ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದೃಷ್ಟಿ ದೋಷ ಸಮಸ್ಯೆ ನಿವಾರಣೆಗಾಗಿ ಇಡೀ ರಾಜ್ಯದಲ್ಲೆ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ. “ನಮ್ಮ ಕಣ್ಣು ನಮ್ಮ ದೊಡ್ಡಬಳ್ಳಾಪುರ” ಘೋಷವಾಕ್ಯದಡಿ ದೃಷ್ಟಿ ದೋಷ ಸಮಸ್ಯೆ ಪತ್ತೆ ಮಾಡಲು ನುರಿತ ವೈದ್ಯಕೀಯ ತಂಡ ಮನೆ ಬಾಗಿಲಿಗೆ ಭೇಟಿ ನೀಡಲಿದೆ. ಜತೆಗೆ ಉಚಿತ ಚಿಕಿತ್ಸೆ ಹಾಗೂ ಕನ್ನಡಕಗಳನ್ನು ವಿತರಿಸುವ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮ ಆರಂಭವಾಗಿದೆ.
ಎಸ್ಸಿಲಾರ ವಿಷನ್ ಪೌಂಡೇಷನ್ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದೃಷ್ಟಿ ದೋಷ ಹೊಂದಿರುವವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಯೋಗೇಶ್ ಗೌಡ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಹೆಚ್ಚುವರಿ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್, ಎಸ್ಸಿಲಾರ್ ವಿಷಯ್ ಪೌಂಡೇಷನ್ನ ಚೀಫ್ ಮಿಷನ್ ಆಫಿಸರ್ ಜಯಂತ್ ಭುವರಾಘನ್, ಐಚ ಮೊಕ್ದಹಿ ಮತ್ತು ದೃಷ್ಟಿ ಕಣ್ಣಿನ ಆಸ್ಪತ್ರೆ ನಿರ್ದೇಶಕ ಅಂಜಲಿ ಜೋಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ಸಿಲಾರ ವಿಷನ್ ಪೌಂಡೇಷನ್ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜತೆ ಸಹಯೋಗ ಹೊಂದಿರುವ ಸಂಸ್ಥೆಯಾಗಿದೆ. “ ನಮ್ಮ ಕಣ್ಣು ನಮ್ಮ ದೊಡ್ಡಬಳ್ಳಾಪುರ “ ಎನ್ನುವ ಘೋಷವಾಕ್ಯದಡಿ ಡೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲಾ ನಿವಾಸಿಗಳಲ್ಲಿ ಕಣ್ಣಿನ ಆರೈಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ.
ಈ ಕಾರ್ಯಕ್ರಮ ಜಾರಿಗೆ ಎಸ್ಸಿಲಾರ ವಿಷನ್ ಪೌಂಡೇಷನ್ಗೆ ಸ್ವಯಂ ಸೇವಾ ಸಂಸ್ಥೆ ಪ್ರೇರಣಾ ಟ್ರಸ್ಟ್ ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ ಸಹಕಾರ ನೀಡುತ್ತಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲಾ ನಿವಾಸಿಗಳ ಕಣ್ಣನ್ನು ಪರೀಕ್ಷೆಗೊಳಪಡಿಸಿ ದೃಷ್ಟಿ ದೋಷ ಹೊಂದಿದ್ದರೆ ಅವುಗಳನ್ನು ಸರಿಪಡಿಸುವ ಮತ್ತು ಉಚಿತ ಕನ್ನಡಕಗಳನ್ನು ಒದಗಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ.
