ಬೆಂಗಳೂರು
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಕಂಠಪೂರ್ತಿ ಕುಡಿಸಿ ವೇಲ್‍ನಿಂದ ಕತ್ತು ಬಿಗಿದು ಕೊಲೆ ಮಾಡಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕದ ವೀರಸಾಗರದ ಮಮತಾ (23) ಮತ್ತಾಕೆಯ ಪ್ರಿಯಕರ ಯಶವಂತಪುರದ ಬಿಕೆ ನಗರದ ಅಪ್ಪು (24) ಬಂಧಿತ ಆರೋಪಿಗಳಾಗಿದ್ದಾರೆ.ಯಶವಂತಪುರದ ಬಿಕೆ ನಗರದ ಮಮತಾಳನ್ನು 5 ವರ್ಷದ ಹಿಂದೆಯೇ ತಮಿಳುನಾಡಿನ ಮೂಲದ ಗಾರೆ ಮೇಸ್ತ್ರಿ ಸಗಾಯ್ ರಾಜ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.ವಿವಾಹದ ನಂತರ ಸಗಾಯ್ ರಾಜ್ ಪತ್ನಿಯೊಂದಿಗೆ ವೀರಸಾಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ದಂಪತಿಗೆ ಮಕ್ಕಳಿರಲಿಲ್ಲ.
ಮದುವೆಗೂ ಮುನ್ನವೆ ಮಮತಾ ತನ್ನ ಮನೆ ಬಳಿಯೇ ಇದ್ದ ವಿವಾಹಿತ ಅಪ್ಪು ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಆನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಇದನ್ನು ತಿಳಿದ ಮನೆಯವರು ಮಮತಾಳಿಗೆ ಬುದ್ದಿ ಹೇಳಿ ಸಗಾಯ್‍ರಾಜ್ ಜತೆ ಮದುವೆ ಮಾಡಿಕೊಟ್ಟಿದ್ದರು.
ಮದುವೆಯ ನಂತರವೂ ಅಪ್ಪು ಹಾಗೂ ಮಮತಾ ಸಂಬಂಧ ಮುಂದುವರೆದಿತ್ತು.ಪತಿ ಸಗಾಯ್ ರಾಜ್‍ಗೆ ಮಮತಾಳ ಅಕ್ರಮ ಸಂಬಂಧ ತಿಳಿದು ಗಲಾಟೆ ಮಾಡುತ್ತಿದ್ದ. ಇದರಿಂದ ರೋಸಿ ಹೋದ ಮಮತಾ ಕಳೆದ ಸೆ. 18 ರಂದು ರಾತ್ರಿ ಅಪ್ಪುನನ್ನು ಮನೆಗೆ ಕರೆಸಿಕೊಂಡು ಸಗಾಯ್‍ರಾಜ್‍ಗೆ ಇಬ್ಬರು ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಸುತ್ತಾಡಿಸಿ ಸಂಭ್ರಮ್ ಕಾಲೇಜು ಬಳಿ ಇರುವ ನಿರ್ಮಾಣ ಹಂತದ ಕಟ್ಟಡದ ಸಮೀಪ ಮಮತಾಳ ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಮೃತದೇಹವನ್ನು ಸಗಾಯ್‍ರಾಜ್ ವಾಸವಿದ್ದ ಮನೆಯ ಸಮೀಪದ ಪೊದೆಯೊಂದರಲ್ಲಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ ಯಲಹಂಕ ಉಪನಗರ ಪೊಲೀಸ್ ಇನ್ಸ್‍ಪೆಕ್ಟರ್ ಮಂಜುನಾತ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
