ನೊಂದ ಮಹಿಳೆ ನೇಣಿಗೆ ಶರಣು

ಬೆಂಗಳೂರು

      ಮದುವೆಯಾಗಿ ಐದೂವರೆ ವರ್ಷ ಕಳೆದರೂ ಮಕ್ಕಳಾಗದಿದ್ದರಿಂದ ನೊಂದ ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ದುರ್ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ರವೀಂದ್ರ ನಗರದಲ್ಲಿ ನಡೆದಿದೆ.

       ಆತ್ಮಹತ್ಯೆ ಮಾಡಿಕೊಂಡವರನ್ನು ರವೀಂದ್ರ ನಗರದ ರಮಾದೇವಿ (27)ಎಂದು ಗುರುತಿಸಲಾಗಿದೆ. ಶ್ರೀನಿವಾಸಪುರದ ಎಳತ್ತೂರು ಮೂಲದ ರಮಾದೇವಿ, ತಮ್ಮದೇ ಗ್ರಾಮದ ಮಾರುತಿ ಎಂಬುವರನ್ನು ಐದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು.

       ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ರಮಾದೇವಿ ಹಾಗೂ ಸಾಫ್ಟ್‍ವೇರ್ ಕಂಪನಿಯಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಮಾರುತಿ, ರವೀಂದ್ರನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.

       ವರ್ಷಗಳು ಕಳೆದರೂ ಮಕ್ಕಳಾಗದಿದ್ದರಿಂದ ಹಲವು ಆಸ್ಪತ್ರೆಗಳಿಗೆ ತೋರಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗದಿದ್ದರಿಂದ ರಮಾದೇವಿ ಬೇಸತ್ತಿದ್ದರು. ಈ ನಡುವೆ ಕಳೆದ ಗಣೇಶನ ಹಬ್ಬಕ್ಕೆ ತವರಿನವರು ಮನೆಗೆ ಕರೆಯಲಿಲ್ಲ ಎಂದು ನೊಂದಿದ್ದು, ಈ ಸಂಬಂಧ ಶುಕ್ರವಾರ ಪತಿಯ ಜತೆ ಜಗಳವಾಡಿಕೊಂಡಿದ್ದರು.

       ಪತಿ ಕೆಲಸಕ್ಕೆ ಹೋಗಿ ರಾತ್ರಿ 7ರ ವೇಳೆ ಮನೆಗೆ ವಾಪಸ್ಸಾಗಿ ನೋಡಿದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಬಾರಿ ಬಾಗಿಲು ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡ ಮಾರುತಿ ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ರಮಾದೇವಿ ನೇಣಿಗೆ ಶರಣಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿದ ಬಾಗಲಗುಂಟೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮೃತದೇಹ ಪತ್ತೆ      ಬೈಯಪ್ಪನಹಳ್ಳಿಯ ಕೃಷ್ಣಯ್ಯನ ಪಾಳ್ಯ ಬಸ್‍ನಿಲ್ದಾಣದ ಬಳಿ ಕುಳಿತ ಮಗ್ಗಲಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸುಮಾರು 55 ವರ್ಷ ವಯಸ್ಸಿನ ಮೃತ ವ್ಯಕ್ತಿಯ ಹೆಸರು, ವಿಳಾಸ ಪತ್ತೆಯಾಗಿಲ್ಲ. ಬೈಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link