ಬೆಂಗಳೂರು
ಜನಸಾಮಾನ್ಯರ ನೋವುಗಳನ್ನು ದೂರ ಮಾಡಲು ದೇವರು ತಮಗೆ ಪುನರ್ಜನ್ಮ ನೀಡಿ ಮುಖ್ಯಮಂತ್ರಿಯಾಗುವ ಅವಕಾಶ ನೀಡಿದ್ದಾನೆ. ರೈತ ಕುಟುಂಬಗಳು ದುಡುಕಿ ಪ್ರಾಣ ಕಳೆದು ಕೊಳ್ಳಬಾರದು. ತಾಳ್ಮೆ ವಹಿಸಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ
ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 1650 ಕೋಟಿ ರೂಪಾಯಿ ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಡವರ, ರೈತರ ಸಂಕಷ್ಟಗಳನ್ನು ತೀರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಸ್ವಲ್ಪ ಸಮಾಧಾನದಿಂದ ಕಾಯುವಂತೆ ತಿಳಿಸಿದರು.
ರಾಜ್ಯದಲ್ಲಿ 44 ಲಕ್ಷ ರೈತ ಕುಟುಂಬಗಳು ಮಾಡಿದ್ದ 40 ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲಾಗಿದೆ. ಖಾಸಗಿ ಲೇವಾದೇವಿದಾರರ ಅಕ್ರಮ ಬಡ್ಡಿ ವಸೂಲಾತಿಗೂ ಶೀಘ್ರದಲ್ಲೇ ಕಡಿವಾಣ ಬೀಳಲಿದ್ದು, ಯಾರೂ ಅಂಜುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಅವರು ಕರೆ ನೀಡಿದರು.
ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ವಿರೋಧಪಕ್ಷಗಳ ಟೀಕೆಗೆ ತಮ್ಮ ಕಾರ್ಯಕ್ರಮಗಳೆ ಉತ್ತರ ನೀಡುತ್ತಿವೆ. ರಾಜ್ಯದ ಸಮಗ್ರ ಅಭಿವೃದ್ಧಿ ಸರ್ಕಾರದ ಗುರಿ. ಜನರ ಸಮಸ್ಯೆಗಳನ್ನು ಬಗೆಹರಿಸಲು ತಮ್ಮ ಕೈಯಲ್ಲಿ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಆ ಕ್ಷಣವೇ ಅಧಿಕಾರದಿಂದ ನಿರ್ಗಮಿಸಲು ಸಿದ್ಧ. ಯಾರಿಂದಲೂ ದಬ್ಬಿಸಿಕೊಂಡು ಹೋಗುವ ಜಾಯಮಾನ ತಮ್ಮದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಹುಸಿ ಆರೋಪಗಳಿಂದ ತಮ್ಮ ನೈಜ, ಜನಪರ ಕಾಳಜಿಯನ್ನು ಮರೆಮಾಚಲು ಸಾಧ್ಯವಿಲ್ಲ. ಹಿಂದಿನ ಸರ್ಕಾರದ ಯೋಜನೆಗಳನ್ನು ಮುಂದುವರಿಸಿ ಹತ್ತಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಡೀಸೆಲ್, ಪೆಟ್ರೋಲ್ ದರ ಕಡಿಮೆ ಇದೆ. ಎಲ್ಲಾ ಆರ್ಥಿಕ ಇತಿ ಮಿತಿಗಳ ನಡುವೆ ರೈತರ ಸಾಲ ಮನ್ನಾ ಮಾಡಿದ್ದು ಮುಂಬರುವ ಜುಲೈ ತಿಂಗಳೊಳಗಾಗಿ ರಾಷ್ಟ್ರೀಯ ಬ್ಯಾಂಕ್ಗಳ ಸುಸ್ತಿ ಸಾಲ ತೀರುವಳಿಯಾಗಲಿದೆ ಎಂದರು.