿಕೆಗೆ ಬಿಜೆಪಿ ವಿರುದ್ಧ ಅಸಮಾಧಾನವಿದ್ದರೆ, ಒಳ್ಳೆಯ ರೀತಿಯಲ್ಲಿಯೇ ವ್ಯಕ್ತಪಡಿಸಲಿ ಅದನ್ನು ಬಿಟ್ಟು ಈ ತರಹ ಗೂಂಡಾವರ್ತನೆ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ಮೂರು ಜಿಲ್ಲೆಗಳಿಗೆ ಮಾತ್ರ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಭಾವ ಇದೆ. ಆದರೆ, ರಾಜ್ಯಾದ್ಯಂತ ಬಿ.ಎಸ್. ಯಡಿಯೂರಪ್ಪನವರ ಪ್ರಭಾವವಿದೆ. ಇದೇ ರೀತಿ ಕುಮಾರಸ್ವಾಮಿ ಅವರು ಅಸಮಂಜಸ ಹೇಳಿಕೆ ನೀಡುತ್ತಾ ಹೋದರೆ ರಾಜ್ಯದ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

        ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಕುಮಾರಸ್ವಾಮಿ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಅವರ ಹೇಳಿಕೆ ಸಂವಿಧಾನ ಬಾಹೀರವಾಗಿದ್ದು, ಯಡಿಯೂರಪ್ಪನವರ ವಿರುದ್ಧ ದಂಗೆ ಏಳಿ ಎಂಬುದಾಗಿ ಹೇಳಿರುವುದು ಅತ್ಯಂತ ನೀಚತನದ ಮಾತಾಗಿದೆ. ಬಿ.ಎಸ್. ಯಡಿಯೂರಪ್ಪನವರ ಹಿಂದೆ 104 ಶಾಸಕರು, 17 ಸಂಸದರು ಸೇರಿದಂತೆ ರಾಜ್ಯದ ಜನರು ಇದ್ದಾರೆ. ಕುಮಾರಸ್ವಾಮಿ ಅವರ ಗೊಡ್ಡು ಬೆದರಿಕೆಗೆ ನಾವೆಂದು ಹೆದರಲ್ಲ ಎಂದರು.

       ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೆಚ್.ಸಿ. ಜಯಮ್ಮ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಗೂಂಡಾವರ್ತನೆ ಮೂಲಕ ಸಂವಿಧಾನಕ್ಕೆ ಮತ್ತು ರಾಜ್ಯದ ಜನತೆಗೆ ಅಪಮಾನ ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆಯೂ ಇಲ್ಲ. ತಕ್ಷಣವೇ ತಾವು ಬಳಸಿರುವ ಮಾತನ್ನು ಮನನ ಮಾಡಿಕೊಂಡು ಹೇಳಿಕೆಯನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದರು.

       ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಹೆಚ್.ಎನ್. ಶಿವಕುಮಾರ್, ಬಿ.ರಮೇಶ್ ನಾಯ್ಕ, ಎನ್.ರಾಜಶೇಖರ್, ಖಜಾಂಚಿ ಹೇಮಂತ್‍ಕುಮಾರ್, ಮುಖಂಡರುಗಳಾದ ವೈ.ಮಲ್ಲೇಶ್, ಟಿಂಕರ್ ಮಂಜಣ್ಣ, ಪ್ರಭು ಕಲ್ಬುರ್ಗಿ, ಶಾಮನೂರು ಲಿಂಗರಾಜ, ಪಿ.ಸಿ. ಶ್ರೀನಿವಾಸ್, ಡಿ.ಕೆ.ಕುಮಾರ್, ಸೋಗಿ ಶಾಂತಕುಮಾರ್, ಹೆಚ್.ಎನ್.ಗುರುನಾಥ್, ಜಗದೀಶ್, ಮುಕುಂದಪ್ಪ, ಎಲ್.ಡಿ.ಗೋಣೆಪ್ಪ, ಚೇತನಾ ಕುಮಾರ್, ದೇವಿರಮ್ಮ ರಾಮಚಂದ್ರಪ್ಪ, ಗೌತಮ್ ಜೈನ್, ಉಮೇಶ್ ಪಾಟೀಲ್, ಶಿವರಾಜ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link