ಮುಂದಿನ 21 ರಿಂದ 24 ತಿಂಗಳ ಅವಧಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ 3,25,000 ಜನರಿಗೆ ಈ ಯೋಜನೆ ತಲುಪುವ ಗುರಿ ಹೊಂಡಲಾಗಿದೆ. ದೊಡ್ಡಬಳ್ಳಾಪುರ ನಗರದ 33 ವಾರ್ಡ್ಗಳು ಮತ್ತು ತಾಲ್ಲೂಕಿನ 300 ಹಳ್ಳಿಗಳ ಮನೆ ಮನೆಗೆ ನುರಿತ ತಜ್ಞರ ತಂಡ ಭೇಟಿ ನೀಡಿ ಕಣ್ಣಿನ ಸಾಮಾನ್ಯ ಪರೀಕ್ಷೆ ನಡೆಸಲಿದೆ. ದೃಷ್ಟಿ ಸಮಸ್ಯೆಗಳಿದ್ದರೆ ಸಮೀಪದ ಹಳ್ಳಿ ಅಥವಾ ವಾರ್ಡ್ಗಳಲ್ಲಿರುವ ಮೊಬೈಲ್ ಐ ಕ್ಯಾಂಪ್ನಲ್ಲಿ ಹೆಚ್ಚಿನ ಚಿಕಿತ್ಸೆ ದೊರಕಿಸಿಕೊಡಲು ದೃಷ್ಟಿ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ನೆರವಾಗಲಿದ್ದಾರೆ. ಅಗತ್ಯವುಳ್ಳವರಿಗೆ 15 ದಿನಗಳ ಒಳಗಾಗಿ ಅವರ ಮನೆಗೆ ಕನ್ನಡಕ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಉಚಿತ ಕಣ್ಣು ಪರೀಕ್ಷೆ ಜತೆಗೆ ತಂಡಗಳು ಉತ್ತಮ ದೃಷ್ಟಿಯ ಮಹತ್ವದ ಬಗ್ಗೆಯೂ ಅರಿವು ಮೂಡಿಸಲಿದೆ. ಜಾಗತಿಕವಾಗಿ ಮುಂದಿನ 2050ರ ವೇಳೆಗೆ ಸರಿಪಡಿಸಲಾಗದ ದೃಷ್ಟಿ ದೋಷ ಸಮಸ್ಯೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆಯನ್ನು ಎಸ್ಸಿಲಾರ ವಿಷನ್ ಪೌಂಡೇಷನ್ ಹೊಂದಿದೆ. ಈ ಯೋಜನೆ ಮೂಲಕ ಎಲ್ಲಾ ನಿವಾಸಿಗಳಿಗೆ ಕಣ್ಣು ಆರೈಕೆ ಜತೆಗೆ ಉತ್ತಮ ದೃಷ್ಟಿ ಮತ್ತು ಉತ್ತಮ ಬದುಕು ರೂಪಿಸುವ ಗುರಿಯೊಂದಿಗೆ ಈ ಯೋಜನೆ ಜಾರಿಗೆ ತಲಾಗಿದೆ.
ಎಸ್ಸಿಲಾರ ಇಂಟರ್ ನ್ಯಾಷನಲ್ನ ಚೀಫ್ ಮಿಷನ್ ಆಫಿಸರ್ ಶ್ರೀ ಜಯಂತ್ ಭುವರಾಘವನ್ ಅವರ ಪ್ರಕಾರ, ದೃಷ್ಟಿ ದೋಷ ಸಮಸ್ಯೆ ಜಗತ್ತಿನಲ್ಲಿ ಸರಿಪಡಿಸಲಾಗದ ಅತಿ ದೊಡ್ಡ ಅಂಗವೈಕಲ್ಯ. ಒಂದು ಜೊತೆ ಕನ್ನಡಕ ಜನರ ಬದುಕಿನಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದೆ. ಇಷ್ಟೇ ಅಲ್ಲದೇ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಕಾಣಬಹುದಾಗಿದೆ.
ಸಮಾಜ ಮತ್ತು ವ್ಯಕ್ತಿಯ ಅಭ್ಯುದಯಕ್ಕೆ ಕಾರಣವಾಗಲಿದೆ. ಹೀಗಾಗಿ ಈ ಪೀಳಿಗೆಯಲ್ಲಿ ದೃಷ್ಟಿ ದೋಷ ಸಮಸ್ಯೆಗಳನ್ನು ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ಈ ದಿಸೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಈ ಕಾರ್ಯಕ್ರಮ ಜಾರಿಗೊಳಿಸುವ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದ್ದು, ಉತ್ತಮ ಆರೋಗ್ಯ, ಉತ್ಪಾದಕತೆ ಮತ್ತು ಸಮೃದ್ಧ ಸಮಾಜ ನಿರ್ಮಾಣ ನಮ್ಮ ಆದ್ಯತೆಯಾಗಿದೆ ಎನ್ನುತ್ತಾರೆ.