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯಮಗಳ ಸ್ಥಾಪನೆಗೆ ಸರ್ಕಾರ ಗಮನ ಹರಿಸುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. 2006ಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾರಂಭಗೊಂಡರೂ ಇಲ್ಲಿ ಕಲಿಯುವ ಬಡ ಮಕ್ಕಳು ಪ್ರಯೋಗಾಲಯಕ್ಕೆ ಖಾಸಗಿ ಕಾಲೇಜಿಗೆ ಅಲೆಯುವ ಪರಿಸ್ಥಿತಿ ಇದೆ. ಹಿಂದೆ ಮಾಡಿದ ಯೋಜನೆಗಳು ಹಾಗೇ ಇವೆ. ಅವುಗಳನ್ನು ಪೂರ್ಣಗೊಳಿಸಿ ಜನ್ಮ ನೀಡಿದ ನೆಲದ ಜನರ ಋಣ ತೀರಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ನೈತಿಕ ಮಾರ್ಗ ಬಿಟ್ಟು ಕೆಲಸ ಮಾಡಿದರೆ ದಂಗೆ ಏಳಿ ಎಂದು ಈ ಹಿಂದೆ ಜಿಲ್ಲೆಗೆ ಬಂದಾಗ ಹೇಳಿದ್ದೆ. ತಾವು ತಪ್ಪು ಮಾಡಿದರೂ ತಮ್ಮ ವಿರುದ್ದವೂ ದಂಗೆ ಏಳಿ ಎಂಬ ಅರ್ಥದಲ್ಲಿ ಈ ಹಿಂದೆ ಆಡಿದ ಮಾತಿಗೆ ಅಪಾರ್ಥ ಕಲ್ಪಿಸಿ ಬಿಜೆಪಿ ಪ್ರತಿಭಟನೆ ಮಾಡಿದ್ದು, ಸರ್ಕಾರ ಅಸ್ಥಿರ ಗಳಿಸುವುದೊಂದೆ ಆ ಪಕ್ಷದ ಕಾರ್ಯಕ್ರಮವಾಗಿದೆ. ಆದರೆ ತಾವು ಇದಾವುದಕ್ಕೂ ಅಂಜುವುದಿಲ್ಲ. ಸರ್ಕಾರ ಬೀಳುವ ಯಾವುದೇ ಆತಂಕವೂ ಇಲ್ಲ. ಭಾರತೀಯ ಜನತಾ ಪಕ್ಷ ಪ್ರಜ್ಞಾವಂತಿಕೆಯಿಂದ ವರ್ತಿಸಬೇಕು ಎಂದು ಹೇಳಿದರು.
ತಮ್ಮನ್ನು ಪ್ರತಿದಿನ ಸಾವಿರಾರು ಮಂದಿ ನೋಡಿಕೊಂಡು ಬರುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಬಗೆಹರಿಸಿದ್ದೇನೆ. ಆಸಹಾಯಕರ ಪಾಲಿಗೆ ಬೆಳಕಾಗಿ ಬದುಕಬೇಕೆಂಬುದೆ ತಮ್ಮ ಧ್ಯೇಯ ಎಂದು ಅವರು ತಿಳಿಸಿದರು.
ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಹಾಸನ ಕ್ಷೇತ್ರದ ಶಾಸಕರು ಪತ್ತೆ ಇಲ್ಲ. ಅದು ಸರಿಯಾದ ನಡವಳಿಕೆಯಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್ನಲ್ಲಿ ಹಾಸನದ ರಿಂಗ್ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂಪಾಯಿ ನೀಡಿದಾಗ, ವಿರೋಧ ಪಕ್ಷಗಳು ಟೀಕಿಸಿದಾಗ ಒಂದೂ ಮಾತನಾಡದೆ, ಕ್ಷೇತ್ರಕ್ಕೆ ಹಣ ನೀಡಿದಾಗ ಕನಿಷ್ಠ ಕೃತಜ್ಞತೆ ಸಲ್ಲಿಸದ ಮನಃಸ್ಥಿತಿಯ ಶಾಸಕರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಿಕೊಟ್ಟ ಸಚಿವರುಗಳಿಗೆ ಕೃತಜ್ಞತೆ ಅರ್ಪಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








