ರಕ್ತದಾನದಿಂದ ಅಮೂಲ್ಯವಾದದನ್ನು ಗಳಿಸಿದ ಭಾವ

ದಾವಣಗೆರೆ:

       ನಾವು ನಮ್ಮಲ್ಲಿರುವ ಸಿರಿತನವನ್ನು ಖರ್ಚು ಮಾಡಿದಾಗ ಮಾತ್ರ ಆ ಸಿರಿತನ ಅನುಭವಕ್ಕೆ ಬರುತ್ತದೆ. ಅದೇ ರೀತಿ ನಮ್ಮ ದೇಹದಲ್ಲಿರುವ ರಕ್ತ ಎನ್ನುವ ಸಿರಿಯನ್ನು ದಾನ ಮಾಡಿದಾಗ ನಾವು ಏನೋ ಅತ್ಯಮೂಲ್ಯವಾದದನ್ನು ಗಳಿಸಿದ ಭಾವ ಹುಟ್ಟುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಭಿಪ್ರಾಯಪಟ್ಟರು.

       ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಯುವ ರೆಡ್‍ಕ್ರಾಸ್ ಘಟಕ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ರಕ್ತದಾನ ಅಮೂಲ್ಯ ದಾನ ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

       ಒಂದು ಪ್ಯಾಕೆಟ್(300 ಎಂ.ಎಲ್) ರಕ್ತದಾನ ಮಾಡುವುದರಿಂದ ಮೂರು ಜೀವವನ್ನು ಬದುಕಿಸಬಹುದು. ನಾವು ನಮ್ಮ ದೇಹದಿಂದ ರಕ್ತವನ್ನು ದಾನ ಮಾಡುವುದರಿಂದ ನೆಮ್ಮದಿಯ ಭಾವ ಪಡೆಯುತ್ತೇವೆ. ಹಾಗೆ ದಾನ ಮಾಡಿದ ರಕ್ತವನ್ನು ನಾವು ಒಂದು ದಿನದಲ್ಲೇ ಮರಳಿ ಪಡೆಯುತ್ತೇವೆ. ಆದ್ದರಿಂದ ರಕ್ತದಾನದಿಂದ ಯಾವುದೇ ಸಮಸ್ಯೆ ಇಲ್ಲ. ಅಪಘಾತದಂತಹ ಸಂದರ್ಭದಲ್ಲಿ ಯಾರೋ ಅಪರಿಚಿತರು ಕಾಪಾಡುತ್ತಾರೆ. ಹಾಗೆಯೇ ನಾವು ನೀಡುವ ರಕ್ತವೂ ಯಾರೋ ಅಗತ್ಯವಿರುವ ಅಪರಿಚಿತರನ್ನು ಕಾಪಾಡುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಎಲ್ಲರೂ ರಕ್ತದಾನ ಮಾಡುವ ಸಂಕಲ್ಪ ಹೊಂದಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

       ರೆಡ್‍ಕ್ರಾಸ್ ಘಟಕದ ವಿಶೇಷಾಧಿಕಾರಿ ಪ್ರೊ.ಪ್ರದೀಪ್.ಬಿ.ಎಸ್ ಮಾತನಾಡಿ, ರೆಡ್‍ಕ್ರಾಸ್ ಘಟಕದ ವತಿಯಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಅಡಿಯಲ್ಲಿ 110 ಕಾಲೇಜುಗಳು ಬರುತ್ತವೆ. ಈ ಕಾಲೇಜುಗಳ ಪೈಕಿ ರೆಡ್‍ಕ್ರಾಸ್ ನಿಯಮಾನುಸಾರ ಜಿಲ್ಲೆಯ ಒಂದು ಕಾಲೇಜನ್ನು ಲೀಡ್ ಕಾಲೇಜೆಂದು ಘೋಷಣೆ ಮಾಡಬಹುದಾಗಿದ್ದು, ಈ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಜಿಲ್ಲೆಯ ಲೀಡ್ ಕಾಲೇಜಾಗಿ ಆಯ್ಕೆಯಾಗಿದೆ ಎಂದರು.

       ಶಶಿ ಎಜ್ಯುಕೇಷನ್ ಟ್ರಸ್ಟ್‍ನ ಅಧ್ಯಕ್ಷ ಶಶಿಕಲಾ ಎ.ಆರ್ ಮಾತನಾಡಿ, ವಿದ್ಯಾರ್ಥಿಗಳು ರಕ್ತದಾನದ ಮಹತ್ವ ಅರಿತುಕೊಂಡು ರಕ್ತದಾನದಲ್ಲಿ ಪಾಲ್ಗೊಳ್ಳಬೇಕು. ಹಾಗೂ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕೆಂದು ಕಿವಿಮಾತು ಹೇಳಿದರು.

       ರೆಡ್‍ಕ್ರಾಸ್ ಸಂಚಾಲಕರಾದ ಸೋಮಶೇಖರಪ್ಪ ಸ್ವಾಗತಿಸಿದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಂಗಸ್ವಾಮಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಛೇರ್ಮನ್ ಡಾ.ಎ.ಎಂ ಶಿವಕುಮಾರ್, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಡಾ.ಸವಿತಾದೇವಿ ಎಸ್.ಎಂ, ಡಾ.ಸುಧೀಂದ್ರ, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್ ಭಜಂತ್ರಿ, ಪ್ರೊ.ಲತಾ ಎಸ್.ಎಂ. ಮತ್ತಿತರರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link